ADVERTISEMENT

ಹೊನ್ನಾವರ: ಕಡಲತೀರ ರಕ್ಷಣೆಗೆ ‘ಸೇವ್ ಮೈ ಬೀಚ್’

ಹೊನ್ನಾವರದ ಕಾಸರಕೋಡು ಪರಿಸರಸ್ನೇಹಿ ಕಡಲತೀರದಲ್ಲಿ ಅಭಿಯಾನಕ್ಕೆ ಚಾಲನೆ

ಸದಾಶಿವ ಎಂ.ಎಸ್‌.
Published 18 ಸೆಪ್ಟೆಂಬರ್ 2020, 1:26 IST
Last Updated 18 ಸೆಪ್ಟೆಂಬರ್ 2020, 1:26 IST
ಹೊನ್ನಾವರದ ಕಾಸರಕೋಡು ಪರಿಸರಸ್ನೇಹಿ ಕಡಲತೀರದ ಸುಂದರ ದೃಶ್ಯ –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಹೊನ್ನಾವರದ ಕಾಸರಕೋಡು ಪರಿಸರಸ್ನೇಹಿ ಕಡಲತೀರದ ಸುಂದರ ದೃಶ್ಯ –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಕಾರವಾರ: ಕಡಲತೀರಗಳ ಸಂರಕ್ಷಣೆಯಲ್ಲಿ ಸಮಾಜದ ಸಹಭಾಗಿತ್ವದ ಅರಿವು ಮೂಡಿಸಲು ಕೇಂದ್ರ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಮುಂದಾಗಿದೆ. ಸಮುದ್ರತೀರವು ಸುರಕ್ಷಿತವಾಗಿ, ಸ್ವಚ್ಛವಾಗಿ ಹಾಗೂ ಪರಿಸರ ಸ್ನೇಹಿಯಾಗಿದ್ದರೆ ಪ್ರವಾಸಿಗರು ಇಷ್ಟಪಡುತ್ತಾರೆ ಎಂಬ ತಿಳಿವಳಿಕೆ ಮೂಡಿಸಲು ‘ಸೇವ್ ಮೈ ಬೀಚ್’ (ನನ್ನ ಕಡಲತೀರವನ್ನು ಉಳಿಸಿ) ಅಭಿಯಾನ ಹಮ್ಮಿಕೊಂಡಿದೆ.

ಪ್ರತಿಷ್ಠಿತ ‘ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರ ಪಡೆದುಕೊಳ್ಳಲು ಸಜ್ಜುಗೊಳಿಸಲಾಗಿರುವ ಹೊನ್ನಾವರದ ಕಾಸರಕೋಡು ಕಡಲತೀರದಲ್ಲಿ ಇದಕ್ಕೆ ಸೆ.18ರಂದು ಚಾಲನೆ ಸಿಗಲಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಕಾಸರಕೋಡು ಪರಿಸರ ಸ್ನೇಹಿ ಕಡಲತೀರದಲ್ಲಿ ಈಗಾಗಲೇ ಧ್ವಜಸ್ತಂಭ ಸ್ಥಾಪಿಸಲಾಗಿದೆ. ಅದರಲ್ಲಿ ಸೇವ್ ಮೈ ಬೀಚ್ ಎಂಬ ಧ್ವಜವನ್ನು ಆರೋಹಣ ಮಾಡಲಾಗುವುದು. ರಾಷ್ಟ್ರಧ್ವಜಾರೋಹಣ ಮಾಡಲೂ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಈ ಅಭಿಯಾನದ ಮೂಲಕ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಕಾಸರಕೋಡು ಪರಿಸರ ಸ್ನೇಹಿ ಕಡಲತೀರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಪರಿಸರ ಸ್ನೇಹಿಯಾಗಿ ಮಾಡಲಾಗಿದೆ. ಕಡಲತೀರದಲ್ಲಿ ಹುಲ್ಲುಹಾಸು ಅಳವಡಿಸಲಾಗಿದೆ. ಮಕ್ಕಳ ಆಟದ ಪ್ರದೇಶವನ್ನು ನವೀಕರಿಸಲಾಗಿದೆ. ಪ್ರವಾಸಿಗರಿಗೆ ವಿಶ್ರಾಂತಿಗೆ ಸ್ಥಳಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಸಮುದ್ರದ ನೀರನ್ನು ಅತ್ಯಂತ ಸ್ವಚ್ಛವಾಗಿ ಇಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದೂ ಅವರು ಹೇಳಿದರು.

‘ಸಿದ್ಧತೆಯಲ್ಲಿ ಮುಂಚೂಣಿ’:ಕಡಲತೀರಗಳ ಗುಣಮಟ್ಟವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ‘ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರ ಪಡೆಯುವ ಸಿದ್ಧತೆಯಲ್ಲಿ ಕಾಸರಕೋಡು ಮುಂಚೂಣಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

‘ಈ ಬಾರಿ ಪ್ರಮಾಣಪತ್ರವನ್ನು ಪಡೆದುಕೊಳ್ಳುವ ಸಂಪೂರ್ಣ ಆತ್ಮವಿಶ್ವಾಸದಲ್ಲಿದ್ದೇವೆ. ಪ್ರಮಾಣಪತ್ರ ನೀಡುವ ನಿರ್ಣಾಯಕರ ಮಂಡಳಿ ಸೂಚಿಸಿದ ಎಲ್ಲ ಷರತ್ತುಗಳು, ನಿಯಮಗಳನ್ನು ಪಾಲಿಸಲಾಗಿದೆ. ಕಡಲತೀರವು ಮಂಡಳಿ ಹೇಳಿದ ಎಲ್ಲ ಮಾನದಂಡಗಳನ್ನು ನೈಸರ್ಗಿಕವಾಗಿ ಪಾಲಿಸುವ ರೀತಿಯಲ್ಲಿದೆ. ಈಗ ಪರೀಕ್ಷೆ ಬರೆದು ಫಲಿತಾಂಶಕ್ಕೆ ಎದುರು ನೋಡುತ್ತಿರುವ ವಿದ್ಯಾರ್ಥಿಯ ರೀತಿಯ ಕುತೂಹಲ ನಮ್ಮದು’ ಎಂದರು.

ಕೇಂದ್ರ ಸರ್ಕಾರದ ಆಸಕ್ತಿ:ವಿಶ್ವದಲ್ಲಿ ಹೆಚ್ಚು ಪ್ರವಾಸಿಗರು ಸುರಕ್ಷತೆ, ಸ್ವಚ್ಛತೆ, ಪರಿಸರಸ್ನೇಹಿ ವಾತಾವರಣ ಇರುವ ಕಡಲತೀರಗಳಿಗೆ ಭೇಟಿ ನೀಡಲು ಇಚ್ಛಿಸುತ್ತಾರೆ. ‘ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರವು ಇವುಗಳನ್ನು ಪ್ರಮಾಣೀಕರಿಸುತ್ತದೆ. ನಮ್ಮ ದೇಶದಲ್ಲೂ 100 ಕಡಲತೀರಗಳಿಗೆ ಪ್ರಮಾಣಪತ್ರ ಪಡೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಉತ್ಸುಕವಾಗಿದೆ. ನೆರೆಯ ಉಡುಪಿ ಜಿಲ್ಲೆಯ ಪಡುಬಿದ್ರಿ ಕಡಲತೀರವನ್ನೂ ಇದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.