ADVERTISEMENT

ಉತ್ತರ ಕನ್ನಡದಲ್ಲಿ ಭಾರಿ ಮಳೆ: ಜಲಾಶಯಗಳಿಗೆ ಉತ್ತಮ ಒಳಹರಿವು

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 5:10 IST
Last Updated 9 ಜುಲೈ 2020, 5:10 IST
ಕಾರವಾರದ ಕೆ.ಎಚ್.ಬಿ ಹೊಸ ಬಡಾವಣೆಯ ಖಾಲಿ ನಿವೇಶನದಲ್ಲಿ ನೀರು ನಿಂತಿರುವುದು
ಕಾರವಾರದ ಕೆ.ಎಚ್.ಬಿ ಹೊಸ ಬಡಾವಣೆಯ ಖಾಲಿ ನಿವೇಶನದಲ್ಲಿ ನೀರು ನಿಂತಿರುವುದು   
""
""
""
""

ಕಾರವಾರ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಗುರುವಾರ ಬೆಳಗಿನ ಜಾವದಿಂದ ಭಾರಿ ಮಳೆಯಾಗುತ್ತಿದೆ. ಗುಡುಗು ಮತ್ತು ಗಾಳಿಯೂ ಜೊತೆಯಾಗಿವೆ.

ಬೆಳಿಗ್ಗೆ 9 ಗಂಟೆಗೂ 7 ಗಂಟೆಯ ವಾತಾವರಣ ಕಂಡುಬಂತು. ಕಾರವಾರದ ಕೆ.ಎಚ್.ಬಿ ಕಾಲೊನಿ, ಪದ್ಮನಾಭ ನಗರದ ಕೆಲವು ಬಡಾವಣೆಗಳ ರಸ್ತೆಗಳಲ್ಲಿ ನೀರು ನಿಂತಿದೆ. ಖಾಲಿ ನಿವೇಶನಗಳು ಕೆರೆಯಂತಾಗಿವೆ. ಶಿರಸಿಯಲ್ಲಿ ಬುಧವಾರ ತಡರಾತ್ರಿಯಿಂದಲೇ ವರ್ಷಧಾರೆಯಾಗುತ್ತಿದ್ದು, ಗುರುವಾರ ಬೆಳಿಗ್ಗೆಯೂ ಮುಂದುವರಿಯಿತು.

ಕಾರವಾರ ತಾಲ್ಲೂಕಿನ ಕಿನ್ನರ ಗ್ರಾಮದಲ್ಲಿ ಮನೆಗಳು ಜಲಾವೃತವಾಗಿರುವುದು

ಜೊಯಿಡಾ ಸುತ್ತಮುತ್ತ ಕಾಳಿ ನದಿಪಾತ್ರದ ಪ್ರದೇಶದಲ್ಲಿ ಕೂಡ ಭಾರಿ ಮಳೆಯಾಗುತ್ತಿದೆ. ಹಾಗಾಗಿ ಸೂಪಾ ಮತ್ತು ಕದ್ರಾ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಗುರುವಾರ ಬೆಳಿಗ್ಗೆ 8 ಗಂಟೆಗೆ ದಾಖಲಾದಂತೆ ಸೂಪಾ ಜಲಾಶಯದಲ್ಲಿ 530.95 ಮೀಟರ್ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 560 ಮೀಟರ್. 23,199 ಒಳಹರಿವು ಹಾಗೂ 2,460 ಕ್ಯುಸೆಕ್ ಹೊರಹರಿವು ದಾಖಲಾಗಿದೆ. ಕಳೆದ ವರ್ಷ ಜಲಾಶಯದಲ್ಲಿ ಜುಲೈ 9ರಂದು 535.80 ಮೀಟರ್ ನೀರು ಸಂಗ್ರಹವಾಗಿತ್ತು.

ADVERTISEMENT

ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯಕ್ಕೆ ಕೂಡ 20 ಸಾವಿರಕ್ಕೂ ಅಧಿಕ ಕ್ಯುಸೆಕ್ ಒಳಹರಿವು ಇದೆ. 34.50 ಮೀಟರ್ ಎತ್ತರದ ಜಲಾಶಯಕ್ಕೆ ಇದೇ ಪ್ರಮಾಣದಲ್ಲಿ ಒಳಹರಿವು ಮುಂದುವರಿದರೆ, ನಿಗದಿತ ಗರಿಷ್ಠ ಮಟ್ಟ 32.50 ಮೀಟರ್ ಗೆ ಶೀಘ್ರವೇ ನೀರು ಸಂಗ್ರಹವಾಗಲಿದೆ. ಬಳಿಕ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಕ್ರೆಸ್ಟ್ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತದೆ. ಹಾಗಾಗಿ ಕೆಳಭಾಗದ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು ಎಂದು ಕರ್ನಾಟಕ ವಿದ್ಯುತ್ ನಿಗಮವು ಎರಡನೇ ಮುನ್ನೆಚ್ಚರಿಕೆ ನೀಡಿದೆ.

ಕಿನ್ನರ ಗ್ರಾಮದಲ್ಲಿ ಮನೆಯ ಕಾಂಪೌಂಡ್ ವರೆಗೆ ನೀರು ಬಂದಿರುವುದು

ಕಾರವಾರ ತಾಲ್ಲೂಕಿನ ಅಮದಳ್ಳಿ ಹಾಗೂ ಮುದಗಾ ಸುತ್ತಮುತ್ತ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎರಡು ಅಡಿಗಳಿಗೂ ಅಧಿಕ ಪ್ರಮಾಣದಲ್ಲಿ ನೀರು ನಿಂತಿದೆ. ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ. ಅಮದಳ್ಳಿಯ ವೀರಗಣಪತಿ ದೇವಸ್ಥಾನದ ಆವರಣದಲ್ಲೂ ನೀರು ತುಂಬಿದೆ.

ಕಿನ್ನರ ಗ್ರಾಮದ ರಸ್ತೆಯಲ್ಲೆಲ್ಲಾ ನೀರು

ಸುತ್ತಮುತ್ತಲಿನ ಮನೆಗಳಿಂದ ಜನರನ್ನು ತೆರವು ಮಾಡಲಾಗುತ್ತಿದೆ. ಮಳೆ ನೀರು ಹರಿಯುವ ಚರಂಡಿಗಳನ್ನು ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಐಆರ್ ಬಿ ಸಂಸ್ಥೆಯು ಮುಚ್ಚಿದೆ. ಇದರಿಂದ ಗುಡ್ಡದ ಮೇಲಿನ ನೀರು ಸರಾಗವಾಗಿ ಹರಿಯದೇ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಿನ್ನರ ಗ್ರಾಮದ ಹೊರ ದಾರಿಯಲ್ಲಿ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.