ADVERTISEMENT

ಕಬಡ್ಡಿ| ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಯಲ್ಲಾಪುರದ ರಾಮು ಗಾವಡೆ

ಗ್ರಾಮೀಣ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಸಾಧನೆ

ನಾಗರಾಜ ಮದ್ಗುಣಿ
Published 5 ಜೂನ್ 2019, 4:02 IST
Last Updated 5 ಜೂನ್ 2019, 4:02 IST
ರಾಮು ಗಾವಡೆ
ರಾಮು ಗಾವಡೆ   

ಯಲ್ಲಾಪುರ: ತಾಲ್ಲೂಕಿನ ಗಡಿಭಾಗದ ಶಿಡ್ಲಗುಂಡಿಯ ಪ್ರತಿಭೆ ರಾಮು ದೋಂಡು ಗಾವಡೆ ಕಬಡ್ಡಿ ಪಟುವಾಗಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ.20 ವರ್ಷದ ಒಳಗಿನ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಅವರದ್ದಾಗಿದೆ.

ಶಿಡ್ಲಗುಂಡಿಯ ಪಾರಂಪರಿಕ ಹಾಲು ಉತ್ಪಾದಕ ವಂಶವಾದ ಗೌಳಿ ಜನಾಂಗದ ದೋಂಡು ಜಾನು ಗಾವಡೆ, ಒಂದೂವರೆ ಎಕರೆ ಕೃಷಿ ಭೂಮಿಯ ಚಿಕ್ಕ ಹಿಡುವಳಿದಾರ. ಮೂಲತಃ ಶಿಕ್ಷಣದಿಂದ ದೂರ ಉಳಿದ ಗೌಳಿ ಜನಾಂಗವಾದರೂ ತಂದೆ ದೋಂಡು ಗಾವಡೆಇಬ್ಬರುಪುತ್ರರುಹಾಗೂ ಒಬ್ಬಳು ಪುತ್ರಿಗೆ ವಿದ್ಯಾಭ್ಯಾಸ ನೀಡಿದರು.ಅವರ ಆಕಾಂಕ್ಷೆಗಳಿಗೆ ನೀರೆರೆದ ಪರಿಣಾಮ ಇಂದು ಸಾಮಾಜಿಕವಾಗಿ ಹೆಸರು ಮಾಡಲು ಸಾಧ್ಯವಾಗಿದೆ.

ಶಿಡ್ಲಗುಂಡಿ ಸಮೀಪದ ಮೈನಳ್ಳಿಯಲ್ಲಿ ರಾಜ್ಯ ಕಬಡ್ಡಿ ತಂಡದ ತರಬೇತುದಾರರಾಜೇಶ್ ಕೆ.ವಿ ಹಾಗೂ ತೀರ್ಪುಗಾರವಿಜಯ್ ಕುಮಾರ್ ಅವರ ನೇತೃತ್ವಲ್ಲಿ ಜೈ ಮಾತಾ ಸ್ಪೋರ್ಟ್ಸ್ ಕ್ಲಬ್ ಪ್ರಾರಂಭವಾಯಿತು. ಅದರ ಮೂಲಕ ಕಬಡ್ಡಿ ಪಂದ್ಯಾವಳಿಗೆ ಒತ್ತು ನೀಡಿ, ಅನೇಕ ಜಿಲ್ಲಾ ಹಾಗೂ ರಾಜ್ಯಮಟ್ಟದ ಪಂದ್ಯಾವಳಿಗಳನ್ನು ಸಂಘಟಿಸಲಾಯಿತು. ಅವುಗಳಮೂಲಕ ಆಸಕ್ತಿ ಹುಟ್ಟಿಸಿಕೊಂಡ ರಾಮು, ಆರನೇ ತರಗತಿಯಲ್ಲೇ ಕಬಡ್ಡಿ ಆಟವಾಡಲು ಪ್ರಾರಂಭಿಸಿದರು.

ADVERTISEMENT

10ನೇ ತರಗತಿಯಲ್ಲಿದ್ದಾಗ ಪ್ರೌಢಶಾಲೆಯ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಅವರು ಪ್ರತಿನಿಧಿಸಿದ್ದರು. ಗುಜರಾತಿನ ಆನಂದದಲ್ಲಿ ನಡೆದ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಕಬಡ್ಡಿ ಫೆಡರೇಷನ್ (ಎಕೆಎಫ್) ಸಿದ್ದಾಪುರದಲ್ಲಿ ಜಿಲ್ಲಾಮಟ್ಟದ, ಬೈಂದೂರಿನಲ್ಲಿ ನಡೆಸಿದ ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. 20 ವರ್ಷದೊಳಗಿನ ಕರ್ನಾಟಕ ತಂಡಕ್ಕೆ ಆಯ್ಕೆಯಾದರು.

ಫೆಬ್ರುವರಿಯಲ್ಲಿ ಕೋಲ್ಕತ್ತಾದಲ್ಲಿ ನಡೆದ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ‘ಆಲ್‍ ರೌಂಡರ್’ ಆಟಗಾರನಾಗಿ ಉತ್ತಮ ಸಾಧನೆ ತೋರಿ ಮಿಂಚಿದರು.ಜಿಲ್ಲಾ ಮತ್ತು ರಾಜ್ಯಮಟ್ಟದ ಅನೇಕ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಅನೇಕ ವೈಯಕ್ತಿಕ ಹಾಗೂ ತಂಡ ಪ್ರಶಸ್ತಿಯನ್ನು ರಾಮುಗೆದ್ದುಕೊಂಡಿದ್ದಾರೆ

ಓದಿನಲ್ಲೂ ಮುಂದು:ವಾಣಿಜ್ಯಶಾಸ್ತ್ರದ ಪದವಿಯಐದನೇ ಸೆಮಿಸ್ಟರ್ ಓದುತ್ತಿರುವ ರಾಮು ಗಾವಡೆ, ಕ್ರೀಡೆಯಲ್ಲಿನ ಆಸಕ್ತಿಯಿಂದಾಗಿ ಓದಿನಲ್ಲಿ ಹಿಂದೆ ಬಿದ್ದಿಲ್ಲ. ಎಸ್ಸೆಸ್ಸೆಲ್ಸಿಹಾಗೂ ಪಿಯು ಪರೀಕ್ಷೆಯಲ್ಲಿ ಶೇ 80ರಷ್ಟು ಅಂಕ ಗಳಿಸಿದ್ದಾರೆ.

ಕುಟುಂಬದ ಪ್ರೋತ್ಸಾಹ:ರಾಮು ಅವರ ಅಣ್ಣ ಬೀರು ದೋಂಡು ಗಾವಡೆ ಐದು ವರ್ಷಗಳಿಂದ ಕರ್ನಾಟಕ ಕ್ರಿಕೆಟ್ ಕ್ಲಬ್‌ನಲ್ಲಿ ಆಟಗಾರನಾಗಿ, ತರಬೇತುದಾರನಾಗಿದ್ದಾರೆ.

‘ನಾವು ಶಿಕ್ಷಣದಿಂದ ವಂಚಿತರಾಗಿದ್ದರೂ ನಮ್ಮ ಮಕ್ಕಳು ಶಿಕ್ಷಣದಲ್ಲಿ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿರುವುದು ಸಂತಸ ತಂದಿದೆ. ಅವರ ಸಾಧನೆಗೆ ಅಗತ್ಯ ಸಹಕಾರ ನೀಡಲು ಸಿದ್ಧರಿದ್ದೇವೆ’ ಎನ್ನುತ್ತಾರೆ ರಾಮುವಿನ ತಂದೆ ದೋಂಡು ಜಾನು ಗಾಡೆ ಹಾಗೂ ತಾಯಿ ಬಯ್ಯಬಾಯಿ ಗಾವಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.