ADVERTISEMENT

ಕಾರವಾರ | ಹೆಚ್ಚುವರಿ ಸಖಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿ: ಜಿಲ್ಲಾಧಿಕಾರಿ ಸೂಚನೆ

ಮಿಷನ್ ಶಕ್ತಿ ಜಿಲ್ಲಾಮಟ್ಟದ ಸಭೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 4:09 IST
Last Updated 9 ಆಗಸ್ಟ್ 2025, 4:09 IST
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅಧಿಕಾರಿಳೊಂದಿಗೆ ಚರ್ಚಿಸಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅಧಿಕಾರಿಳೊಂದಿಗೆ ಚರ್ಚಿಸಿದರು.   

ಕಾರವಾರ: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ನಿಯಂತ್ರಣಕ್ಕೆ ಕ್ರಮವಾಗಬೇಕು. ದೌರ್ಜನ್ಯ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗೆ ಎರಡು ಸಖಿ ಕೇಂದ್ರ ತೆರೆಯಲು ಅವಕಾಶವಿದ್ದು, ಶಿರಸಿಯಲ್ಲಿ ಹೆಚ್ಚುವರಿ ಕೇಂದ್ರ ತೆರೆಯಲು ಪ್ರಸ್ತಾವ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿದ ಅವರು ದೌರ್ಜನ್ಯ ಪ್ರಕರಣಗಳು ನಿಯಂತ್ರಣ ಆಗದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

‘ಕಾರವಾರದಲ್ಲಿರುವ ಸಖಿ ಕೇಂದ್ರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಕುರಿತ ದೂರುಗಳು ಹೆಚ್ಚುತ್ತಿವೆ. ಜಿಲ್ಲಾಕೇಂದ್ರ ದೂರ ಇದ್ದರೂ ಇಷ್ಟೊಂದು ದೂರು ಬರುತ್ತಿವೆ ಎಂದಾದರೆ ದೌರ್ಜನ್ಯ ಪ್ರಮಾಣ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇರಬಹುದು. ಈ ಬಗ್ಗೆ ಪರಿಶೀಲನೆ ನಡೆಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

‘ಕಾರವಾರ ಕೇಂದ್ರವು ಇತರೆ ತಾಲ್ಲೂಕುಗಳಿಂದ ದೂರ ಇರುವ ಕಾರಣ ನೊಂದ ಮಹಿಳೆಯರಿಗೆ ತಕ್ಷಣದಲ್ಲಿ ಸೂಕ್ತ ನೆರವು ನೀಡುವ ಉದ್ದೇಶದಿಂದ, ಶಿರಸಿಯಲ್ಲಿ ಹೆಚ್ಚುವರಿ ಸಖಿ ಕೇಂದ್ರ ತೆರೆಯುವ ಕುರಿತು ಅಗತ್ಯ ಮಾಹಿತಿಗಳೊಂದಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬಹುದು’ ಎಂದರು.

‘ಶಿರಸಿಯಲ್ಲಿನ ಸಖಿ ಸದನ ಕೇಂದ್ರದಲ್ಲಿನ ಮಹಿಳೆಯರಿಗೆ ಆರೋಗ್ಯ ಇಲಾಖೆಯ ಮೂಲಕ ಮನಃಶಾಸ್ತ್ರಜ್ಞರಿಂದ ಕೌನ್ಸೆಲಿಂಗ್ ಆಯೋಜಿಸಬೇಕು. ದೌರ್ಜನ್ಯಕ್ಕೆ ತುತ್ತಾದವರಿಗೆ ವಕೀಲರಿಂದ ಕಾನೂನು ನೆರವು ಒದಗಿಸಬೇಕು. ಸಖಿ ಮತ್ತು ಸ್ವೀಕಾರ ಕೇಂದ್ರಗಳಲ್ಲಿ ಮಹಿಳೆಯರಿಗೆ ನೆರವಾಗುವ ಮಾಹಿತಿ ಒಳಗೊಂಡ ಪುಸ್ತಕಗಳ ಸಂಗ್ರಹಾಲಯ ವ್ಯವಸ್ಥೆ ಮಾಡಬೇಕು’ ಎಂದರು.

‘ಪೋಕ್ಸೊ ಪ್ರಕರಣಗಳ ನಿಯಂತ್ರಣ ಕುರಿತಂತೆ ಹೆಚ್ಚಿನ ಸಂಖ್ಯೆಯ ಜಾಗೃತಿ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲದೇ ಗ್ರಾಮ ಮಟ್ಟದಲ್ಲಿ ಆಯೋಜಿಸಬೇಕು’ ಎಂದರು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಪ್ರೋಬೆಷನರಿ ಐಎಎಸ್ ಅಧಿಕಾರಿ ಝುಪಿಶಾನ್ ಹಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ ಪಾಲ್ಗೊಂಡಿದ್ದರು.

6 ತಾಲ್ಲೂಕುಗಳಲ್ಲಿ 742 ಪ್ರಕರಣ:

‘ಪೊಲೀಸ್ ಇಲಾಖೆಯ ಮಾಹಿತಿಯಂತೆ ಜೊಯಿಡಾ ಹಳಿಯಾಳ ಮುಂಡಗೋಡ ಯಲ್ಲಾಪುರ ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕುಗಳ ಪೊಲೀಸ್ ಠಾಣೆಗಳಲ್ಲಿ 2022ರಲ್ಲಿ 240 2023ರಲ್ಲಿ 305 2024ರಲ್ಲಿ 297 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದು ಗಂಭೀರವಾಗಿ ಚಿಂತಿಸಬೇಕಾದ ವಿಷಯ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.