ADVERTISEMENT

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಎರಡು ಪ್ರತ್ಯೇಕ ಅಪಘಾತ, ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 12:59 IST
Last Updated 6 ಆಗಸ್ಟ್ 2021, 12:59 IST
ಅಪಘಾತಕ್ಕೀಡಾದ ವಾಹನಗಳು
ಅಪಘಾತಕ್ಕೀಡಾದ ವಾಹನಗಳು   

ಅಂಕೋಲಾ: ತಾಲ್ಲೂಕು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಶುಕ್ರವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಏಳು ಜನರಿಗೆ ಗಾಯಗಳಾಗಿವೆ.

ಸರಳೆಬೈಲ್ ಬಳಿ ಶುಕ್ರವಾರ ಮುಂಜಾನೆ ಕ್ಯಾಂಟರ್ ಲಾರಿ ಮತ್ತು ಲಾರಿಯ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕ್ಯಾಂಟರ್ ಲಾರಿಯಲ್ಲಿದ್ದ ಸಹಾಯಕ ಬಸವರಾಜ ನಾಗಪ್ಪ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದರ ಚಾಲಕ ಮಂಜುನಾಥ, ಇನ್ನೊಂದು ಲಾರಿ ಚಾಲಕ ದುರ್ಗಪ್ಪ ಹಾಗೂ ಸಹಾಯಕ ಜಾಫರ್ ಇವರಿಗೆ ಗಾಯಗಳಾಗಿವೆ. ಅಂಕೋಲಾ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಲಾರಿಯು ಯಲ್ಲಾಪುರದಿಂದ ಅಂಕೋಲಾಕ್ಕೆ ಬರುತ್ತಿತ್ತು. ಕ್ಯಾಂಟರ್ ಲಾರಿಯು ಅಂಕೋಲಾದಿಂದ ಯಲ್ಲಾಪುರ ಮಾರ್ಗವಾಗಿ ಚಲಿಸುತ್ತಿತ್ತು. ಈ ವೇಳೆ ಕ್ಯಾಂಟರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಎರಡನೇ ಪ್ರಕರಣ: ರಾಷ್ಟ್ರೀಯ ಹೆದ್ದಾರಿಯ 63ರ ಬಳಿ ಹೆಬ್ಬುಳ ಶುಕ್ರವಾರ ಮಧ್ಯಾಹ್ನ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕಾರಿನಲ್ಲಿದ್ದ ಗದಗ ಪಂಚಾಕ್ಷರಿ ನಗರದ ವಸಂತ ಟಾಕಪ್ಪ ಅಕ್ಕಿ (78) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರಿನಲ್ಲಿದ್ದ ಅಶೋಕ ಟಾಕಪ್ಪ ಅಕ್ಕಿ, ಪ್ರಕಾಶ ಟಾಕಪ್ಪ ಅಕ್ಕಿ, ತೇಜಸ್ ಪ್ರಕಾಶ ಅಕ್ಕಿ ಇವರಿಗೆ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಪಂಚಾಕ್ಷರಿ ನಗರದಿಂದ ಕಾರವಾರ ಪ್ರವಾಸಕ್ಕೆ ಶುಕ್ರವಾರ ಮುಂಜಾನೆ ಕುಟುಂಬ ಸಹಿತ ನಾಲ್ಕು ಕಾರುಗಳಲ್ಲಿ ಹೊರಟಿದ್ದರು.

ಅಂಕೋಲಾದಿಂದ ಯಲ್ಲಾಪುರಕ್ಕೆ ಲಾರಿ ಚಲಿಸುತ್ತಿತ್ತು. ಹೆಬ್ಬುಳ ತಿರುವಿನಲ್ಲಿ ಲಾರಿ ಚಾಲಕ ಅತಿವೇಗ ಮತ್ತು ನಿಷ್ಕಾಳಜಿತನದಿಂದ ವಾಹನವೊಂದನ್ನು ಹಿಂದಿಕ್ಕಲು ಹೋಗಿ ಈ ಅಪಘಾತ ನಡೆದಿದೆ ಎಂದು ದೂರಿನಲ್ಲಿ ದಾಖಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿ.ಪಿ.ಐ ಸಂತೋಷ್ ಶೆಟ್ಟಿ, ಪಿ.ಎಸ್.ಐ ಪ್ರವೀಣ್ ಕುಮಾರ ಸ್ಥಳ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.