ADVERTISEMENT

ಮೂಲಸೌಕರ್ಯ | ಅಧಿಕಾರಿಗಳು ತಡೆ ಒಡ್ಡಿದರೆ ಕ್ರಮ: ಶಾಸಕ ಆರ್.ವಿ. ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 5:23 IST
Last Updated 27 ಸೆಪ್ಟೆಂಬರ್ 2025, 5:23 IST
ಹಳಿಯಾಳದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿದರು
ಹಳಿಯಾಳದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿದರು   

ಹಳಿಯಾಳ: ‘ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳಾದ ಬಸ್ ತಂಗುದಾಣ, ಶಾಲಾ ಕಟ್ಟಡ ನಿರ್ಮಿಸುವಾಗ ಅರಣ್ಯ ಇಲಾಖೆಯವರು ಅರಣ್ಯ ಪ್ರದೇಶವೆಂದು ಮತ್ತಿತರ ಕಾರಣದಿಂದ ಅಭಿವೃದ್ಧಿಗೆ ತಡೆ ಒಡ್ಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಗೌಳಿ ಜನರು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿದ್ದು, ಕೆಲವು ಅಧಿಕಾರಿಗಳ ತಪ್ಪಿನಿಂದ ಮೂಲಸೌಕರ್ಯದಿಂದ ವಂಚಿತವಾಗುತ್ತಿದ್ದಾರೆ. ಶಾಲಾ ಕೊಠಡಿ, ಅಂಗನವಾಡಿ, ಬಸ್ ತಂಗುದಾಣ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಕಾನೂನು ರೀತಿಯ ಪರವಾನಗಿ ಪಡೆದು ಕಾಮಗಾರಿ ಕೈಗೊಂಡಾಗ ಅಂತಹ ಕಾಮಗಾರಿಯನ್ನು ತಡೆಯಬೇಡಿ’ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

‘ತಾಲ್ಲೂಕಿನಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಆಗಬಾರದು. ಆ ನಿಟ್ಟಿನಲ್ಲಿ ತಹಶೀಲ್ದಾರ್‌ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ನಿತ್ಯವೂ ಪರಿಶೀಲಿಸಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಬಸವ ವಸತಿ ಯೋಜನೆಯಲ್ಲಿ ಕಳೆದ 2010-11ರಿಂದ ಸುಮಾರು 8630 ಮನೆ ಮಂಜೂರಿಯಾಗಿದ್ದು, ಈಗಾಗಲೇ ಮನೆಗಳನ್ನು ವಿತರಣೆ ಮಾಡಲಾಗಿದೆ. ಮನೆ ಕಟ್ಟಿಕೊಂಡವರಿಗೆ ಬಾಕಿ ಹಣದ ಕಂತುಗಳು ಬಾಕಿ ಉಳಿದುಕೊಂಡಲ್ಲಿ ಪಟ್ಟಿಮಾಡಿ ಕೂಡಲೇ ಪ್ರಸ್ತಾವನೆ ಕಳುಹಿಸಿ’ ಎಂದರು.

‘ಪಿಡಿಒಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರತಿಯೊಂದು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ  ಪ್ರತಿದಿನ ಸಾರ್ವಜನಿಕರ ಸಹಕಾರದೊಂದಿಗೆ ಸ್ವಚ್ಛತೆ ಕೈಗೊಳ್ಳಿ. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಈಗಾಗಲೇ ಬಸ್ ತಂಗುದಾಣವಿದ್ದು ಅವುಗಳನ್ನು ಸ್ವಚ್ಛತೆ ಹಾಗೂ ಸುಸ್ಥಿತಿಯಲ್ಲಿಡಿ. ಸುಣ್ಣ ಬಣ್ಣ ಹಚ್ಚಿ ಉತ್ತಮವಾಗಿ ನಿರ್ವಹಿಸಿ. ಎಲ್ಲೆಲ್ಲಿ ಬಸ್ ತಂಗುದಾಣದ ಅವಶ್ಯಕತೆ ಹಾಗೂ ದುರಸ್ತಿಗೊಳಿಸಬೇಕಾಗಿದೆಯೋ ಕೂಡಲೇ ಪಟ್ಟಿಮಾಡಿ ಎರಡು ಮೂರು ದಿನಗಳಲ್ಲಿ ಸಲ್ಲಿಸಿರಿ’ ಎಂದು ಸೂಚಿಸಿದರು.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ, ಕಂದಾಯ, ಲೋಕೋಪಯೋಗಿ, ಶಿಕ್ಷಣ, ಹೆಸ್ಕಾಂ, ಕೃಷಿ, ತೋಟಗಾರಿಕೆ, ಶಿಶು ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.

ತಾಲ್ಲೂಕು ಪಂಚಾಯಿತಿ ಆಡಳಿತ ಅಧಿಕಾರಿ ನಾಗರಾಜು ಎಂ. ಹಾಗೂ ತಾಲ್ಲೂಕಿನ ಎಲ್ಲಾ ಇಲಾಖಾ ಅಧಿಕಾರಿಗಳು ಪಿಡಿಒಗಳು ಇದ್ದರು.

‘53 ಶುದ್ಧ ಕುಡಿಯುವ ನೀರಿನ ಘಟಕ ಸುಸ್ಥಿತಿ’ 

‘ಹಳಿಯಾಳ ದಾಂಡೇಲಿ ತಾಲ್ಲೂಕಿನಲ್ಲಿ 97 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು 53 ಸುಸ್ಥಿತಿಯಲ್ಲಿವೆ. ಕೆಲವೊಂದು ಸಂಪೂರ್ಣ ದುರಸ್ತಿಯಲ್ಲಿವೆ. 12 ಶುದ್ಧ ನೀರಿನ ಘಟಕ ಸ್ಥಳಾಂತರ ಮಾಡಬೇಕಾಗಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಅಧಿಕಾರಿ ಸತೀಶ ತಿಳಿಸಿದರು. ‘15 ದಿನಗಳಲ್ಲಿ ಎಲ್ಲಾ ಶುದ್ಧ ನೀರಿನ ಘಟಕಗಳನ್ನು ಶುಚಿಯಾಗಿ ಸುಸ್ಥಿತಿಯಲ್ಲಿಟ್ಟು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಕಾರ್ಯ ನಿರ್ವಹಿಸಿ’ ಎಂದು ಶಾಸಕ ದೇಶಪಾಂಡೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.