ADVERTISEMENT

ಭಟ್ಕಳ: ಕಳೆಗುಂದಿದ ರಂಜಾನ್ ಮಾರುಕಟ್ಟೆ

ನೆಲಬಾಡಿಗೆ ವಸೂಲಿಗೆ ನೀತಿಸಂಹಿತೆ ಅಡ್ಡಿ: ಪುರಸಭೆ ಆದಾಯ ಖೋತಾ

ಮೋಹನ ನಾಯ್ಕ
Published 13 ಏಪ್ರಿಲ್ 2023, 19:30 IST
Last Updated 13 ಏಪ್ರಿಲ್ 2023, 19:30 IST
ಭಟ್ಕಳದ ಪುರಸಭೆಯ ಮುಖ್ಯ ರಸ್ತೆಯಲ್ಲಿ ಹಾಕಲಾಗಿರುವ ರಂಜಾನ್ ಅಂಗಡಿ ಮಳಿಗೆಗಳು
ಭಟ್ಕಳದ ಪುರಸಭೆಯ ಮುಖ್ಯ ರಸ್ತೆಯಲ್ಲಿ ಹಾಕಲಾಗಿರುವ ರಂಜಾನ್ ಅಂಗಡಿ ಮಳಿಗೆಗಳು   

ಭಟ್ಕಳ: ರಂಜಾನ್ ಹಬ್ಬದ ಪ್ರಯುಕ್ತ ಪ್ರತಿ ವರ್ಷ ಮುಖ್ಯ ಮಾರುಕಟ್ಟೆಯಲ್ಲಿ 15 ದಿವಸಗಳ ಮೊದಲೇ ರಂಗೇರುತ್ತಿದ್ದ ರಂಜಾನ್ ಮಾರುಕಟ್ಟೆಗೆ ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆ ಅಡ್ಡಿಯಾಗಿದೆ.

ಪ್ರತಿ ವರ್ಷವೂ ರಂಜಾನ್ ಮಾರುಕಟ್ಟೆ ಪಟ್ಟಣದ ವಿಶೇಷ ಆಕರ್ಷಣೆಯ ಕೇಂದ್ರವಾಗುತ್ತದೆ. ನೆರೆಯ ತಾಲ್ಲೂಕುಗಳಾದ ಕುಂದಾಪುರ ಹಾಗೂ ಹೊನ್ನಾವರದ ಭಾಗದ ಜನರು ಇಲ್ಲಿಗೆ ಬಂದು ಖರೀದಿ ಮಾಡಿ ಹೋಗುತ್ತಾರೆ. ಇಲ್ಲಿ ಸಿಗುವ ಕಡಿಮೆ ಬೆಲೆಯ ವಸ್ತು ಹಾಗೂ ಬಟ್ಟೆಗಳಿಗೆ ಮುಸ್ಲಿಂ ಮಾತ್ರವಲ್ಲದೇ ಹಿಂದೂಗಳು ಮುಗಿಬಿದ್ದು ಖರೀದಿ ಮಾಡುತ್ತಾರೆ. ಈ ಬಾರಿ ಪೂರ್ಣ ಪ್ರಮಾಣದ ಅಂಗಡಿಗಳು ತೆರೆದುಕೊಳ್ಳದ ಕಾರಣ ಮಾರುಕಟ್ಟೆಗೆ ಆಗಮಿಸುವವರ ಸಂಖ್ಯೆಯೂ ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಪ್ರತಿ ವರ್ಷ ರಂಜಾನ್ ಸಮಯದಲ್ಲಿ ಪುರಸಭೆಯಿಂದ ಮುಖ್ಯ ರಸ್ತೆಯಲ್ಲಿ ಮಳಿಗೆ ಹಾಕಲು 57 ಸ್ಥಳಗಳನ್ನು ಗುರುತಿಸಿ ಚೀಟಿ ಎತ್ತುವ ಮೂಲಕ ಅಂಗಡಿ ಹಂಚಿಕೆ ಮಾಡಲಾಗುತ್ತಿತ್ತು. ಪುರಸಭೆ ವ್ಯಾಪ್ತಿಯ ನಿವಾಸಿಗಳಿಗೆ ಮಾತ್ರ ಈ ಅಂಗಡಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. 57 ಅಂಗಡಿಗಳಿಗೆ ಸಾವಿರಕ್ಕೂ ಹೆಚ್ಚೂ ಜನರು ಅರ್ಜಿ ಹಾಕುತ್ತಿದ್ದರು. ಚೀಟಿ ಎತ್ತುವ ದಿನ ಫಲಿತಾಂಶ ವೀಕ್ಷಣೆಗಾಗಿ ನೂರಾರು ಜನರು ಪುರಸಭೆಯ ಎದುರು ಜಮಾಯಿಸುತ್ತಿದ್ದರು.

ADVERTISEMENT

ಆದರೆ ಈ ಬಾರಿ ಚುನಾವಣಾ ನೀತಿ ಸಂಹಿತೆಯಡಿಯಲ್ಲಿ 144 ಸೆಕ್ಷನ್‌ ಜಾರಿ ಇರುವ ಕಾರಣ ಪುರಸಭೆಯ ಎದುರು ಜನರು ಗುಂಪುಗೂಡಲು ಚುನಾವಣಾಧಿಕಾರಿ ಅವಕಾಶ ನೀಡದ ಕಾರಣ ಪುರಸಭೆ ಈ ಬಾರಿ ರಂಜಾನ್ ಮಳಿಗೆ ಚೀಟಿ ಎತ್ತುವ ಪ್ರಕ್ರಿಯೆ ಕೈಬಿಟ್ಟಿದೆ. ಇದರಿಂದ ಪುರಸಭೆ ಆದಾಯಕ್ಕೂ ಹೊಡೆತ ಬಿದ್ದಿದೆ. ಪ್ರತಿ ಅಂಗಡಿ ₹3 ಸಾವಿರ ನೆಲಬಾಡಿಗೆ ವಸೂಲಿ ಮಾಡುತ್ತಿದ್ದ ಪುರಸಭೆಗೆ ಈ ಬಾರಿ ಲಕ್ಷಾಂತರ ರೂಪಾಯಿ ಬಾಡಿಗೆ ಹಾನಿಯಾಗಿದೆ.

ನೆಲ ಬಾಡಿಗೆ ಚೀಟಿ ಎತ್ತದ ಕಾರಣ ಸ್ಥಳೀಯರೇ ಪುರಸಭೆಯ ಜಾಗದಲ್ಲಿ ಟೇಬಲ್‍ಗಳನ್ನು ಕಾಯ್ದಿರಿಸಿ ₹15 ರಿಂದ ₹50 ಸಾವಿರಕ್ಕೆ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ವ್ಯಾಪಾರಿ ವಲಯದಿಂದ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.