ADVERTISEMENT

ಹಾಪ್‌ಕಾಮ್ಸ್ ಶೀಘ್ರ ಕಾರ್ಯಾರಂಭಿಸಲಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 13:02 IST
Last Updated 11 ಏಪ್ರಿಲ್ 2020, 13:02 IST
ಶಿರಸಿಯಲ್ಲಿ ಶನಿವಾರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳ ಸಭೆ ನಡೆಸಿದರು
ಶಿರಸಿಯಲ್ಲಿ ಶನಿವಾರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳ ಸಭೆ ನಡೆಸಿದರು   

ಶಿರಸಿ: ಲಾಕ್‌ಡೌನ್ ಸಂದರ್ಭದಲ್ಲಿ ಹಾಪ್‌ಕಾಮ್ಸ್ ಮಳಿಗೆಯ ಅಗತ್ಯ ಹೆಚ್ಚು ಇರುತ್ತದೆ. ಇನ್ನೂ ಬಾಗಿಲು ಮುಚ್ಚಿಯೇ ಇರುವ ಹಾಪ್‌ಕಾಮ್ಸ್‌ ಮಳಿಗೆಗಳನ್ನು ಶೀಘ್ರ ತೆರೆಯಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.

ಕೋವಿಡ್–19 ಹಿನ್ನೆಲೆಯಲ್ಲಿ ಶನಿವಾರ ಇಲ್ಲಿ ಕರೆದಿದ್ದ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ‘ಹಣ್ಣಿನ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ, ಇದನ್ನು ವ್ಯವಸ್ಥಿತವಾಗಿ ಗ್ರಾಹಕರಿಗೆ ತಲುಪಿಸಬೇಕಾಗಿದ್ದ ಹಾಪ್‌ಕಾಮ್ಸ್ ಕಾರ್ಯ ಸ್ಥಗಿತಗೊಳಿಸಿದೆ. ಹಾಪ್‌ಕಾಮ್ಸ್‌ ಕಾರ್ಯಾರಂಭಗೊಂಡು, ಗ್ರಾಹಕರ ಮನೆ ಬಾಗಿಲಿಗೆ ಹಣ್ಣು ತಲುಪುವಂತಾಗಬೇಕು’ ಎಂದರು.

ತರಕಾರಿ, ದಿನಸಿ, ಹಣ್ಣುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಆಡಳಿತ, ಸಂಘ–ಸಂಸ್ಥೆಗಳು, ಸ್ವಯಂ ಸೇವಕರು ಶ್ರಮಿಸುತ್ತಿದ್ದಾರೆ. ಜೀವನಾವಶ್ಯಕ ವಸ್ತುಗಳ ಕೊರತೆಯಾಗದಂತೆ ಎಚ್ಚರ ವಹಿಸಲಾಗಿದೆ. ಬ್ಯಾಂಕ್‌ಗಳಲ್ಲಿ ಗ್ರಾಹಕರ ಒತ್ತಡ ಹೆಚ್ಚುತ್ತಿದೆ. ಹೀಗಾಗಿ, ಸಿಬ್ಬಂದಿ ಹೆಚ್ಚಿಸಿ ತ್ವರಿತವಾಗಿ ಕಾರ್ಯ ಮುಗಿಸುವಂತೆ ಸೂಚಿಸಬೇಕು. ಕುಡಿಯುವ ನೀರಿನ ಕಾಮಗಾರಿಗೆ ಸಂಬಂಧಿಸಿ ಸ್ಥಳೀಯ ಕೂಲಿಕಾರ್ಮಿಕರ ಸಹಕಾರದಲ್ಲಿ ಪೂರ್ಣಗೊಳಿಸಲು ಕ್ರಮವಹಿಸಬೇಕು ಎಂದರು.

ADVERTISEMENT

ಮಂಗನ ಕಾಯಿಲೆ ಸಂಬಂಧ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ತೋಟ, ಬೆಟ್ಟದಲ್ಲಿ ಈಗ ರೈತರಿಗೆ ಕೆಲಸ ಹೆಚ್ಚಿರುತ್ತದೆ. ಮಂಗ ಸತ್ತಿದ್ದು ಕಂಡರೆ ಸಂಬಂಧಪಟ್ಟ ಇಲಾಖೆಗೆ ತಕ್ಷಣ ಮಾಹಿತಿ ನೀಡಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ಡಿವೈಎಸ್ಪಿ ಜಿ.ಟಿ.ನಾಯಕ, ಪೌರಾಯುಕ್ತ ರಮೇಶ ನಾಯಕ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.