ಕುಮಟಾ: ‘ಮೂರು ದಿವಸಗಳಿಂದ ಸತತ ಸುರಿಯುತ್ತಿರುವ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗುತ್ತಿರುವ ಕುಮಟಾ–ಶಿರಸಿ ರಸ್ತೆಯ ಅಲ್ಲಲ್ಲಿ ನಡೆಯುವ ಕಾಮಗಾರಿಗಳಿಂದಾಗಿ ರಾತ್ರಿ ಹೊತ್ತು ಲಘು ವಾಹನ ಸವಾರರು ಅಪಾಯಕ್ಕೀಡಾಗುವ ಸಾಧ್ಯತೆಯಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಜಾನನ ಪೈ ತಿಳಿಸಿದ್ದಾರೆ.
ಮಾಹಿತಿ ನೀಡಿದ ಅವರು, ‘ಜೋರು ಮಳೆ ಸುರಿದರೆ ಕತಗಾಲ ಬಳಿ ರಸ್ತೆ ಜಲಾವೃತಗೊಂಡು ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಸೇತುವೆ ಕಾಮಗಾರಿಗಾಗಿ ಅಲ್ಲಲ್ಲಿ ರಸ್ತೆಯ ತಿರುವನ್ನು ಬದಲಿಸಿರುವುದರ ಬಗ್ಗೆ ಅರಿವಿಲ್ಲದ ಲಘು ವಾಹನ ಚಾಲಕರು ರಾತ್ರಿ ಹೊತ್ತು ಅಪಾಯಕ್ಕೀಡಾಗುವ ಸಾಧ್ಯತೆ ಹೆಚ್ಚಾಗಿದೆ’ ಎಂದರು.
‘ಎಷ್ಟೋ ಕಡೆ ಸೇತುವೆ ನಿರ್ಮಾಣಕ್ಕಾಗಿ ಅದರ ಪಕ್ಕದಲ್ಲಿ ನಿರ್ಮಿಸಿದ ತಾತ್ಕಾಲಿಕ ರಸ್ತೆ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಅಲ್ಲಿ ಪ್ರಯಾಣಿಕರ ವಾಹನ ಕೆಸರಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ. ಹೆದ್ದಾರಿ ನಿರ್ವಹಿಸುವವರು ಇಂಥ ಸ್ಥಳಗಳಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ, ಸಹಾಯಕ್ಕಾಗಿ ಅಗತ್ಯ ಸಿಬ್ಬಂದಿ ನಿಯೋಜಿಸುವುದು ಅಗತ್ಯ. ಶಿರಸಿಯಿಂದ ಕುಮಟಾಕ್ಕೆ ರಾತ್ರಿ ಪ್ರಯಾಣ ಕೈಗೊಳ್ಳುವವರು ಮುಂಚಿತವಾಗಿ ಮಳೆ ಹಾಗೂ ರಸ್ತೆ ಸುರಕ್ಷತೆಯ ಮಾಹಿತಿ ಪಡೆದುಕೊಳ್ಳುವುದು ಸೂಕ್ತ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.