ADVERTISEMENT

ರೈತರಲ್ಲಿ ಉತ್ಸಾಹ ಮೂಡಿಸಿದ ಮಳೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 13:26 IST
Last Updated 28 ಜೂನ್ 2019, 13:26 IST
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಆಕಾಶದಲ್ಲಿ ಶುಕ್ರವಾರ ಮಧ್ಯಾಹ್ನ ದಟ್ಟವಾದ ಕಾರ್ಮೋಡ ಕವಿದಾಗ ಹೀಗೆ ಕಂಡುಬಂತು.
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಆಕಾಶದಲ್ಲಿ ಶುಕ್ರವಾರ ಮಧ್ಯಾಹ್ನ ದಟ್ಟವಾದ ಕಾರ್ಮೋಡ ಕವಿದಾಗ ಹೀಗೆ ಕಂಡುಬಂತು.   

ಜೊಯಿಡಾ:ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಬುಧವಾರದಿಂದ ಸತತವಾಗಿ ಆಗುತ್ತಿರುವ ಉತ್ತಮ ಮಳೆಯು ರೈತರಲ್ಲಿ ಉತ್ಸಾಹ ತಂದಿದೆ.

ತಾಲ್ಲೂಕಿನ ಅಣಶಿ, ಉಳವಿ, ಕುಂಬಾರವಾಡಾ, ಜೊಯಿಡಾ, ಪ್ರಧಾನಿ ಹಾಗೂ ಡಿಗ್ಗಿ ಭಾಗಗಳಲ್ಲಿ 36 ಗಂಟೆಗಳಲ್ಲಿ ಸರಾಸರಿ 42 ಮಿಲಿಮೀಟರ್ ಮಳೆಯಾಗಿದೆ. ರಾಮನಗರ, ಗುಂದ, ಅಸು, ಅನಮೋಡ ಭಾಗದಲ್ಲಿ ಸ್ವಲ್ಪ ಕಡಿಮೆ ಮಳೆಯಾಗಿದೆ.

ಗುರುವಾರ ಹಾಗೂ ಶುಕ್ರವಾರ ತಾಲ್ಲೂಕಿನೆಲ್ಲೆಡೆ ವ್ಯಾಪಕ ಮಳೆಯಾಗಿದೆ. ಹೀಗಾಗಿ ಹೊಲಗದ್ದೆಗಳಿಗೆ ನೀರನ್ನು ಒದಗಿಸುವ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಮುಂಗಾರು ಅವಧಿ ಆರಂಭವಾಗಿ ಹಲವು ದಿನಗಳ ನಂತರ ಇದೇ ಮೊದಲ ಬಾರಿಗೆ ಮಳೆಗಾಲದ ಅನುಭವವಾಗುತ್ತಿದೆ ಎಂದುಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಕುಂಡಲ, ಡಿಗ್ಗಿ, ಉಳವಿ ಭಾಗದ ಹಲವು ಕಡೆಗಳಲ್ಲಿ ಮರಗಳು ರಸ್ತೆಯ ಮೇಲೆ ಬಿದ್ದಿವೆ. ಇದರಿಂದ ಸಾರ್ವಜನಿಕರ ಸಂಪರ್ಕಕ್ಕೆ ತೊಂದರೆ ಉಂಟಾಗಿದೆ. ತಾಲ್ಲೂಕಿನ ಬಾಜರಕುಣಂಗ, ಕ್ಯಾಸಲರಾಕ್, ತೇರಾಳಿ ಭಾಗದ ಕೆಲವು ಗ್ರಾಮಗಳಲ್ಲಿ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು ಸಮಸ್ಯೆಯಾಗಿದೆ.

ತಾಲ್ಲೂಕಿನ ನಂದಿಗದ್ದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅವುರ್ಲಿ ಗ್ರಾಮಸ್ಥರು ಮಳೆಗಾಗಿಸೋಮೇಶ್ವರ ದೇವಸ್ಥಾನದಲ್ಲಿ ಗುರುವಾರ ಸತತ 12 ಗಂಟೆ ಭಜನೆ ಮಾಡಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಧಾರಕಾರವಾಗಿ ಮಳೆ ಸುರಿಯಿತು ದೇವಸ್ಥಾನ ಟ್ರಸ್ಟ್ಸಮಿತಿಕಾರ್ಯದರ್ಶಿ ಸುನೀಲ.ಪಿ.ಶೇಟಕರಸಂತಸ ವ್ಯಕ್ತಪಡಿಸಿದರು.

ಕಾರವಾರದಲ್ಲಿ ಬಿರುಸಾದ ಮಳೆ: ಜಿಲ್ಲಾ ಕೇಂದ್ರದಲ್ಲಿ ಶುಕ್ರವಾರ ಜೋರಾಗಿ ಮಳೆಯಾಯಿತು.ಬೆಳಿಗ್ಗೆ 11 ಗಂಟೆಯಾದರೂ ಮುಂಜಾನೆ ಆರು ಗಂಟೆಯ ವಾತಾವರಣವೇ ಕಂಡುಬಂತು. ಆಗಾಗ ಬಿರುಸಾಗಿ ಮಳೆ ಸುರಿದು ಚರಂಡಿಗಳು ತುಂಬಿ ಹರಿದವು. ಕೆಎಚ್‌ಬಿ ಕಾಲೊನಿ, ನಂದನಗದ್ದಾ ಭಾಗದಲ್ಲಿ ಕೆಲವೆಡೆ ರಸ್ತೆಯ ಮೇಲೆ ನೀರು ನಿಂತು ಸಾರ್ವಜನಿಕರು ಸಂಚರಿಸಲು ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.