
ಕಾರವಾರ: ಬೆಳಕಿನ ಮೀನುಗಾರಿಕೆ, ಬುಲ್ ಟ್ರಾಲ್‌ನಂತಹ ಅವೈಜ್ಞಾನಿಕ ಮೀನುಗಾರಿಕೆ ಪದ್ಧತಿಯಿಂದ ಕ್ಷೀಣಿಸಿದ್ದ ತಾರ್ಲೆ ಮೀನುಗಳು (ಭೂತಾಯಿ ಮೀನು) ಪುನಃ ದೊಡ್ಡ ಮಟ್ಟದಲ್ಲಿ ಪಶ್ಚಿಮ ಕರಾವಳಿಯಲ್ಲಿ ಪತ್ತೆಯಾಗಿವೆ.
ಲಕ್ಷಾಂತರ ಮೀನುಗಳ ಹಲವು ಗುಂಪುಗಳು ಕಾರವಾರ, ಗೋವಾ ಸಮೀಪದ ಸಮುದ್ರದಲ್ಲಿ ಪತ್ತೆಯಾಗಿವೆ. ಹತ್ತಾರು ಪರ್ಸಿನ್ ಬೋಟ್‌ಗಳಿಗೆ ಟನ್‌ಗಟ್ಟಲೇ ಮೀನುಗಳು ಲಭಿಸಿವೆ. ಮೀನುಗಾರರಲ್ಲಿ ಸಂಭ್ರಮ ಮೂಡಿದೆ.
ಕಾರವಾರ, ಬೇಲೆಕೇರಿ, ಮುದಗಾ ಬಂದರುಗಳಿಂದ ಮೀನುಗಾರಿಕೆಗೆ ತೆರಳಿದ್ದ ಬಹುತೇಕ ಪರ್ಸಿನ್ ಬೋಟ್‌ಗಳಿಗೆ 5 ರಿಂದ 6 ನಾಟಿಕಲ್ ಮೈಲು ದೂರದಲ್ಲಿ ತಾರ್ಲೆ ಮೀನುಗಳ ದೊಡ್ಡ ಗುಂಪುಗಳು ಎದುರಾಗಿದೆ. ಪ್ರತಿ ಬೋಟ್‌ನವರು ಸರಾಸರಿ 15 ರಿಂದ 18 ಟನ್‌ವರೆಗೆ ಮೀನುಗಳನ್ನು ಬಲೆಗಳಲ್ಲಿ ಸೆರೆ ಹಿಡಿದರು.
‘ಬುಲ್ ಟ್ರಾಲ್, ಬೆಳಕಿನ ಮೀನುಗಾರಿಕೆ ನಡೆಸಿದ್ದರಿಂದ 2017ರ ಬಳಿಕ ತಾರ್ಲೆ ಮೀನುಗಳ ಸಂತತಿ ಕ್ಷೀಣಿಸಿತ್ತು. ಮರಿ, ಮೊಟ್ಟೆಗಳೂ ಬಲೆಗೆ ಸಿಲುಕಿದ್ದರಿಂದ ಪಶ್ಚಿಮ ಕರಾವಳಿ ಭಾಗದಲ್ಲಿ ಮಾತ್ರ ಹೆಚ್ಚು ಕಾಣಸಿಗುತ್ತಿದ್ದ ಈ ಮೀನುಗಳು ಅಪರೂಪವಾಗಿದ್ದವು. ಏಳು ವರ್ಷಗಳ ಬಳಿಕ ಸಂತತಿ ಪುನಃಶ್ಚೇತನಗೊಂಡಿದೆ. ಈ ಕಾರಣದಿಂದ ಲಕ್ಞಾಂತರ ಮೀನುಗಳ ದೊಡ್ಡ ಗುಂಪುಗಳು ಕಾಣಿಸುತ್ತಿವೆ’ ಎಂದು ಕಾರವಾರದ ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಶಿವಕುಮಾರ ಹರಗಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ದೊಡ್ಡ ಗುಂಪುಗಳನ್ನು ರಚಿಸಿಕೊಳ್ಳುವ ತಾರ್ಲೆ ಮೀನುಗಳು ಪಶ್ಚಿಮ ಕರಾವಳಿಯ ಸಮುದ್ರ ತೀರಕ್ಕೆ ಸಮೀಪದಲ್ಲೇ ಸಂಚರಿಸುತ್ತವೆ. ಕೇರಳದಿಂದ ಗುಜರಾತ್‌ವರೆಗೆ ಅವುಗಳ ಸಂಚಾರ ನಿರಂತರ ಇರುತ್ತದೆ. ಕೆಲವೊಮ್ಮೆ ಆಫ್ರಿಕಾವರೆಗೂ ಸಾಗುತ್ತವೆ’ ಎಂದರು.
‘ಹವಾಮಾನ ವೈಪರೀತ್ಯದಿಂದ ಅಕ್ಟೋಬರ್ 20 ಬಳಿಕ ಬೋಟುಗಳು ಮೀನುಗಾರಿಕೆಗೆ ತೆರಳಿರಲಿಲ್ಲ. ಬೆಳಕಿನ ಮೀನುಗಾರಿಕೆಗೆ ಕೆಲ ತಿಂಗಳಿಂದ ಕಡಿವಾಣ ಬಿದ್ದಿದೆ. ಇದರಿಂದ ತಾರ್ಲೆ ಮೀನುಗಳ ಸಂತತಿ ವೃದ್ಧಿಗೆ ಅನುಕೂಲವಾಗಿರಬಹುದು’ ಎಂದು ಪರ್ಸಿನ್ ಬೋಟ್ ಮಾಲೀಕ ಸುಭಾಷ ದುರ್ಗೇಕರ ತಿಳಿಸಿದರು.
ದಷ್ಟಪುಷ್ಟವಾಗಿ ಬೆಳೆದ ತಾರ್ಲೆ ಮೀನು ಸರಾಸರಿ 6 ಲಕ್ಷದಷ್ಟು ಮೊಟ್ಟೆ ಇಡಬಲ್ಲದು. ಬೆಳಕಿನ ಮೀನುಗಾರಿಕೆ ಬುಲ್ ಟ್ರಾಲ್ ನಡೆಸದಿದ್ದರೆ ಈ ಮೀನಿನ ಸಂತತಿ ಬೆಳೆಯಲು ಅನುಕೂಲವಾಗುತ್ತದೆ.– ಶಿವಕುಮಾರ ಹರಗಿ, ಮುಖ್ಯಸ್ಥ ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರ
ಮೀನೆಣ್ಣೆ ಮಿಲ್‍ಗಳಿಂದ ಬೇಡಿಕೆ
‘ತಾರ್ಲೆ ಮೀನನ್ನು ಮೀನೆಣ್ಣೆ ಸಿದ್ಧಪಡಿಸಲು ಹೆಚ್ಚು ಬಳಕೆಯಾಗುತ್ತದೆ. ಮೀನೆಣ್ಣೆ ತಯಾರಿಸುವ ಮಿಲ್‌ಗಳಲ್ಲಿ ಎಣ್ಣೆ ತೆಗೆದು ಉಳಿದ ಮೀನಿನ ಅವಯವದ ಪುಡಿ ಸಿದ್ಧಪಡಿಸಿ ಕೋಳಿಗಳ ಆಹಾರವಾಗಿ ಸಿದ್ಧಪಡಿಸಲಾಗುತ್ತದೆ. ತಾರ್ಲೆ ಮೀನು ಸ್ಥಳೀಯ ಆಹಾರ ಪದ್ಧತಿಯಲ್ಲೂ ಪ್ರಮುಖವಾದದ್ದು. ಸದ್ಯ ಕೆಜಿಗೆ ₹27 ರಿಂದ 30ರ ದರದಲ್ಲಿ ಮೀನೆಣ್ಣೆ ಮಿಲ್‌ನವರು ತಾರ್ಲೆ ಮೀನುಗಳನ್ನು ಖರೀದಿಸುತ್ತಾರೆ’ ಎಂದು ಬೈತಕೋಲ ಮೀನುಗಾರರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.