ADVERTISEMENT

ಮಳೆ | ಶಿರಸಿ–ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಬಂದ್

ಶಿರಸಿ ತಾಲ್ಲೂಕಿನಲ್ಲಿ ದಿನವಿಡೀ ಮಳೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 13:29 IST
Last Updated 17 ಜೂನ್ 2020, 13:29 IST
ಶಿರಸಿ–ಯಲ್ಲಾಪುರ ರಸ್ತೆಯಲ್ಲಿ ಡಾ.ಆಶಾ ಪ್ರಭು ಆಸ್ಪತ್ರೆ ಎದುರು ರಸ್ತೆಯ ಮೇಲೆ ನೀರು ನಿಂತಿದ್ದರಿಂದ ಸಂಚಾರ ಬಂದಾಗಿತ್ತು
ಶಿರಸಿ–ಯಲ್ಲಾಪುರ ರಸ್ತೆಯಲ್ಲಿ ಡಾ.ಆಶಾ ಪ್ರಭು ಆಸ್ಪತ್ರೆ ಎದುರು ರಸ್ತೆಯ ಮೇಲೆ ನೀರು ನಿಂತಿದ್ದರಿಂದ ಸಂಚಾರ ಬಂದಾಗಿತ್ತು   

ಶಿರಸಿ: ತಾಲ್ಲೂಕಿನಾದ್ಯಂತ ಬುಧವಾರ ಬೆಳಿಗ್ಗೆ ರಭಸದ ಮಳೆಯಾಯಿತು. ಮಧ್ಯಾಹ್ನದ ನಂತರ ಆಗಾಗ ಬಿಡುವುಕೊಟ್ಟು ಮಳೆ ಸುರಿಯಿತು.

ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಹಿಂದಿನ 24 ತಾಸುಗಳಲ್ಲಿ 94.5 ಮಿ.ಮೀ ಮಳೆಯಾಗಿದೆ. ಈವರೆಗೆ 449 ಮಿ.ಮೀ ಮಳೆ ದಾಖಲಾಗಿದೆ. ಎಡೆಬಿಡದೇ ಸುರಿದ ಮಳೆಗೆ ನಗರದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ಶಿರಸಿ–ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಇಲ್ಲಿನ ಯಲ್ಲಾಪುರ ನಾಕಾ ಸಮೀಪ ಡಾ.ಆಶಾ ಪ್ರಭು ಆಸ್ಪತ್ರೆಯ ಎದುರು ರಸ್ತೆಯ ಮೇಲೆ ನೀರು ನಿಂತು ಅವಾಂತರ ಸೃಷ್ಟಿಯಾಗಿತ್ತು. ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಇಡೀ ದಿನ ಒಳ ಮಾರ್ಗದ ಮೂಲಕ ವಾಹನಗಳು ಸಾಗಿದವು.

ರಸ್ತೆಯ ಮೇಲೆ ನೀರು ನಿಂತು, ಅಕ್ಕಪಕ್ಕದಲ್ಲಿದ್ದ ಹೋಟೆಲ್, ಮನೆಗಳ ಒಳಗೂ ನುಗ್ಗಿತು. ‘ರಸ್ತೆಯ ಮೇಲೆ ನಿಂತಿದ್ದ ನೀರು ಮನೆಗೆ ನುಗ್ಗಬಹುದೆಂಬ ಭಯದಿಂದ ರಾತ್ರಿಯೆಲ್ಲ ನಿದ್ದೆ ಬಿಟ್ಟು ಕುಳಿತಿದ್ದೆವು’ ಎಂದು ಅಕ್ಕಪಕ್ಕದ ಮನೆಯವರು ಹೇಳಿದರು.

ADVERTISEMENT

ವಾರದ ಹಿಂದೆ ಮೊದಲ ಮಳೆಯಾದಾಗಲೇ ರಸ್ತೆಯ ಮೇಲೆ ನೀರು ನಿಂತು ಹೊಳೆಯಂತಾಗಿತ್ತು. ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಆಗ, ಉಪವಿಭಾಗಾಧಿಕಾರಿ, ಪೊಲೀಸರು ಸ್ಥಳಕ್ಕೆ ಭೇಟಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ನಂತರ ಯಲ್ಲಾಪುರ ರಸ್ತೆಯ ಅರ್ಬನ್ ಬ್ಯಾಂಕ್ ಪಕ್ಕದಲ್ಲಿ ಗಟಾರ ನಿರ್ಮಿಸಲು ನಗರಸಭೆ ಮುಂದಾಗಿತ್ತು. ಸ್ಥಳೀಯರು ಇದನ್ನು ವಿರೋಧಿಸಿದ್ದರು. ಬಹಳ ಹಿಂದಿನಿಂದ ಇದ್ದ ರಾಜ ಕಾಲುವೆಯನ್ನು ಸ್ಥಳೀಯ ಕೆಲವರು ಮುಚ್ಚಿದ್ದರಿಂದ ಈ ಅವಾಂತರ ಸೃಷ್ಟಿಯಾಗಿದೆ. ಇದನ್ನು ತೆರವುಗೊಳಿಸಬೇಕು’ ಎಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.