ADVERTISEMENT

ರಾಷ್ಟ್ರೀಯ ಸ್ಪರ್ಧೆಗೆ ಸಚಿನ್ ಕುಮಟಾ ಸಜ್ಜು

ಬಾಡಿ ಬಿಲ್ಡಿಂಗ್, ಮಾಡೆಲಿಂಗ್‌ನಲ್ಲಿ ಮಿಂಚುವ ಹಂಬಲ

ದೇವರಾಜ ನಾಯ್ಕ
Published 21 ಮೇ 2019, 19:34 IST
Last Updated 21 ಮೇ 2019, 19:34 IST
ಸಚಿನ್ ಕುಮಟಾ
ಸಚಿನ್ ಕುಮಟಾ   

ಕಾರವಾರ: ಒಂದು ಕಡೆ ಜೀವನ ನಿರ್ವಹಣೆಗೆ ದುಡಿಮೆ ಬೇಕಿದೆ. ಮತ್ತೊಂದು ಕಡೆ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು, ಏನಾದರೂ ಸಾಧನೆ ಮಾಡಿ ಹೆಸರು ಮಾಡಬೇಕು ಎಂಬ ಹಂಬಲವಿದೆ. ಈ ಎರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತ ಕುಮಟಾದ ಪೈರಗದ್ದೆಯ ಸಚಿನ್ ಮುನ್ನಡೆಯುತ್ತಿದ್ದಾರೆ.

ಬಡ ಕುಟುಂಬದ ಅವರು, ಸದ್ಯ ಔಷಧಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಬರುವ ಸಂಬಳವೇ ಇಡೀ ಕುಟುಂಬ ನಿರ್ವಹಣೆಗೆ ಆಧಾರ. ಆದರೆ, ಇನ್ನೊಂದೆಡೆ ಸಾಧನೆಯ ಬೆನ್ನತ್ತಿ ಹೊರಟಿರುವ ಅವರು, ದೇಹವನ್ನೂ ದಂಡಿಸಿಕೊಂಡಿದ್ದಾರೆ. ಮಾಡೆಲಿಂಗ್‌ನತ್ತವೂ ಚಿತ್ತ ಹರಿಸಿರುವ ಅವರು, ಮೈಕಟ್ಟಿನ ಜತೆಗೆ ಮುಖದ ಕಾಂತಿಯನ್ನೂ ಕಾಯ್ದುಕೊಳ್ಳುತ್ತಿದ್ದಾರೆ.

ಹೆಚ್ಚು ಹಣ ವ್ಯಯಿಸುವಷ್ಟು ಶಕ್ತರಲ್ಲದ ಅವರು, ಕುಮಟಾದ ಪುರಸಭೆ ವ್ಯಾಯಾಮ ಶಾಲೆಗೆ 2010ರಂದು ಸೇರಿದರು. ಅಲ್ಲಿ ತರಬೇತಿ ಪಡೆದು, ಹತ್ತಾರು ‘ದೇಹದಾರ್ಢ್ಯ ಸ್ಪರ್ಧೆ’ಗಳಲ್ಲಿ ಭಾಗವಹಿಸಿದರು. ಹಲವು ಪ್ರಶಸ್ತಿ, ಪದಕಗಳನ್ನೂ ಗೆದ್ದರು. ನಂತರ 2014ರಿಂದ ಬಾಡಿಬಿಲ್ಡಿಂಗ್‌ಗೆ ಸ್ವಲ್ಪ ವಿರಾಮ ನೀಡಿದ್ದ ಅವರು, ಇದೀಗ ಮತ್ತೆ ಸ್ಪರ್ಧೆಗೆ ಧುಮುಕಿದ್ದಾರೆ. ಅದು ಕೂಡ ‘ಮಾಡೆಲಿಂಗ್ ಆ್ಯಂಡ್ ಫ್ಯಾಷನ್ ಶೋ’ ವಿಭಾಗದಲ್ಲಿ ಸ್ಪರ್ಧಿಸಲು ಸಚಿನ್ ಸಜ್ಜಾಗುತ್ತಿದ್ದಾರೆ.

ADVERTISEMENT

‘2018ರಲ್ಲಿ ಹುಬ್ಬಳ್ಳಿಯಲ್ಲಿ ‘ಅಂತರರಾಷ್ಟ್ರೀಯ ಸೈಕಲ್ ಉತ್ಸವ’ ನಡೆದಿತ್ತು. ಅಲ್ಲೂ ಭಾಗವಹಿಸಿ, ಪದಕಗಳನ್ನು ಗೆದ್ದಿದ್ದೆ. ಈ ವರ್ಷ ಕಾರವಾರದಲ್ಲಿ ನಡೆದಿದ್ದ ಮ್ಯಾರಾಥಾನ್‌ ಓಟದಲ್ಲೂ ಭಾಗವಹಿಸಿದ್ದೆ. ಆದರೆ, ಬಾಡಿಬಿಲ್ಡಿಂಗ್ ಎಂದರೆ ಸ್ವಲ್ಪ ಹೆಚ್ಚು ಆಸಕ್ತಿ. ಹೀಗಾಗಿ, ಜುಲೈ 13ರಂದು ಮೈಸೂರಿನಲ್ಲಿ ನಡೆಯಲಿರುವ ‘ಬ್ಯೂಟಿ ಸೆಗ್ಮೆಂಟ್– ನ್ಯಾಷನಲ್ ಐಕಾನ್’, ‘ಮಾಡೆಲಿಂಗ್ ಆ್ಯಂಡ್ ಫ್ಯಾಷನ್ ಶೋ’ದಲ್ಲಿ ಭಾಗವಹಿಸುತ್ತಿದ್ದೇನೆ. ಗೋವಾದಲ್ಲಿ ಮುಂದಿನ ವಾರ ‘ಪರ್ಫೆಕ್ಟ್ ಮಾಡೆಲ್ ಆಫ್ ಮಿಸ್ಟರ್ ಇಂಡಿಯಾ’ ಸ್ಪರ್ಧೆ ಕೂಡ ನಡೆಯಲಿದ್ದು, ಅಲ್ಲಿಯೂ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದೇನೆ’ ಎನ್ನುತ್ತಾರೆ ಸಚಿನ್.

‘ಈ ಸ್ಪರ್ಧೆಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಅದಕ್ಕಾಗಿ ಯೂಟ್ಯೂಬ್‌ಗಳಲ್ಲಿ ವಿಡಿಯೊಗಳನ್ನು ನೋಡುತ್ತ ತರಬೇತಿ ಪಡೆಯುತ್ತಿದ್ದೇನೆ. ಹೆಚ್ಚು ಹಣ ವ್ಯಯಿಸಿ ತರಬೇತಿ ಪಡೆಯುವಷ್ಟು ಸಾಮರ್ಥ್ಯ ಇಲ್ಲ. ಹೀಗಾಗಿ, ತಕ್ಕ ಮಟ್ಟಿಗೆ ಕೆಲವರ ಪ್ರೋತ್ಸಾಹದೊಂದಿಗೆ ಮುನ್ನಡೆಯುತ್ತಿದ್ದೇನೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.