
ಕಾರವಾರ: ತಾಲ್ಲೂಕಿನ ಕದ್ರಾ ಗ್ರಾಮದ ಯುವತಿ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದ ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ಒತ್ತಾಯಿಸಿ ಕ್ಯಾಥೊಲಿಕ್ ಅಸೋಸಿಯೇಶನ್ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಮಿತ್ರ ಸಮಾಜ ಮೈದಾನದಿಂದ ಪ್ರತಿಭಟನೆ ಮೆರವಣಿಗೆ ಆರಂಭಿಸಲಾಯಿತು. ಮುಖ್ಯ ರಸ್ತೆಗಳ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಜನರು ಆರೋಪಿಯ ಬಂಧನಕ್ಕೆ ಒತ್ತಾಯಿಸಿ ಘೋಷಣೆ ಕೂಗಿದರು.
‘ರಿಶೇಲ್ ಆತ್ಮಹತ್ಯೆಗೆ ಕಾರಣನಾಗಿರುವ ಆರೋಪ ಹೊತ್ತಿರುವ ಚಿರಾಗ್ ಚಂದ್ರಹಾಸ ಕೊಠಾರಕರ್‌ನನ್ನು ಬಂಧಿಸಬೇಕು, ಆರೋಪಿಗೆ ಬೆಂಬಲವಾಗಿರುವ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮವಾಗಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸ್ಟ್ಯಾನಿ ಪಿಂಟೊ ಮಾತನಾಡಿ, ‘ಜ.9ರಂದು ಮೃತಪಟ್ಟ ಯುವತಿಯ ಮರಣೋತ್ತರ ಪರೀಕ್ಷೆ ಸರಿಯಾಗಿ ನಡೆಸಿಲ್ಲ. ಮರಣೋತ್ತರ ವರದಿಯನ್ನು ತಪ್ಪುಗ್ರಹಿಕೆ ಬರುವ ರೀತಿಯಲ್ಲಿ ತಿರುಚಿ ನೀಡಲಾಗಿದೆ. ಘಟನೆ ನಡೆದು 10 ದಿನ ಕಳೆದರೂ ಆರೋಪಿ ಬಂಧನವಾಗಿಲ್ಲ. ಆತನನ್ನು ಅಡಗಿಸಿಟ್ಟವರನ್ನು ಬಂಧಿಸಬೇಕು. ಆರೋಪಿಯನ್ನು ಬಂಧಿಸದೆ ನಿರ್ಲಕ್ಷಿಸುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಕೆಲಸದಿಂದ ಅಮಾನತುಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ತನಿಖೆಯ ವೈಫಲ್ಯ ಮುಚ್ಚಿಕೊಳ್ಳಲು ಕದ್ರಾ ಠಾಣೆಯ ಎಸ್‌ಐ ಸುನೀಲ್ ಎಂಬುವವರನ್ನು ಅಮಾನತುಗೊಳಿಸಲಾಗಿದೆ. ಆದರೆ, ಆರೋಪಿ ಬಂಧನ ವಿಳಂಬಕ್ಕೆ ಕಾರವಾರ ಡಿಎಸ್‌ಪಿ, ಕದ್ರಾ ವೃತ್ತದ ಇನ್‌ಸ್ಪೆಕ್ಟರ್ ಕಾರಣವಾಗಿರುವ ಶಂಕೆ ಇದೆ. ಇವರಿಬ್ಬರನ್ನೂ ಕೂಡಲೆ ವರ್ಗಾವಣೆಗೊಳಿಸಲಿ’ ಎಂದು ಲಿಯೊ ಲೂಯಿಸ್ ಒತ್ತಾಯಿಸಿದರು.
ಪ್ರತಿಭಟನಾಕಾರರ ಅಳಲು ಆಲಿಸಿದ ಶಾಸಕ ಸತೀಶ ಸೈಲ್, ‘ರಿಶೇಲ್ ಮೃತದೇಹದ ಮರುಮರಣೋತ್ತರ ಪರೀಕ್ಷೆಯನ್ನು ನಿಷ್ಪಕ್ಷಪಾತವಾಗಿ ನಡೆಸಲು ನುರಿತ ವೈದ್ಯರ ತಂಡ ನಿಯೋಜಿಸಲಾಗಿದೆ. ಆರೋಪಿಗಳ ಬಂಧನಕ್ಕೆ ವಿಳಂಬ ಮಾಡಿರುವ ಬಗ್ಗೆ ಪಶ್ಚಿಮ ವಲಯ ಐಜಿಪಿಗೆ ದೂರು ನೀಡಲಾಗಿದೆ. ತಪ್ಪಿತಸ್ಫ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರಿಗೆ ಮನವಿ ಸಲ್ಲಿಸಲಾಯಿತು. ‘ಆರೋಪಿಯ ಬಂಧನಕ್ಕೆ ನಾಲ್ಕು ತಂಡಗಳನ್ನು ನಿಯೋಜಿಸಿದ್ದು, ಆದಷ್ಟು ಶೀಘ್ರದಲ್ಲಿ ಆರೋಪಿ ಬಂಧಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಭರವಸೆ ನೀಡಿದರು.
ರಾಜ್ಯ ಕ್ರೈಸ್ತ ಒಕ್ಕೂಟದ ಡ್ಯಾನಿಯಲ್ ಡಿಸಿಲ್ವಾ, ವಿಲ್ಸನ್ ಫರ್ನಾಂಡಿಸ್, ಕಾಂಗ್ರೆಸ್ ಮುಖಂಡರಾದ ಕೆ.ಶಂಭು ಶೆಟ್ಟಿ, ಸಮೀರ ನಾಯ್ಕ, ಇತರರು ಪಾಲ್ಗೊಂಡಿದ್ದರು.
ಮರು ಮರಣೋತ್ತರ ಪರೀಕ್ಷೆ ರಿಶೇಲ್ ಮೃತದೇಹದ ಮರು ಮರಣೋತ್ತರ ಪರೀಕ್ಷೆಯನ್ನು ಕದ್ರಾ ಗ್ರಾಮದ ಸ್ಮಶಾನದಲ್ಲಿ ಮಂಗಳವಾರ ಭಿಗಿ ಪೊಲೀಸ್ ಭದ್ರತೆಯಲ್ಲಿ ನಡೆಸಲಾಯಿತು. ಹುಬ್ಬಳ್ಳಿಯ ಕಿಮ್ಸ್ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ನುರಿತ ವೈದ್ಯರ ತಂಡವು ಮರಣೋತ್ತರ ಪರೀಕ್ಷೆ ನಡೆಸಿತು. ಉಪವಿಭಾಗಾಧಿಕಾರಿ ಪಿ.ಶ್ರವಣಕುಮಾರ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಕ್ರಿಯೆ ನಡೆದವು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.