ADVERTISEMENT

ಮಂಜುಗುಣಿ: ವೆಂಕಟರಮಣನಿಗೆ ಮಹಾರಥೋತ್ಸವ

ಕರ್ನಾಟಕದ ತಿರುಪತಿ ಎಂದೇ ಖ್ಯಾತಿ ಪಡೆದ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 14:24 IST
Last Updated 16 ಏಪ್ರಿಲ್ 2022, 14:24 IST
ಮಂಜುಗುಣಿಯ ವೆಂಕಟರಮಣ ದೇವರ ಮಹಾರಥೋತ್ಸವ ಶನಿವಾರ ನಡೆಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಮಂಜುಗುಣಿಯ ವೆಂಕಟರಮಣ ದೇವರ ಮಹಾರಥೋತ್ಸವ ಶನಿವಾರ ನಡೆಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.   

ಶಿರಸಿ: ಕರ್ನಾಟಕದ ತಿರುಪತಿ ಎಂದೇ ಖ್ಯಾತಿ ಪಡೆದ ಮಂಜುಗುಣಿಯ ವೆಂಕಟರಮಣ ದೇವರ ಮಹಾರಥೋತ್ಸವ ಶನಿವಾರ ನಡೆಯಿತು. ಕೋವಿಡ್ ಕಾರಣಕ್ಕೆ ಸತತ ಎರಡು ವರ್ಷ ಸರಳವಾಗಿ ನಡೆಯುತ್ತಿದ್ದ ರಥೋತ್ಸವ ಈ ಬಾರಿ ಅದ್ದೂರಿಯಾಗಿತ್ತು.

ನಾಡಿನ ವಿವಿಧೆಡೆ, ಹೊರರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಪ್ರತಿ ವರ್ಷ ಮಧ್ಯರಾತ್ರಿ ಅಥವಾ ನಸುಕಿನ ಜಾವ ಎಳೆಯಲಾಗುತ್ತಿದ್ದ ರಥವನ್ನು ಈ ಬಾರಿ ಬೆಳಿಗ್ಗೆ 8 ಗಂಟೆಗೆ ಎಳೆದರು. ಮಧ್ಯರಾತ್ರಿವರೆಗೂ ಭಕ್ತರಿಗೆ ರಥಾರೂಢ ಶ್ರೀದೇವಿ ಭೂದೇವಿ ಸಹಿತ ವೆಂಕಟರಮಣ ದೇವರ ಉತ್ಸವ ಮೂರ್ತಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ರಥಾರೂಢ ವೆಂಕಟರಮಣನ ದರ್ಶನ ಪಡೆದು ಭಕ್ತರು ಪುನೀತರಾದರು.

ಬೆಳಿಗ್ಗೆ 6 ಗಂಟೆಯಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿದ್ದವು. ಬಳಿಕ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದ ನಂತರ ಕ್ಷೇತ್ರದ ರಥಬೀದಿಯಲ್ಲಿ ಮಂಗಳವಾದ್ಯಗಳೊಂದಿಗೆ ರಥ ಸಾಗಿತು. ಭಕ್ತರು ಗೋವಿಂದನ ನಾಮ ಸ್ಮರಣೆ ಯೊಂದಿಗೆ ರಥವನ್ನ ಎಳೆದರು.

ADVERTISEMENT

‘ಮಂಜುಗುಣಿ ರಥೋತ್ಸವಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ತಿರುಮಲ ಯೋಗಿಗಳು ದೇವರ ಮೂರ್ತಿ ಪ್ರತಿಷ್ಠಾಪಿಸಿದ ಮಾರನೆ ದಿನವಾದ ಚೈತ್ರ ಶುದ್ಧ ಹುಣ್ಣಿಮೆ ದಿನ ರಥೋತ್ಸವ ನಡೆದುಕೊಂಡು ಬಂದಿದೆ’ ಎನ್ನುತ್ತಾರೆ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್.

ಸಂತಾನಪ್ರಾಪ್ತಿಗೆ ಹರಕೆ ಹೊತ್ತಿದ್ದವರು ಮಗು ಹುಟ್ಟಿದ ಬಳಿಕ ಅವರನ್ನು ರಥದ ಗಾಲಿ ಎದುರು ಮಲಗಿಸಿ ರಥಕ್ಕೆ ಪೂಜಿಸುವುದು ವಿಶೇಷವಾಗಿದೆ. ಚರ್ಮದ ವ್ಯಾಧಿಯಿಂದ ಮುಕ್ತರಾಗಲು ಹರಕೆ ಹೊತ್ತವರು ಬೆಳ್ಳಿಯಿಂದ ತಯಾರಿಸಿದ ಕಡಲೆಕಾಳಿನ ಗಾತ್ರದ ಆಭರಣಗಳನ್ನು ರಥಕ್ಕೆ ಎಸೆಯುವುದು ಇನ್ನೊಂದು ವೈಶಿಷ್ಟ್ಯ. ಇಂತಹ ಹರಕೆ ತೀರಿಸಲು ನೂರಾರು ಭಕ್ತರು ಬೇರೆ ಬೇರೆ ಊರುಗಳಿಂದ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.