
ಶಿರಸಿ: ಭಾರತೀಯ ಭಾಷಾ ವೃಕ್ಷದ ಮೂಲ ಸಂಸ್ಕೃತವಾಗಿದೆ. ಅಂಥ ವೃಕ್ಷಕ್ಕೆ ನೀರೆರೆದರೆ ಉಳಿದೆಲ್ಲ ಭಾಷೆಗಳಿಗೂ ಪ್ರೋತ್ಸಾಹಿಸಿದಂತೆ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ನಗರದ ರಾಘವೇಂದ್ರ ಮಠದ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದ ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕ ಆಯೋಜಿಸಿದ್ದ ಸಂಸ್ಕೃತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.
‘ಭಾರತದ ಬೇರುಗಳು ಸಂಸ್ಕೃತದಲ್ಲಿದೆ. ಭಾರತ ಅರ್ಥವಾಗಲು ಸಂಸ್ಕೃತ ಅರ್ಥವಾಗಬೇಕು. ದೇಶದ ಎಲ್ಲ ಭಾಷೆಗಳ ಮಾತೃಭಾಷೆ ಸಂಸ್ಕೃತವಾಗಿದೆ. ಇಂಥ ಸಂಸ್ಕೃತ ಭಾಷೆಯ ರಕ್ಷಣೆ ಅತ್ಯಗತ್ಯ. ಸಂಸ್ಕೃತ ಕಲಿತರ ಉಳಿದೆಲ್ಲ ಭಾಷೆಗಳ ಕಲಿಕೆ ಸುಲಭ, ಉಳಿದ ಭಾಷೆಗಳಲ್ಲಿ ಪಾಂಡಿತ್ಯ ಕೂಡ ಸುಲಲಿತವಾಗುತ್ತದೆ. ಆದರೆ ಇಂದು ಇಂಗ್ಲಿಷ್ ಭಾಷೆ ವ್ಯಾಮೋಹ ಅಂಟಿಕೊಂಡಿದ್ದು, ಅದನ್ನು ಬಿಡಿಸುವ ಕೆಲಸ ಮಾಡಬೇಕಿದೆ’ ಎಂದರು.
ಸಂಸ್ಕೃತದಿಂದ ದೂರವಾದರೆ ಸಂಸ್ಕೃತಿ ನಾಶವಾಗುತ್ತದೆ. ಸಂಸ್ಕೃತವು ವೈಜ್ಞಾನಿಕ ಭಾಷೆಯಾಗಿದೆ. ಸಂಸ್ಕೃತವು ಪುನರುತ್ಥಾನವಾಗುವ ಅಗತ್ಯವಿದೆ ಎಂದ ಸ್ವಾಮೀಜಿ, ಸಂಸ್ಕೃತ ಸುಭಾಷಿತಗಳು ಕೇಳಲಷ್ಟೇ ಚಂದಲ್ಲ. ಬದುಕಿನ ಅನುಭವಗಳ ಹೂರಣ ಅದರಲ್ಲಿರುತ್ತದೆ. ಅದರ ಅರಿವು ಮೂಡಿಸಬೇಕು ಎಂದು ಹೇಳಿದರು.
‘ಜೀವನದಲ್ಲಿ ಆತ್ಮವಿಮರ್ಶೆ ಅತ್ಯಗತ್ಯ. ಅದರಿಂದ ಬದುಕಲ್ಲಿ ಬೆಳೆಯಲು, ಬೆಳಗಲು ಸಾಧ್ಯವಿದೆ. ಆತ್ಮವಿಮರ್ಶೆಗೆ ಒಳಗಾಗದವರು ಉದ್ಧಾರವಾಗಲು ಸಾಧ್ಯವಿಲ್ಲ ಎಂದ ಅವರು, ಸಂಸ್ಕೃತ ಉಳಿಸಿ ಬೆಳೆಸುವಲ್ಲಿನ ಸಂಸ್ಕೃತ ಅಧ್ಯಾಪಕರ ಸಂಘದ ಕಾರ್ಯಚಟುವಟಿಕೆ ಶ್ಲಾಘನೀಯ’ ಎಂದರು.
ರಾಜ್ಯ ಸಂಘದ ಗೌರವಾಧ್ಯಕ್ಷ ನಾರಾಯಣ ಭಟ್, ನಿವೃತ್ತ ಮುಖ್ಯಶಿಕ್ಷಕ ಪ್ರಭಾಕರ ಭಟ್, ಸಂಘದ ಶೈಕ್ಷಣಿಕ ಜಿಲ್ಲಾ ಘಟಕದ ಅಧ್ಯಕ್ಷ ಗಿರೀಶ ಹೆಗಡೆ ಇತರರಿದ್ದರು. ಟಿ.ಎನ್.ಭಟ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.