ಶಿರಸಿ: ನಗರ ಪ್ರದೇಶದ ಅಂದಾಜು 45 ಸಾವಿರಕ್ಕೂ ಹೆಚ್ಚಿನ ನಾಗರಿಕರಿಗೆ ಕುಡಿಯುವ ನೀರು ಪೂರೈಸುವ ಮಾರಿಗದ್ದೆ ಜಾಕ್‍ವೆಲ್ ಅನ್ನು ಮಳೆಗಾಲದ ಆರಂಭದೊಂದಿಗೆ ಹೂಳು ತುಂಬಿದ ಕಾರಣ ನೀಡಿ ಸ್ವಚ್ಛಗೊಳಿಸಲಾಗುತ್ತಿದೆ. ಕಾರಣ ನಗರ ವಾಸಿಗಳು ಮಳೆಗಾಲದಲ್ಲಿಯೂ ಕುಡಿಯುವ ನೀರಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ನಗರ ಪ್ರದೇಶದ ಶೇಕಡಾ 65ರಷ್ಟು ಭಾಗಕ್ಕೆ ಮಾರಿಗದ್ದೆ ಜಾಕ್‍ವೆಲ್‍ನಿಂದ ಕುಡಿಯುವ ನೀರು ಪೂರೈಸಲಾಗುತ್ತದೆ. ಉಳಿದ ಪ್ರದೇಶಕ್ಕೆ ಕೆಂಗ್ರೆ ಜಾಕ್‍ವೆಲ್‍ನಿಂದ ಬರುವ ನೀರನ್ನು ನೀಡಲಾಗುತ್ತದೆ. ಪ್ರತಿ ಮಳೆಗಾಲ ಆರಂಭದೊಂದಿಗೆ ಜಾಕ್‍ವೆಲ್‍ಗಳ ಬಳಿ ಹೂಳು ತುಂಬುವುದು ಸಾಮಾನ್ಯ ಎಂಬಂತಾಗಿದೆ. ನೀರಿನ ಹರಿವು ಕಡಿಮೆಯಿರುವ ವೇಳೆ ಸ್ವಚ್ಛಗೊಳಿಸಲು ಮುಂದಾಗದ ನಗರಾಡಳಿತವು ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರತಿ ವರ್ಷವೂ ಲಕ್ಷ ಲಕ್ಷ ಹಣ ಸುರಿದು ಜಾಕ್‍ವೆಲ್ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗುತ್ತಿರುವುದಕ್ಕೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗಿದೆ.
‘ಪ್ರತಿ ಮಳೆಗಾಲದಲ್ಲಿ ಮಾರಿಗದ್ದೆ ಪಂಪ್‍ಹೌಸ್‍ನಲ್ಲಿರುವ ಜಾಕ್‍ವೆಲ್‌ನಲ್ಲಿ ಭಾರಿ ಪ್ರಮಾಣದ ಹೂಳು ತುಂಬಿಕೊಳ್ಳುತ್ತಿದೆ. ಇದರ ತೆರವುಗೊಳಿಸಲು ಸರಾಸರಿ ₹2ರಿಂದ ₹3 ಲಕ್ಷ ವ್ಯಯಿಸಬೇಕಾಗುತ್ತಿದೆ. ಹೂಳು ತೆರವುಗೊಳಿಸಲು ಹತ್ತಾರು ದಿನದ ಸಮಯ ಬೇಕಾಗುವುದರಿಂದ ಈ ಅವಧಿಯಲ್ಲಿ ಮನೆ ಮನೆಗೆ ನೀರು ಪೂರೈಕೆ ಸಮಸ್ಯೆಯಾಗುತ್ತದೆ. ಕಾರಣ ನಗರಾಡಳಿತದಿಂದ ಪ್ರಕಟಣೆ ಹೊರಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಜತೆ ಸಹಕಾರ ಕೋರಲಾಗುತ್ತದೆ. ಜಾಕ್‍ವೆಲ್ ಬಳಿ ವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ್ದರೆ ಹೆಚ್ಚಿನ ಪ್ರಮಾಣದ ಹೂಳು ಒಳಗೆ ಬರುತ್ತಿರಲಿಲ್ಲ. ಬೇಸಿಗೆಯಲ್ಲಿ ಒಮ್ಮೆ ಸ್ವಚ್ಛಗೊಳಿಸಿದ್ದರೆ ನೀರು ಹೆಚ್ಚಿರುವ ಸಂದರ್ಭದಲ್ಲಿ ಜಾಕ್‍ವೆಲ್ ಕಾಮಗಾರಿ ಕೈಗೊಳ್ಳುವ ಸ್ಥಿತಿ ಬರುತ್ತಿರಲಿಲ್ಲ. ಆದರೆ ಪ್ರತಿ ಬಾರಿ ಇದೇ ರೀತಿ ಮಾಡುತ್ತಿದ್ದಾರೆ’ ಎಂಬುದು ಸಾರ್ವಜನಿಕರ ದೂರಾಗಿದೆ.
‘ಮಾರಿಗದ್ದೆ ಜಾಕ್‍ವೆಲ್‍ನ ನೀರು ಎತ್ತುವ ಪಂಪ್‍ಗಳಿಗೆ ಹೂಳು ನುಗ್ಗುವ ಜತೆಗೆ ನೀರು ಸರಬರಾಜು ಮಾಡುವ ಪೈಪ್‌ಗಳಲ್ಲೂ ತುಂಬಿಕೊಂಡು ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಸ್ವಚ್ಛತೆ ಅನಿವಾರ್ಯ. ಎರಡು, ಮೂರು ದಿನಕ್ಕೆ ನೀರು ಸರಬರಾಜು ಮಾಡುತ್ತ, ಮಧ್ಯದ ಅವಧಿಯಲ್ಲಿ ಹೂಳು ತೆಗೆಸಲಾಗುತ್ತಿದೆ’ ಎಂಬುದು ಪ್ರಭಾರಿ ಪೌರಾಯುಕ್ತ ಶಿವರಾಜ ಮಾತಾಗಿದೆ.
‘ಕೊಳೆತ ಎಲೆಗಳು, ಕಸಕಡ್ಡಿಗಳ ರಾಶಿ ಸೇರಿಕೊಂಡಿದೆ. ಅದನ್ನು ತೆಗೆಯಲು ತಡವಾಗುತ್ತಿದೆ. ಇನ್ನು ಎರಡು ವಾರದೊಳಗೆ ಹೂಳು ತೆಗೆದು ಜಾಕ್‍ವೆಲ್ ಶುದ್ಧೀಕರಿಸಲಾಗುವುದು’ ಎಂಬುದು ಕಾಮಗಾರಿ ಕೈಗೆತ್ತಿಕೊಂಡವರ ಮಾತಾಗಿದೆ.
ಹೂಳಿನ ಸಮಸ್ಯೆಯಿಂದ ನೀರು ಸರಬರಾಜಿಗೆ ವ್ಯತ್ಯಯ ಉಂಟಾಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತ್ವರಿತವಾಗಿ ಹೂಳು ತೆರವುಗೊಳಿಸಲು ತಿಳಿಸಲಾಗಿದೆ.– ಶರ್ಮಿಳಾ ಮಾದನಗೇರಿ, ನಗರಸಭೆ ಅಧ್ಯಕ್ಷೆ
ಹೂಳೆತ್ತಲು ಮಳೆಗಾಲವೇ ಆಗಬೇಕೇ?
ಬೇಸಿಗೆ ಕಾಲದಲ್ಲಿ ಜಾಕ್‍ವೆಲ್ ಸಮೀಪದ ನೀರು ಸಂಗ್ರಹಣಾ ಗುಂಡಿಗಳ ಹೂಳೆತ್ತುವ ಜತೆ ಜಾಕ್‍ವೆಲ್ ಕೂಡ ಸ್ವಚ್ಛಗೊಳಿಸುವಂತೆ ಹಲವು ವರ್ಷಗಳಿಂದ ನಾಗರಿಕರು ನಗರಾಡಳಿತಕ್ಕೆ ಮನವಿ ಮಾಡುತ್ತಿದ್ದರೂ ಈವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಅತಿವೃಷ್ಟಿಯೇ ಆಗಬೇಕು ಎಂದೇನಿಲ್ಲ ಮಳೆಗಾಲ ಆರಂಭವಾದರೆ ಸಾಕು ಹೂಳು ತುಂಬಿದೆ ಸ್ವಚ್ಛಗೊಳಿಸಲಾಗುವುದು ಎಂದು ಪ್ರಕಟಣೆ ನೀಡಿ ಕೈತೊಳೆದುಕೊಳ್ಳಲಾಗುತ್ತಿದೆ. ಮಳೆಗಾಲದ ವೇಳೆ ಕಾಮಗಾರಿ ನಡೆಸಲು ಸಮಯ ಹಣ ಹೆಚ್ಚು ಬೇಕು. ಆದರೂ ನಗರಸಭೆ ಅಧಿಕಾರಿಗಳು ಹೂಳೆತ್ತಲು ಮಳೆಗಾಲವನ್ನೇ ಕಾಯುವುದು ನೋಡಿದರೆ ಅನುಮಾನ ಬರುತ್ತದೆ ಎಂಬುದು ಹಲವು ನಾಗರಿಕರ ಅಭಿಪ್ರಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.