
ರವೀಂದ್ರ ನಾಯ್ಕ
ಶಿರಸಿ: ‘ನದಿ ಜೋಡಣೆ ವಿರೋಧಿಸಿ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ಜ.11ರಂದು ಶಿರಸಿಯಲ್ಲಿ ಜರುಗಲಿರುವ ಬೃಹತ್ ಹೋರಾಟಕ್ಕೆ ಅರಣ್ಯವಾಸಿಗಳು ಸಂಪೂರ್ಣ ಬೆಂಬಲ ನೀಡಲಿದ್ದಾರೆ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಯಾವುದೇ ವಾಸ್ತವಿಕ, ತಾಂತ್ರಿಕ ಅಥವಾ ವೈಜ್ಞಾನಿಕ ಹಿನ್ನೆಲೆಯನ್ನು ಪರಿಗಣಿಸದೆ ಕೇವಲ ಯಾಂತ್ರಿಕವಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಇಂತಹ ಯೋಜನೆ ಪ್ರಾಯೋಗಿಕವಾಗಿ ಯಶಸ್ವಿಯಾಗಲು ಸಾಧ್ಯವಿಲ್ಲ. ನದಿ ಪಾತ್ರದ ಅಂಚಿನಲ್ಲಿ ವಾಸಿಸುತ್ತಿರುವ ಸುಮಾರು 20 ರಿಂದ 25 ಸಾವಿರ ಕುಟುಂಬಗಳ ಜೀವನದ ಮೇಲೆ ಈ ಯೋಜನೆ ನೇರ ಪ್ರಭಾವ ಬೀರಲಿರುವುದರಿಂದ ಯೋಜನೆಯನ್ನು ವಿರೋಧಿಸುವುದು ಅನಿವಾರ್ಯವಾಗಿದೆ’ ಎಂದು ಅವರು ತಿಳಿಸಿದ್ದಾರೆ.
‘ಬೇಡ್ತಿ ಕಣಿವೆಯ ಅಂಚಿನಲ್ಲಿರುವ ಸುಮಾರು 500 ಎಕರೆ ದಟ್ಟ ಅರಣ್ಯ ನಾಶವಾಗಲಿದೆ. ಪರಿಸರ ಪೂರಕವಾದ ಸುಮಾರು 1,249 ಜಾತಿಯ ವೈವಿಧ್ಯಮಯ ಔಷಧಿ ಗಿಡಗಳು ಮತ್ತು ಹೂವಿನ ಗಿಡಗಳು ನಾಶವಾಗಲಿವೆ. ಅಷ್ಟೇ ಅಲ್ಲದೇ, ಸುಮಾರು 420 ಜಾತಿಯ ಪ್ರಾಣಿ– ಪಕ್ಷಿಗಳ ಆವಾಸಸ್ಥಾನಕ್ಕೆ ಧಕ್ಕೆಯಾಗಲಿದ್ದು, ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಸಂಸ್ಥೆಯ ಮಾರ್ಗದರ್ಶನಗಳನ್ನು ಇಲ್ಲಿ ಉಲ್ಲಂಘಿಸಿರುವುದು ವಿಷಾದನೀಯ’ ಎಂದು ಪ್ರಸ್ತಾಪಿಸಿದ್ದಾರೆ.
‘ಕೇವಲ ಹೇಳಿಕೆಗಳ ಮೂಲಕ ಹೋರಾಟಕ್ಕೆ ಬೆಂಬಲ ನೀಡಿದರೆ ಸಾಲದು. ಕಾರವಾರ ಶಾಸಕ ಸತೀಶ ಸೈಲ್ ಅವರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸದಿದ್ದರೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಮಾದರಿಯಲ್ಲೇ ನದಿ ಜೋಡಣೆ ಯೋಜನೆ ವಿರೋಧಿಸಿ ಇನ್ನುಳಿದ ಜನಪ್ರತಿನಿಧಿಗಳು ಕೂಡ ರಾಜೀನಾಮೆ ನೀಡುವ ವಾಗ್ದಾನ ಮಾಡಬೇಕು. ಜ.11ರ ಸಭೆಯಲ್ಲಿ ಹಾಜರಿರುವ ಜನಪ್ರತಿನಿಧಿಗಳು ಈ ಬಗ್ಗೆ ಜನಸ್ತೋಮದ ಮುಂದೆ ಸ್ಪಷ್ಟಪಡಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.