ADVERTISEMENT

ನದಿ ಜೋಡಣೆಗೆ ವಿರೋಧ | ಸರ್ಕಾರದ ಮುಂದೆ ವೈಜ್ಞಾನಿಕ ಸಂಗತಿ ಮಂಡಿಸಿ: ಅನಂತ ಅಶೀಸರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 4:29 IST
Last Updated 17 ಅಕ್ಟೋಬರ್ 2025, 4:29 IST
ಅಘನಾಶಿನಿ- ಬೇಡ್ತಿ ನದಿ ಯೋಜನೆ ವಿರೋಧಿಸಿ  ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ರಾಜ್ಯ ಸರ್ಕಾರಕ್ಕೆ ಹುಲೇಕಲ್ ಆರ್.ಎಫ್.ಒ ಶಿವಾನಂದ ನಿಂಗಾಣಿ ಅವರ ಮೂಲಕ ಮನವಿ ಸಲ್ಲಿಸಲಾಯಿತು
ಅಘನಾಶಿನಿ- ಬೇಡ್ತಿ ನದಿ ಯೋಜನೆ ವಿರೋಧಿಸಿ  ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ರಾಜ್ಯ ಸರ್ಕಾರಕ್ಕೆ ಹುಲೇಕಲ್ ಆರ್.ಎಫ್.ಒ ಶಿವಾನಂದ ನಿಂಗಾಣಿ ಅವರ ಮೂಲಕ ಮನವಿ ಸಲ್ಲಿಸಲಾಯಿತು   

ಶಿರಸಿ: ‘ಪಶ್ಚಿಮಘಟ್ಟದ ಮೇಲೆ ಹೇರುತ್ತಿರುವ ಯೋಜನೆಗಳನ್ನು ಹಿಮ್ಮೆಟ್ಟಿಸಲು ಅದರಲ್ಲಿನ ಅವೈಜ್ಞಾನಿಕ ಸಂಗತಿಗಳನ್ನು ವೈಜ್ಞಾನಿಕವಾಗಿ ಸರ್ಕಾರದ ಮುಂದೆ ಮಂಡಿಸುವ ಅಗತ್ಯವಿದೆ. ಅದರ ನೇತೃತ್ವ ವಹಿಸಲು ಜನಪ್ರತಿನಿಧಿಗಳು ಹಿಂದೇಟು ಹಾಕಬಾರದು’ ಎಂದು ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಅಶೀಸರ ಹೇಳಿದರು.

ಬೇಡ್ತಿ–ಅಘನಾಶಿನಿ ನದಿ ಜೋಡಣೆ ವಿರೋಧಿಸಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ಸ್ವರ್ಣವಲ್ಲಿ ಮಹಾಸಂಸ್ಥಾನದಿಂದ ತಾಲ್ಲೂಕಿನ ಸಹಸ್ರಲಿಂಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿ ಹಾಗೂ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. 

‘25 ವರ್ಷಗಳಿಂದ ಜಲಸಂಪನ್ಮೂಲ ಇಲಾಖೆ ಇಂತಹ ಯೋಜನೆಗಳನ್ನು ತರಲು ಪ್ರಯತ್ನಪಡುತ್ತಿದೆ. ಇದರಿಂದ ಯಾರಿಗೂ ಉಪಯೋಗ ಆಗಿಲ್ಲ. ಇಂಥ ಯೋಜನೆಗಳ ವಿರುದ್ಧ ದೊಡ್ಡ ಜನಾಂದೋಲನದ ಅವಶ್ಯಕತೆ ಇದೆ. ಅಘನಾಶಿನಿ– ವೇದಾವತಿ ನದಿಗಳ ಜೋಡಣೆಗೂ ಸರ್ಕಾರದ ಮಟ್ಟದಲ್ಲಿ ತಯಾರಿ ನಡೆಯುತ್ತಿದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ವರದಿ ನೀಡುವ ಈ ಸಮಯದಲ್ಲಿ ಹೋರಾಟ ಮಾಡಿ ಅದನ್ನು ತಡೆಯುವಂತೆ ಮಾಡಬೇಕಿದೆ’ ಎಂದರು.

ADVERTISEMENT

‘ಯಲ್ಲಾಪುರ, ಶಿರಸಿ, ಸಿದ್ಧಾಪುರ ತಾಲ್ಲೂಕುಗಳ ಜನರಿಗೆ ಈ ಯೋಜನೆಗಳ ಬಿಸಿ ತಟ್ಟಲಿದೆ. ಯೋಜನೆಗೆ ₹15 ಸಾವಿರ ಕೋಟಿ ಮೀಸಲಿಡಲಾಗಿದೆ. ಆದರೆ, ಈವರೆಗೂ ಕೇಂದ್ರ ಸರ್ಕಾರದ ವನ್ಯಜೀವಿ ಮಂಡಳಿಯಿಂದ ಯೋಜನೆಗೆ ಸಮ್ಮತಿ ದೊರೆತಿಲ್ಲ. ಈ ನಡುವೆ ಗ್ರಾಮ ಪಂಚಾಯಿತಿಗಳು ಹಾಗೂ ಸಹಕಾರ ಸಂಘಗಳು ಯೋಜನೆ ವಿರೋಧಿಸಿ ನಿರ್ಣಯ ಕೈಗೊಂಡಿದ್ದು, ಅದನ್ನು ಸರ್ಕಾರಕ್ಕೆ ಮುಟ್ಟಿಸುವ ಕಾರ್ಯ ನಿಯೋಗದ ಮೂಲಕ ನಡೆಯಲಿದೆ. ಇದಕ್ಕೆ ಜನಪ್ರತಿನಿಧಿಗಳು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಪರಿಸರ ಬರಹಗಾರ ಶಿವಾನಂದ ಕಳವೆ ಮಾತನಾಡಿ, ‘ಮಲೆನಾಡಿಗೆ ನೀರಾವರಿ ಯೋಜನೆ ಅಗತ್ಯ ಇಲ್ಲ. ಕಾಡನ್ನು ಉಳಿಸುವುದಕ್ಕೆ ದೊಡ್ಡ ಕೊಡುಗೆ ನೀಡಿದ್ದೇವೆ. ಸರ್ಕಾರಕ್ಕೆ ಕಾಡು ಉಳಿಸುವ ಕಾಳಜಿ ಇಲ್ಲ. ನೀರು ತೆಗೆದುಕೊಂಡು ಹೋಗುವ ತರಾತುರಿಯಲ್ಲಿದೆ. ದೊಡ್ಡ ಮಾದರಿಯಲ್ಲಿ ಸರ್ಕಾರ ಹೆಚ್ಚು ಗಮನವಹಿಸುತ್ತದೆ. ಅದರಲ್ಲಿ ಲಾಭ ಹೆಚ್ಚಿದೆ. ಸರ್ಕಾರ ಕೆರೆ ಅಭಿವೃದ್ಧಿ ಬಗ್ಗೆ ಗಮನವಹಿಸುತ್ತಿಲ್ಲ. ಕಾಡು ಉಳಿಸಿಕೊಳ್ಳುವ ಜತೆ ನದಿ ಉಳಿಸಿಕೊಳ್ಳಬೇಕು. ಖಾಲಿ ಪೈಪ್ ಯೋಜನೆಗಳ ಬಗ್ಗೆ ಆಸಕ್ತಿ ವಹಿಸುತ್ತೇವೆ. ಹೋರಾಟ ನಿರಂತರವಾಗಿದ್ದು, ಜಿಲ್ಲೆಯ ಕೆರೆಯ ಪುನರುಜ್ಜೀವನಕ್ಕೆ ಸರ್ಕಾರ ಲಕ್ಷ್ಯವಹಿಸಬೇಕು. ಅಧಿಕಾರಿಗಳು, ಇಂಜಿನಿಯರ್‌ಗಳು ಹಾಗೂ ಸರ್ಕಾರದ ತಲೆಯಲ್ಲಿ ಹೂಳು ತುಂಬಿಕೊಂಡಿದ್ದು, ಇದನ್ನು ಮೊದಲು ಸ್ವಚ್ಛಗೊಳಿಸಬೇಕಿದೆ. ಪರಿಸರದ ಪ್ರೀತಿ, ಧಾರ್ಮಿಕ ನಂಬಿಕೆಗಳನ್ನು ಸರ್ಕಾರಕ್ಕೆ ತಿಳಿಸುವ ಅಗತ್ಯವಿದೆ’ ಎಂದು ಆಗ್ರಹಿಸಿದರು.

ಹುಲೇಕಲ್ ಆರ್.ಎಫ್.ಒ ಶಿವಾನಂದ ನಿಂಗಾಣಿ, ಸ್ವರ್ಣವಲ್ಲಿ ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ಜೀವ ಪರಿಸರ ವಿಜ್ಞಾನಿ ಕೇಶವ ಕೊರ್ಸೆ, ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಆರ್.ಎಸ್.ಹೆಗಡೆ ಭೈರುಂಬೆ, ಸೋಂದಾ ಪಂಚಾಯಿತಿ ಅಧ್ಯಕ್ಷ ರಾಮಣ್ಣ ಹೊಸಗದ್ದೆ, ಪ್ರಮುಖರಾದ ನಾಗಪ್ಪ ಗುಂಡಿಗದ್ದೆ, ಜೀವ ವೈವಿಧ್ಯ ಸಮಿತಿ ಅಧ್ಯಕ್ಷ ಕಿರಣ ಭಟ್ ಸೇರಿದಂತೆ ಸಾರ್ವಜನಿಕರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.

50 ವರ್ಷಗಳಲ್ಲಿ ನೀರಾವರಿ ಯೋಜನೆಗಳಿಂದ ಆಗಿರುವ ಪ್ರಯೋಜನವಾದರೂ ಏನು ಎನ್ನುವುದನ್ನು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಮೊದಲು ಸಾರ್ವಜನಿಕರಿಗೆ ತಿಳಿಸಲಿ. ನಂತರ ಈ ಯೋಜನೆ ಅನುಷ್ಠಾನದ ಬಗ್ಗೆ ಆಸಕ್ತಿ ತೋರಿಸಲಿ
ಅನಂತ ಅಶೀಸರ ಬೇಡ್ತಿ ಅಧ್ಯಕ್ಷ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ

ಬೈಕ್ ರ‍್ಯಾಲಿ

ಅಘನಾಶಿನಿ-ಬೇಡ್ತಿ ನದಿ ಯೋಜನೆ ವಿರೋಧಿಸಿ ರಾಜ್ಯ ಸರ್ಕಾರಕ್ಕೆ ಹಾಗೂ ಅರಣ್ಯ ಇಲಾಖೆಗೆ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ಸ್ವರ್ಣವಲ್ಲಿ ಮಹಾಸಂಸ್ಥಾನದಿಂದ ಖಂಡನಾ ಮನವಿಯನ್ನು ಹುಲೇಕಲ್ ಆರ್.ಎಫ್.ಒ ಶಿವಾನಂದ ನಿಂಗಾಣಿ ಅವರ ಮೂಲಕ ಸಲ್ಲಿಸಲಾಯಿತು. ಇದಕ್ಕೂ ಮುನ್ನ ‘ಸಹಸ್ರಲಿಂಗ ಉಳಿಸಿ ಶಾಲ್ಮಲಾ ಸಂರಕ್ಷಿಸಿ’ ಎನ್ನುವ ಧ್ಯೇಯವಾಕ್ಯದೊಂದಿಗೆ ತಾರಗೋಡು ಹಾಗೂ ಸೋಂದಾದಿಂದ ಬೃಹತ್ ಸಂಖ್ಯೆಯಲ್ಲಿ ಪಶ್ಚಿಮ ಘಟ್ಟ ಉಳಿಸುವ ಘೋಷಣೆಯುಳ್ಳ ಹಲವಾರು ಭಿತ್ತಿಪತ್ರಗಳೊಂದಿಗೆ ಸಹಸ್ರಲಿಂಗದವರೆಗೆ ಬೈಕ್ ರ‍್ಯಾಲಿ ನಡೆಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.