ADVERTISEMENT

ಉತ್ತರಕನ್ನಡ: ಗಜನಿಯಲ್ಲಿ ಕುರಡೆ, ಕೆಂಸದ ಸುಗ್ಗಿ

ಅಘನಾಶಿನಿಯ ತಟದಲ್ಲಿ ತರಹೇವಾರಿ ಹೊಳೆ ಮೀನಿನ ಬೇಟೆಯ ಸಂಭ್ರಮ

ಎಂ.ಜಿ.ನಾಯ್ಕ
Published 25 ಮೇ 2020, 19:30 IST
Last Updated 25 ಮೇ 2020, 19:30 IST
ಕುಮಟಾ ತಾಲ್ಲೂಕಿನ ಅಘನಾಶಿನಿ ನದಿ ಗಜನಿಯಲ್ಲಿ ಹಿಡಿದ ಮೀನು
ಕುಮಟಾ ತಾಲ್ಲೂಕಿನ ಅಘನಾಶಿನಿ ನದಿ ಗಜನಿಯಲ್ಲಿ ಹಿಡಿದ ಮೀನು   

ಕುಮಟಾ:ಇಡೀ ರಾಜ್ಯದಲ್ಲಿಯೇ ಅತ್ಯಂತ ವಿಶಾಲ ಹಿನ್ನೀರು ಪ್ರದೇಶ ಹೊಂದಿರುವ ಅಘನಾಶಿನಿ ನದಿ ಗಜನಿಯಲ್ಲಿ ಈಗ ಬಗೆ ಬಗೆಯ ಮೀನು ಹಿಡಿಯುವ ಸುಗ್ಗಿ ಸಮಯ.

ತಾಲ್ಲೂಕಿನ ಹೆಗಡೆ ಗ್ರಾಮದಿಂದ ಸಾಣೆಕಟ್ಟೆವರೆಗೆ ಅಘನಾಶಿನಿ ನದಿಯ ಸುಮಾರು 2,500 ಹೆಕ್ಟೇರ್ ಹಿನ್ನೀರು ಪ್ರದೇಶದಲ್ಲಿ ಹತ್ತಾರು ಗಜನಿಗಳಿವೆ. ಮಾಣಿಕಟ್ಟಾ ಸೇರಿದಂತೆ ಬೆರಳೆಣಿಕೆಯ ಗಜನಿಗಳಲ್ಲಿ ಮಾತ್ರ ಉಪ್ಪು ನೀರಿನಲ್ಲೂ ಬೆಳೆಯುವ ನೈಸರ್ಗಿಕ ತಳಿಯ ‘ಕಗ್ಗ’ ಭತ್ತ ಕೃಷಿ ಮಾಡಲಾಗುತ್ತದೆ.ಅದಕ್ಕೂಮೊದಲು ನದಿಯ ಹಿನ್ನೀರು ಪ್ರದೇಶದಿಂದ ನೈಸರ್ಗಿಕವಾಗಿ ಗಜನಿಯೊಳಗೆ ನುಗ್ಗುವ ಮೀನುಗಳನ್ನು ಬಲೆ ಹಾಕಿ ಹಿಡಿಯಲಾಗುತ್ತದೆ.

ಹೀಗೆ ಹಿಡಿದ ಮೀನು ತರಲು ಜನರು ಆಸಕ್ತಿಯಿಂದ ಬರುತ್ತಾರೆ. ಗೋವಾ ಈ ಮೀನಿಗೆ ದೊಡ್ಡ ಮಾರುಕಟ್ಟೆಯಾಗಿತ್ತು. ಲಾಕ್‌ಡೌನ್ ಕಾರಣದಿಂದ ಗೋವಾ ಮಾರುಕಟ್ಟೆ ಸ್ಥಗಿತಗೊಂಡಿದ್ದು, ಜಿಲ್ಲೆಯ ವಿವಿಧ ಭಾಗಗಳಿಗೆ ಮೀನು ರವಾನೆಯಾಗುತ್ತಿದೆ.
ಮೀನುಗಳ ಜಾತಿ ಹಾಗೂ ಗಾತ್ರಕ್ಕೆ ಅನುಗುಣವಾಗಿ ದರ ನಿಗದಿ ಮಾಡಲಾಗುತ್ತದೆ.

ADVERTISEMENT

ಈಗ ಕುಮಟಾ ಮೀನು ಮಾರುಕಟ್ಟೆಗೆ ಬರುವ ಸಮುದ್ರ ಮೀನಿಗಿಂತ ಗಜನಿ ಮೀನಿಗೆ ಬೇಡಿಕೆ ಹೆಚ್ಚು. ಗಜನಿಯು ಪಟ್ಟಣದಿಂದ ಸುಮಾರುಐದುಕಿಲೋಮೀಟರ್ ಹೊರವಲಯದಲ್ಲಿದೆ. ಆದರೂ ತಾಜಾ ಮೀನು ಖರೀದಿಸಲು ಮೀನು ಪ್ರಿಯರು ಆಸಕ್ತಿ ತೋರುತ್ತಾರೆ.

‘ಜೂನ್ ಅಂತ್ಯಕ್ಕೆ ಕಗ್ಗ ಭತ್ತ ಬಿತ್ತನೆ ಮಾಡಲಾಗುತ್ತಿದ್ದು, ಅಲ್ಲಿವರೆಗೆ ಮೀನುಗಾರಿಕೆ ನಡೆಸಲಾಗುತ್ತದೆ. ಅಕ್ಟೋಬರ್‌ನಲ್ಲಿ ಭತ್ತ ಕಟಾವು ಆದ ನಂತರ ಮತ್ತೆ ಸಿಗಡಿ, ಮೀನು ಬೇಸಾಯ ಆರಂಭಿಸಲಾಗುತ್ತದೆ’ ಎಂದು ಮಾಣಿಕಟ್ಟಾ ‘ಕಗ್ಗ’ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಆರ್.ನಾಯ್ಕ ಮಾಹಿತಿ ನೀಡಿದರು.

ದರ ಹೀಗಿದೆ:ಎಲ್ಲಕ್ಕಿಂತ ಕುರಡೆ ಮೀನು ಗಾತ್ರದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಒಂದೊಂದು ಮೀನು 1ರಿಂದ 10 ಕೆ.ಜಿ.ವರೆಗೆ ತೂಗುತ್ತಿದ್ದು, ಅವುಗಳ ರುಚಿಯೂ ಹೆಚ್ಚು. ಕುರಡೆ ಹಾಗೂ ಅಷ್ಟೇ ರುಚಿಕರವಾದ ಕೆಂಸ ಮೀನು ಕೆ.ಜಿ ಗೆ₹500, ಹಾಲುಗೊಕ್ಕರ ₹300ರಿಂದ ₹ 400, ಕಾಗಳಸಿ ₹ 300ರಿಂದ ₹ 400, ಬೈಗೆ ₹ 300, ಹಾಲುಗುರಕಾ ₹ 200, ಹೂವಿನ ಸೆಳಕಾ ₹ 200, ಮಡ್ಲೆ ₹300ರಿಂದ ₹ 400, ಒಣ ಕಾಂಡಿ ₹ 200, ನೆಪ್ಪೆ, ಹುಲಕಾ, ಮಂಡ್ಲಿ, ಒಡತಿ ಮುಂತಾದವು ₹ 100ರಿಂದ ₹ 200ರಂತೆ ಮಾರಾಟವಾಗುತ್ತವೆ.ದೊಡ್ಡ ಬಿಳಿ ಸಿಗಡಿಕೆ.ಜಿ.ಗೆ ₹ 300ರಿಂದ ₹ 400, ಟೈಗರ್ ಸಿಗಡಿ ₹600 ಹಾಗೂ ಏಡಿ₹ 150ಕ್ಕೆ ಮಾರಾಟವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.