ADVERTISEMENT

ಮಳೆ–ಗಾಳಿಯ ಆರ್ಭಟಕ್ಕೆ ಜನ ತತ್ತರ

ವಾಸದ ಮನೆಗಳಿಗೆ ಹಾನಿ; ಕೃಷಿ ಬೆಳೆಗಳು ನಷ್ಟ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 13:06 IST
Last Updated 5 ಆಗಸ್ಟ್ 2020, 13:06 IST
ಶಿರಸಿಯ ಗ್ರಾಮೀಣ ಪ್ರದೇಶದಲ್ಲಿ ಮನೆಯೊಂದರ ಮೇಲೆ ಮರ ಮುರಿದು ಬಿದ್ದಿರುವುದು
ಶಿರಸಿಯ ಗ್ರಾಮೀಣ ಪ್ರದೇಶದಲ್ಲಿ ಮನೆಯೊಂದರ ಮೇಲೆ ಮರ ಮುರಿದು ಬಿದ್ದಿರುವುದು   

ಶಿರಸಿ: ತಾಲ್ಲೂಕಿನಲ್ಲಿ ಬುಧವಾರ ಬೆಳಿಗ್ಗೆ ಕೊನೆಗೊಂಡಂತೆ ಕಳೆದ 24 ತಾಸುಗಳಲ್ಲಿ 128 ಮಿ.ಮೀ ಮಳೆ ದಾಖಲಾಗಿದೆ. ಧಾರಾಕಾರ ಮಳೆ ಹಾಗೂ ರಭಸದ ಗಾಳಿಗೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಸೋಮವಾರದಿಂದ ಪ್ರಾರಂಭವಾಗಿರುವ ಮಳೆ ಎಡೆಬಿಡದೇ ಸುರಿಯುತ್ತಿದೆ. ಮಳೆಯ ಜೊತೆಗೆ ಗಾಳಿಯ ಆರ್ಭಟ ಜನರನ್ನು ಕಂಗಾಲು ಮಾಡಿದೆ. ನಗರದ ಬನವಾಸಿ ರಸ್ತೆಯಲ್ಲಿ ಮರವೊಂದು ಮುರಿದುಬಿದ್ದು, ಕೆಲಕಾಲ ಸಂಚಾರಕ್ಕೆ ತೊಡಕಾಗಿತ್ತು. ಇದೇ ರಸ್ತೆಯಲ್ಲಿ ವಿದ್ಯುತ್ ಕಂಬವು ಪರಿವರ್ತಕದ ಸಹಿತ ರಸ್ತೆಯ ಮೇಲೆ ಉರುಳಿ ಬಿದ್ದಿತ್ತು. ಬೆಳಿಗ್ಗೆಯ ಹೊತ್ತಾಗಿದ್ದರಿಂದ ರಸ್ತೆಯಲ್ಲಿ ಜನ ಸಂಚಾರ ವಿರಳವಾಗಿತ್ತು.

ತಾಲ್ಲೂಕಿನಲ್ಲಿ ಒಂಬತ್ತು ಮನೆಗಳಿಗೆ ಹಾನಿಯಾಗಿದೆ. ಬನವಾಸಿ ಹೋಬಳಿಯಲ್ಲಿ 35 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಗೊನೆಬಿಟ್ಟಿದ್ದ ಬಾಳೆ ಗಿಡಗಳು ನೆಲಕ್ಕುರುಳಿವೆ. ಮೆಕ್ಕೆಜೋಳದ ಸಸಿಗಳು ಮುರಿದು ಬಿದ್ದಿವೆ.

ADVERTISEMENT

ಕಲಗಾರದ ಗೀತಾ ನಾಯ್ಕ, ಬಚಗಾಂವದ ಪಾರ್ವತಿ ಮಡಿವಾಳ, ಹುತ್ತಗಾರದ ಶೋಭಾ ಮುಕ್ರಿ, ಪ್ರೇಮಾ ಬೋವಿವಡ್ಡರ, ಮಂಜಾ ಗೌಡ, ಗಣೇಶನಗರದ ವಿನುತಾ ಹೆಗಡೆ, ಕಾನಳ್ಳಿಯ ರಾಮ ಗೌಡ, ಬಿಸಲಕೊಪ್ಪದ ಮಹಾದೇವಿ ನಾಯ್ಕ, ಮಠದೇವಳದ ಮಾಬ್ಲ ಚನ್ನಯ್ಯ ಅವರ ವಾಸದ ಮನೆಗಳಿಗೆ ಹಾನಿಯಾಗಿದ್ದು, ಒಟ್ಟು ₹ 2.80 ಲಕ್ಷ ನಷ್ಟವಾಗಿದೆ. ಸಂಪಖಂಡದ ಮತ್ತಿಗಾರಿನ ಗಣಪತಿ ಶೆಟ್ಟಿ ಅವರ ಬಾಳೆತೋಟ, ಗೌಡಳ್ಳಿಯ ಬಸ್ತ್ಯಾಂವ ಗೋನ್ಸಾಲ್ವಿಸ್ ಭತ್ತದ ಗದ್ದೆಗೆ ನೀರು ನುಗ್ಗಿ ಅಂದಾಜು ₹ 75ಸಾವಿರ ನಷ್ಟವಾಗಿದೆ ಎಂದು ತಹಶೀಲ್ದಾರ್ ಎಂ.ಆರ್. ಕುಲಕರ್ಣಿ ತಿಳಿಸಿದ್ದಾರೆ.

ಗಾಳಿಯ ಅಬ್ಬರಕ್ಕೆ ತಾಲ್ಲೂಕಿನಲ್ಲಿ 162 ವಿದ್ಯುತ್ ಕಂಬಗಳು, ನಾಲ್ಕು ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದ್ದು, ₹ 47.5 ಲಕ್ಷ ನಷ್ಟವಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ತುಂಬಿ ಹರಿಯುತ್ತಿರುವ ನದಿಗಳು

ವರದಾ, ಶಾಲ್ಮಲಾ ಹಾಗೂ ಅಘನಾಶಿನಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪರಿಣಾಮವಾಗಿ ನದಿ ತಟದ ಕೃಷಿ ಜಮೀನುಗಳು ಜಲಾವೃತವಾಗಿವೆ. ಅಘನಾಶಿನಿ ನದಿಯ ನೀರು ತಾಲ್ಲೂಕಿನ ಸರಕುಳಿ ಸೇತುವೆಯ ಮೇಲೆ ಉಕ್ಕಿ ಹರಿಯಿತು. ವರದಾ ನದಿ ಸುತ್ತಲಿನ ಕೃಷಿ ಭೂಮಿಗೆ ನೀರು ನುಗ್ಗಿದೆ. ಶಾಲ್ಮಲಾ ನದಿಪಾತ್ರದ ಅಡಿಕೆ ತೋಟಗಳಿಗೆ ನೀರು ನುಗ್ಗಿದ್ದು, ಮರಗಳಿಗೆ ಹಾಕಿರುವ ಗೊಬ್ಬರ ನೀರು ಪಾಲಾಗಿದೆ.

ಗಾಳಿಯ ರಭಸಕ್ಕೆ ಹುಲೇಕಲ್, ವಾನಳ್ಳಿ, ಮತ್ತಿಘಟ್ಟ, ಹೆಗಡೆಕಟ್ಟಾ ಭಾಗಗಳಲ್ಲಿ ನೂರಾರು ಮರಗಳು ಮುರಿದು ಬಿದ್ದಿವೆ. ಒಣಗಿದ ಬಿದಿರು ಹಿಂಡು ರಸ್ತೆಯ ಮೇಲೆ ಬಿದ್ದು ಕೆಲವೆಡೆ ಸಂಚಾರಕ್ಕೆ ಅಡ್ಡಿಯಾಗಿದೆ. ವಿದ್ಯುತ್ ಮಾರ್ಗಗಳ ಮೇಲೆ ಮರಗಳು ಬಿದ್ದಿರುವುದರಿಂದ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.