ADVERTISEMENT

ಉತ್ತರ ಕನ್ನಡ: ‘ಸ್ವಚ್ಛ ಭಾರತ’ಕ್ಕೆ ನಾರಿಶಕ್ತಿ ಬಲ

ಗಣಪತಿ ಹೆಗಡೆ
Published 1 ಮೇ 2025, 4:49 IST
Last Updated 1 ಮೇ 2025, 4:49 IST
ಕಾರವಾರ ತಾಲ್ಲೂಕಿನ ಮುಡಗೇರಿಯ ಸ್ವಚ್ಛತಾ ಸಂಕೀರ್ಣದಲ್ಲಿ ಕಸ ವಿಂಗಡಣೆಯಲ್ಲಿ ತೊಡಗಿರುವ ಮಹಿಳಾ ಕಾರ್ಮಿಕರು.
ಕಾರವಾರ ತಾಲ್ಲೂಕಿನ ಮುಡಗೇರಿಯ ಸ್ವಚ್ಛತಾ ಸಂಕೀರ್ಣದಲ್ಲಿ ಕಸ ವಿಂಗಡಣೆಯಲ್ಲಿ ತೊಡಗಿರುವ ಮಹಿಳಾ ಕಾರ್ಮಿಕರು.   

ಕಾರವಾರ: ‘ರಸ್ತೆ ಪಕ್ಕ ಕಸ ಎಸೆದು ಹೋಗುವವರು ನಿಜವಾಗಿಯೂ ನಾಚಿಕೊಳ್ಳಬೇಕು. ಮನೆ ಮನೆಯಿಂದ ತಂದ ಕಸಗಳನ್ನು ವಿಲೇವಾರಿ ಘಟಕದೊಳಗೆ ಪ್ರತ್ಯೇಕಿಸಿ, ಅವುಗಳ ವ್ಯವಸ್ಥಿತ ವಿಲೇವಾರಿ ಮಾಡುವ ನಮಗೇಕೆ ನಾಚಿಕೆ ಇರಬೇಕು?’

ತಾಲ್ಲೂಕಿನ ಚಿತ್ತಾಕುಲ ಗ್ರಾಮ ಪಂಚಾಯಿತಿಯ ಸ್ವಚ್ಛತಾ ಸಂಕೀರ್ಣದಲ್ಲಿ (ಘನ ತ್ಯಾಜ್ಯ ವಿಲೇವಾರಿ ಘಟಕ) ಕಳೆದ ಐದು ವರ್ಷದಿಂದ ದುಡಿಯುತ್ತಿರುವ ಸೀಬರ್ಡ್ ಕಾಲೊನಿಯ ನಿರ್ಮಲಾ ಹರಿಕಂತ್ರ ಅವರು ಘಟಕದಲ್ಲಿ ರಾಶಿ ಬಿದ್ದ ಕಸಗಳಿಂದ ಪ್ಲಾಸ್ಟಿಕ್ ಬಾಟಲಿಗಳನ್ನು ಪ್ರತ್ಯೇಕಿಸಿ ಚೀಲಗಳಿಗೆ ತುಂಬಿಸುತ್ತ ಮಾತಿಗೆ ಇಳಿದರು.

‘ನಿತ್ಯ ಬೆಳಿಗ್ಗೆ ಮನೆಯಿಂದ ಮಾರುಕಟ್ಟೆಗೆ ಸಾಗಿ ಅಲ್ಲಿ ಸಂಜೆಯವರೆಗೂ ಮೀನು ಕೊಯ್ಯುವ ಕೆಲಸ ಮಾಡುತ್ತಿದ್ದೆ. ದಿನಕ್ಕೆ ₹500 ಸಂಪಾದನೆ ಇತ್ತು. ಈಗ ಇಲ್ಲಿ ಕಸ ವಿಂಗಡಿಸುವ ಕೆಲಸ ಸಿಕ್ಕಿದೆ. ಮಾಡುವ ಕೆಲಸಕ್ಕೆ ನಿರ್ದಿಷ್ಟ ವೇತನ ಸಿಗುತ್ತಿದೆ. ಅದಕ್ಕಿಂತ ಹೆಚ್ಚಾಗಿ ಗ್ರಾಮವನ್ನು ಶುಚಿಯಾಗಿಸುವ ಪುಣ್ಯದ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ ಎಂಬ ಸಮಾಧಾನ ನಮಗಿದೆ’ ಎನ್ನುತ್ತ ಕೆಲಸ ಮುಂದುವರಿಸಿದರು.

ADVERTISEMENT

ಜಿಲ್ಲೆಯ ಗ್ರಾಮಿಣ ಪ್ರದೇಶದಲ್ಲಿ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಘನ ತ್ಯಾಜ್ಯಗಳನ್ನು ಸಂಗ್ರಹಿಸುವ ಕೆಲಸದಲ್ಲಿ ನಿರತರಾದವರಲ್ಲಿ ಬಹುಪಾಲು ಮಹಿಳೆಯರೇ ಇದ್ದಾರೆ. ಮನೆ ಮನೆಯಿಂದ ಕಸ ಸಂಗ್ರಹಿಸಿ ತಂದು ವಾಹನಕ್ಕೆ ತುಂಬುವುದರಿಂದ ಹಿಡಿದು, ಸ್ವಚ್ಛತಾ ಸಂಕೀರ್ಣಕ್ಕೆ ತಲುಪಿಸುವದರಲ್ಲಿಯೂ ಮಹಿಳಾ ಕಾರ್ಮಿಕರೇ ಮುಂಚೂಣಿಯಲ್ಲಿದ್ದಾರೆ.

ಹೊನ್ನಾವರ ತಾಲ್ಲೂಕಿನ ಜಲವಳ ಕರ್ಕಿ ಗ್ರಾಮದಲ್ಲಿ ಕಸ ಸಂಗ್ರಹಿಸಿ ವಾಹನಕ್ಕೆ ತುಂಬಿಸುವ ಕಾರ್ಯದಲ್ಲಿ ನಿರತರಾಗಿರುವ ಮಹಿಳಾ ಕಾರ್ಮಿಕರು.

229 ಗ್ರಾಮ ಪಂಚಾಯಿತಿಗಳ ಪೈಕಿ 185 ಕಡೆಗಳಲ್ಲಿ ಸ್ವಚ್ಛತಾ ಸಂಕೀರ್ಣದಲ್ಲಿ ಕಸ ವಿಂಗಡಿಸುವ ಕೆಲಸ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಗೋಕರ್ಣ, ಚಿತ್ತಾಕುಲ ಗ್ರಾಮ ಪಂಚಾಯಿತಿಯಲ್ಲಿ ವ್ಯಾಪಕ ಪ್ರಮಾಣದ ಕಸ ಸಂಗ್ರಹವಾಗುತ್ತಿದ್ದು ಅವುಗಳನ್ನು ನಿಭಾಯಿಸುವ ಸಾಹಸವನ್ನು ಕೇವಲ ಮಹಿಳೆಯರೇ ನಿಭಾಯಿಸಿಕೊಂಡು ಹೋಗುತ್ತಿರುವುದು ವಿಶೇಷ.

‘ಗ್ರಾಮೀಣ ಪ್ರದೇಶದಲ್ಲಿ ವಾರದಲ್ಲಿ ಪ್ರತಿ ಮೂರು ಅಥವಾ ವಾರಕ್ಕೊಮ್ಮೆ ಮನೆ ಮನೆಯಿಂದ ಒಣ ಕಸ ಸಂಗ್ರಹಿಸಲಾಗುತ್ತದೆ. ಸ್ವಚ್ಛತಾ ಸಂಕೀರ್ಣದಲ್ಲಿ ಪ್ಲಾಸ್ಟಿಕ್, ರಟ್ಟು, ಕಾಗದಗಳು, ಗಾಜಿನ ಬಾಟಲಿಗಳು, ಹೀಗೆ ಬೇರೆ ಬೇರೆ ಕಸಗಳನ್ನು ಪ್ರತ್ಯೇಕಿಸಿ ವ್ಯವಸ್ಥಿತವಾಗಿ ದಾಸ್ತಾನು ಮಾಡುವ ಕೆಲಸವನ್ನು ಸ್ವಸಹಾಯ ಗುಂಪುಗಳ ಸದಸ್ಯರೇ ನಿರ್ವಹಿಸುತ್ತಿದ್ದಾರೆ. ಗೋಕರ್ಣ ಮತ್ತು ಚಿತ್ತಾಕುಲದಲ್ಲಿ ಸರಾಸರಿ 8 ರಿಂದ 10, ಉಳಿದ ಕಡೆ ಮೂವರಿಂದ ನಾಲ್ಕು ಜನ ಕೆಲಸ ಮಾಡುತ್ತಿದ್ದಾರೆ’ ಎಂದು ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಂಯೋಜಕ ಸೂರ್ಯನಾರಾಯಣ ಭಟ್ ವಿವರಿಸಿದರು.

ಸ್ವಚ್ಛತಾ ವಾಹಿನಿ ಚಲಾಯಿಸುತ್ತಿರುವ ಮಹಿಳೆ
ಸ್ವಚ್ಛ ಭಾರತ ಅಭಿಯಾನ ಜಿಲ್ಲೆಯಲ್ಲಿ ಸಾಕಾರಗೊಳಿಸುವಲ್ಲಿ ನಾರಿಶಕ್ತಿಯೇ ಪ್ರಮುಖ ಪಾತ್ರ ವಹಿಸುತ್ತಿದೆ
ಈಶ್ವರ ಕಾಂದೂ ಜಿಲ್ಲಾ ಪಂಚಾಯಿತಿ ಸಿಇಒ
ವಾಹನ ಚಲಾಯಿಸುವ 104 ಮಹಿಳೆಯರು
ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಂದ ಒಣ ಕಸ ಸಂಗ್ರಹಿಸಿ ಸ್ವಚ್ಛತಾ ಸಂಕೀರ್ಣಕ್ಕೆ ತರುವ ‘ಸ್ವಚ್ಛ ವಾಹಿನಿ’ಗಳನ್ನು ಚಲಾಯಿಸುವವರ ಪೈಕಿ ಬಹುತೇಕ ಮಹಿಳಾ ಚಾಲಕರೇ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 104 ಚಾಲಕಿಯರು ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಪಂಚಾಯಿತಿಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಜೀವಿನಿ (ಎನ್‌ಆರ್‌ಎಲ್‌ಎಂ) ವಿಭಾಗದಿಂದ 125 ಮಹಿಳೆಯರಿಗೆ ತಿಂಗಳ ಕಾಲ ಚಾಲನಾ ತರಬೇತಿ ನೀಡಿ ಚಾಲನಾ ಪರವಾನಗಿ ಮಾಡಿಕೊಟ್ಟು ಬಳಿಕ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗಿದೆ. ‘ಹಳ್ಳಿ ರಸ್ತೆಗಳಲ್ಲಿನ ಅಪಾಯಕಾರಿ ತಿರುವು ದಟ್ಟ ಕಾಡಿನ ನಡುವೆ ಸಾಗುವ ಮಾರ್ಗದಲ್ಲಿ ವಾಹನ ಚಲಾಯಿಸಿಕೊಂಡು ಸಾಗಲು ಭಯವಾಗುತ್ತಿತ್ತು. ಈಗ ವಾಹನ ಚಾಲನೆ ರೂಢಿಗತವಾಗಿದೆ. ಜೀವನದಲ್ಲಿ ಪುಣ್ಯ ಕೆಲಸವೊಂದನ್ನು ಮಾಡುತ್ತಿರುವ ಹೆಮ್ಮಯಿದೆ’ ಎನ್ನುತ್ತಾರೆ ಸ್ವಚ್ಛ ವಾಹಿನಿ ಚಾಲಕಿ ಸುನೀತಾ ಗೌಡ.

ಮಹಿಳಾ ಕಾರ್ಮಿಕರ ಬೇಡಿಕೆಗಳು

  • ಸದ್ಯ ನೀಡಲಾಗುತ್ತಿರುವ ಮಾಸಿಕ ₹10 ಸಾವಿರ ವೇತನವನ್ನು ಏರಿಕೆ ಮಾಡಬೇಕು

  • ಕಸ ಸಂಗ್ರಹಣೆ, ವಿಂಗಡಣೆಯ ಚಟುವಟಿಕೆಯಲ್ಲಿ ತೊಡಗಿಕೊಂಡವರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು‌

  • ಅಪಾಯಕಾರಿ ಸ್ಥಿತಿಯಲ್ಲಿರುವ ಹಳ್ಳಿ ರಸ್ತೆಗಳಲ್ಲಿ ಸರಿಪಡಿಸಿ, ಸ್ವಚ್ಛತಾ ವಾಹಿನಿ ಸಾಗಲು ಸುಗಮವಾಗುವಂತೆ ನೋಡಿಕೊಳ್ಳಬೇಕು

  • ಪ್ರತಿ 3 ತಿಂಗಳ ಬದಲಾಗಿ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.