ADVERTISEMENT

ಮಳೆ ಅನಾಹುತ, ನೆರವಿಗೆ ಸಹಾಯವಾಣಿ: ತಹಶೀಲ್ದಾರ್ ಶೈಲೇಶ ಪರಮಾನಂದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 20 ಮೇ 2025, 13:33 IST
Last Updated 20 ಮೇ 2025, 13:33 IST
ದಾಂಡೇಲಿಯ ಅಂಬೇವಾಡಿಯ ತಾಲ್ಲೂಕು ಕಚೇರಿಯಲ್ಲಿ ಮುಂಗಾರು ಮಳೆ ಮುಂಜಾಗ್ರತಾ ಸಭೆ ಮಂಗಳವಾರ ನಡೆಯಿತು
ದಾಂಡೇಲಿಯ ಅಂಬೇವಾಡಿಯ ತಾಲ್ಲೂಕು ಕಚೇರಿಯಲ್ಲಿ ಮುಂಗಾರು ಮಳೆ ಮುಂಜಾಗ್ರತಾ ಸಭೆ ಮಂಗಳವಾರ ನಡೆಯಿತು   

ದಾಂಡೇಲಿ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಅಂಬೇವಾಡಿ ಆಡಳಿತ ಸೌಧದಲ್ಲಿ ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೆ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.

‘ಮೇ 26 ಅಥವಾ 27ರಿಂದ ಮುಂಗಾರು ಮಳೆ ಪ್ರಾರಂಭವಾಗುವ ಮುನ್ಸೂಚನೆ ಇದ್ದು, ಮಳೆಯಿಂದ ಆಗಬಹುದಾದ ಅಪಾಯ ನಿರ್ವಹಣೆಗೆ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ತಾಲ್ಲೂಕಿನಲ್ಲಿ ಮೂರು ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಅಧಿಕಾರಿಗಳಿಗೆ ಪೂರ್ವ ತಯಾರಿ ಮಾಡಿಕೊಳ್ಳಲು ತಿಳಿಸಲಾಗಿದೆ’ ಎಂದು ತಹಶೀಲ್ದಾರ್ ತಿಳಿಸಿದರು.

‘ನಗರದ ನಾಡಕಚೇರಿ ಕಾರ್ಯಾಲಯದಲ್ಲಿ ಮೇ 22ರಿಂದ ಸಹಾಯವಾಣಿ ಕೇಂದ್ರ ತೆರೆಯಲಾಗುವುದು. ಇದಕ್ಕಾಗಿ 24/7 ಸಿಬ್ಬಂದಿ ನಿಯೋಜಿಸಲಾಗುವುದು. ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ 08284– 295959ಕ್ಕೆ ಕರೆ ಮಾಡಬಹುದು’ ಎಂದರು.

ADVERTISEMENT

ಅಪಾಯಕಾರಿ ಮರದ ಟೊಂಗೆಗಳ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ, ಶಾಲೆ, ಅಂಗನವಾಡಿಗಳ ಭೌತಿಕ ಸುರಕ್ಷತೆ ಪರಿಶೀಲಿಸುವಂತೆ, ಚರಂಡಿ, ನಾಲೆಗಳನ್ನು ಸ್ವಚ್ಛಗೊಳಿಸುವಂತೆ ನಗರಸಭೆ ಹಾಗೂ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಎರಡು ಜಲಾಶಯದಿಂದ ನೀರು ಹೊರ ಬಿಡುವ ಪೂರ್ವದಲ್ಲಿ ಸ್ಥಳೀಯರಿಗೆ, ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡುವಂತೆ ಮತ್ತು ಮರ, ವಿದ್ಯುತ್ ಕಂಬ, ಮನೆ, ರಸ್ತೆ ಸಂಚಾರ ಸಂಬಂಧಿ ಸಮಸ್ಯೆ ಉಂಟಾದಲ್ಲಿ ಇಲಾಖೆಗಳ ಸಮನ್ವಯದೊಂದಿಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಯಿತು.

ನಗರಸಭೆ ಪೌರಾಯುಕ್ತ ವಿವೇಕ ಬನ್ನೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಎಸ್. ಹಾದಿಮನಿ, ನಗರಸಭೆ ಅಧ್ಯಕ್ಷ ಆಶ್ಫಾಕ್ ಶೇಖ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸಹಾಯಕ ಕೃಷಿ ನಿರ್ದೇಶಕರು, ಹೆಸ್ಕಾಂ, ಅರಣ್ಯ, ತೋಟಗಾರಿಕೆ, ಪಶು ಸಂಗೋಪನೆ, ಶಿಕ್ಷಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಲಾಖೆ ಅಧಿಕಾರಿಗಳು, ಅಂಬಿಕಾನಗರದ ಕೆಪಿಸಿ ಎಂಜಿನಿಯರ್, ನಾಲ್ಕು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.