ADVERTISEMENT

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಸಭೆಯಲ್ಲಿ ಶಾಸಕಿ ರೂಪಾಲಿ- ಸತೀಶ್ ಸೈಲ್ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 6:21 IST
Last Updated 28 ಸೆಪ್ಟೆಂಬರ್ 2022, 6:21 IST
ಶಾಸಕಿ ರೂಪಾಲಿ ನಾಯಕ್
ಶಾಸಕಿ ರೂಪಾಲಿ ನಾಯಕ್   

ಕಾರವಾರ: ಹುಬ್ಬಳ್ಳಿ— ಅಂಕೋಲಾ ರೈಲ್ವೇ ಯೋಜನೆಯ ಬಗ್ಗೆ ರೈಲ್ವೆ ಬಳಕೆದಾರರು ಮತ್ತು ಕೇಂದ್ರದ ತಂಡದ ನಡುವಿನ ಸಭೆಯು, ಆರಂಭದಲ್ಲೇ ಆಕ್ಷೇಪಕ್ಕೆ ಸಾಕ್ಷಿಯಾಯಿತು. ಮಾಜಿ ಶಾಸಕರೂ ಆಗಿರುವ ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಮತ್ತು ಬೆಂಬಲಿಗರು, ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಹೊರಗೆ ಆಯೋಜಿಸಬೇಕು ಎಂದು ಆಗ್ರಹಿಸಿದರು. ಗದ್ದಲದ ನಡುವೆ ಸಭೆಯನ್ನು 15 ನಿಮಿಷ ಮುಂದೂಡಲಾಯಿತು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಯುತ್ತಿದ್ದ‌ು, ಯೋಜನೆ ಪರಿಶೀಲನೆಗೆ ಕೇಂದ್ರದ ತಂಡವು ಸಂವಾದ ಹಮ್ಮಿಕೊಂಡಿದೆ. ಕೇಂದ್ರದ ಹಿರಿಯ ತಜ್ಞರು ತಂಡದಲ್ಲಿದ್ದು, ಯೋಜನೆಯ ಬಗ್ಗೆ ರೈಲ್ವೆ ಬಳಕೆದಾರರು ಮತ್ತು ವಿವಿಧ ಸಂಘಟನೆಗಳ ಅಭಿಪ್ರಾಯ ಆಲಿಸುತ್ತಿದ್ದಾರೆ.

ಸಭೆಯ ಆರಂಭದಲ್ಲಿ ಬಂದರು ಇಲಾಖೆಯ ನಿರ್ದೇಶಕ ಕ್ಯಾಪ್ಟನ್ ಸ್ವಾಮಿ, ಯೋಜನೆಯಿಂದ ಇಲಾಖೆಗೆ? ಏನು ಪ್ರಯೋಜನವಾಗಲಿದೆ ಎಂದು ವಿವರಿಸುತ್ತಿದ್ದರು. ಅಷ್ಟರಲ್ಲೇ ಆಕ್ಷೇಪ ವ್ಯಕ್ತಪಡಿಸಿದ ಸೈಲ್ ಮತ್ತು ಬೆಂಬಲಿಗರು, ಸಭೆಯನ್ನು ಹೊರಗೆ ಆಯೋಜಿಸಲು ಆಗ್ರಹಿಸಿದರು.

ADVERTISEMENT

ಕಾಂಗ್ರೆಸ್ ಜಿಲ್ಲಾ ಸಮಿತಿ ವಕ್ತಾರ ಶಂಭು ಶೆಟ್ಟಿ, 'ಇದು ತಾರತಮ್ಯದ ಸಭೆ' ಎಂದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, 'ಇದು ಸಾರ್ವಜನಿಕ ಅಹವಾಲು ಸಭೆಯಲ್ಲ. ಸ್ಥಳಾಭಾವದ ಕಾರಣದಿಂದ ತಂಡಗಳಲ್ಲಿ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು' ಎಂದರು. ಇದಕ್ಕೆ ಸಮಾಧಾನಗೊಳ್ಳದ ಸೈಲ್ ಮತ್ತು ಬೆಂಬಲಿಗರು ಆಕ್ಷೇಪ ಮುಂದುವರಿಸಿದರು.

ಶಾಸಕಿ- ಸೈಲ್ ಮಾತಿನ ಚಕಮಕಿ
ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಮಧ್ಯಪ್ರವೇಶಿಸಿ, 'ಎಲ್ಲದರಲ್ಲೂ ರಾಜಕೀಯ ತಂದಿಟ್ಟು ಕಾರವಾರ ಹಾಳು ಮಾಡಿದ್ರಿ. ಸುಮ್ನೆ ಇಲ್ಲಿ ಭಾಷಣ ಮಾಡ್ಬೇಡಿ. ಸುಮ್ನೆ ಹೋಗಿ ಕೂತ್ಕೊಳ್ಳಿ' ಎಂದು ಏರು ಧ್ವನಿಯಲ್ಲೇ ಹೇಳಿದರು. ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಒಂದು ಹಂತದಲ್ಲಿ ಸೈಲ್ ವಿರುದ್ಧ‌ ರೂಪಾಲಿ ಏಕವಚನದಲ್ಲೇ ವಾಗ್ದಾಳಿ ನಡೆಸಿದರು

ಕೊನೆಗೆ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಿದ ಜಿಲ್ಲಾಧಿಕಾರಿ, ಅಧಿಕಾರಿಗಳನ್ನು ಹೊರಗೆ ಕಳುಹಿಸಿ, ಜಿಲ್ಲಾಧಿಕಾರಿ ಕಚೇರಿಯ ಹೊರಗಿದ್ದ ನೂರಾರು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.