ADVERTISEMENT

ಪ್ರಕೃತಿ ನಾಶ ಮಾಡುವ ಸಂಶೋಧನೆ ಬೇಡ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 8:01 IST
Last Updated 24 ಡಿಸೆಂಬರ್ 2025, 8:01 IST
<div class="paragraphs"><p>ಶಿರಸಿಯಲ್ಲಿ ನಡೆದ ರೈತ ದಿನಾಚರಣೆ ವೇಳೆ ತಾಲ್ಲೂಕು ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಯಿತು</p></div>

ಶಿರಸಿಯಲ್ಲಿ ನಡೆದ ರೈತ ದಿನಾಚರಣೆ ವೇಳೆ ತಾಲ್ಲೂಕು ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಯಿತು

   

ಶಿರಸಿ: ‘ವೈಜ್ಞಾನಿಕ ತಳಹದಿಯಲ್ಲಿ ಕೃಷಿ ಚಟುವಟಿಕೆ ನಡೆಸಲು ಪೂರಕವಾಗಿ ಕೇಂದ್ರ ಸರ್ಕಾರ ಹಲವು ಯೋಜನೆ ಅನುಷ್ಠಾನ ಮಾಡಿದೆ. ಈ ‌ನಿಟ್ಟಿನಲ್ಲಿ ವಿಜ್ಞಾನಿಗಳು, ಸಂಶೋಧಕರು ಮಣ್ಣಿನ ಗುಣಮಟ್ಟ, ಪ್ರಕೃತಿ ನಾಶವಾಗುವ ಯಾವ ಸಂಶೋಧನೆಯನ್ನೂ ಕೈಗೊಳ್ಳಬಾರದು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. 

ಇಲ್ಲಿನ ಅರಣ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ರೈತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಕೃಷಿ, ತೋಟಗಾರಿಕಾ ಬೆಳೆಗಳಿಗೆ ಬರುವ ರೋಗ, ಕೂಲಿ ಕಾರ್ಮಿಕರ ಕೊರತೆ, ವನ್ಯ ಪ್ರಾಣಿಗಳ ಹಾವಳಿಯಂಥ ತೀವ್ರ ತೊಂದರೆ ಇದೆ. ಆದರೂ ರೈತರು ಕೃಷಿ ಮಾಡುತ್ತಿದ್ದಾರೆ. ರೈತರು ಬೆಳೆಯುವ ಉತ್ಪನ್ನ ಜನಜೀವನಕ್ಕೆ ಹಾನಿಯಾಗದ ರೀತಿ ಬೆಳೆಯಬೇಕಿದೆ. ಆಹಾರ ವಿಷಪೂರಿತ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಆರೋಗ್ಯಪೂರ್ಣ ಆಹಾರ ಪೂರೈಸುವ ಗುರುತರ ಜವಾಬ್ದಾರಿ ರೈತರ ಮೇಲಿದೆ. ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಏಕರೂಪ ಬೆಳೆಯ ಬದಲು ಮಿಶ್ರಬೆಳೆಗೆ ಮಹತ್ವ ನೀಡಬೇಕು. ರೈತರ ಆದಾಯಕ್ಕೆ ಪೂರಕವಾಗಿ ಸಂಶೋಧನೆಗಳು ನಡೆದಂತೆ ರೈತರ ಆರೋಗ್ಯಕ್ಕೂ ಸಂಬಂಧಿಸಿ ಸಂಶೋಧನೆಗಳು ನಡೆಯಬೇಕು’ ಎಂದರು. 

‘ಮನರೇಗಾ ಯೋಜನೆಯೀಗ ಜಿ ರಾಮ್ ಜಿ ಎಂದು ಬದಲಾಗಿದೆ. ಆದರೆ ಉದ್ಯೋಗ ಖಾತರಿಯಲ್ಲಿ ಯಾವುದೇ ಬದಲಾವಣೆಯಿಲ್ಲ. 100 ದಿನದ ಭರವಸೆಯೀಗ 125 ದಿನಗಳಿಗೆ ಏರಿಕೆಯಾಗಿದೆ. ದರ ಪರಿಷ್ಕರಣೆಯಡಿ ಏರಿಕೆಗೆ ಅವಕಾಶ ಇಟ್ಟು, ಇಳಿಕೆಗೆ ಅವಕಾಶವಿಲ್ಲ. ಆಧುನಿಕ ಭಾರತ ನಿರ್ಮಾಣಕ್ಕೆ ಜಿ ರಾಮ್ ಜಿ ಯೋಜನೆ ಸಹಕಾರಿಯಾಗಲಿದೆ. ಗ್ರಾಮೀಣ ಬದುಕಿಗೆ ವಿಶ್ವಾಸ ತುಂಬುವ ಕಾರ್ಯ ಇದರಿಂದ ಆಗಲಿದೆ’ ಎಂದರು.‌

‘ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ದೇಶದ ಜನತೆಗೆ ಆಹಾರದ ಕೊರತೆಯಿತ್ತು‌. ಅಂಥ ವೇಳೆ ಆಹಾರ ಭದ್ರತೆಗೆ ನಾಂದಿ ಹಾಡಿದವರು ಚೌಧರಿ ಚರಣಸಿಂಗ್. ಅವರಿಗೆ ಮರಣೋತ್ತರ ಭಾರತರತ್ನ ಲಭಿಸಿರುವುದು ರೈತರಿಗೆ ಹೆಮ್ಮೆ’ ಎಂದರು.

ಆತ್ಮ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ದುಶ್ಯಂತರಾಜ್ ಕೊಲ್ಲೂರಿ, ಅರಣ್ಯ ಮಹಾವಿದ್ಯಾಲಯದ ಡೀನ್ ಆರ್.ವಾಸುದೇವ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ರೂಪಾ ಪಾಟೀಲ, ಕೃಷಿಕ ಸಮಾಜದ ಶಿರಸಿ ಘಟಕದ ಅಧ್ಯಕ್ಷ ಜಿ.ಆರ್.ಹೆಗಡೆ, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಆರ್.ಡಿ.ಹೆಗಡೆ ಜಾನ್ಮನೆ ಇದ್ದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ಸ್ವಾಗತಿಸಿದರು, ಕೃಷಿ ಇಲಾಖೆ ಉಪನಿರ್ದೇಶಕ ಪಿ.ಕೆ.ಪಾಂಡು ಪ್ರಾಸ್ತಾವಿಕ ಮಾತನಾಡಿದರು. ವಿವೇಕ ಹೆಗಡೆ ನಿರೂಪಿಸಿದರು.

ಜವಾಬ್ದಾರಿಯುತವಾಗಿ ವರ್ತಿಸಿ
‘ಮಳೆ ಮಾಪಕಗಳ ದುರಸ್ತಿ ರಾಜ್ಯ ಸರ್ಕಾರದ ಕಾರ್ಯವಾಗಿದೆ. ಆದರೆ ಇನ್ನೂ ಆ ಕಾರ್ಯವಾಗಿಲ್ಲ. ಇದರಿಂದ ಹವಾಮಾನ ಆಧಾರಿತ ಬೆಳೆವಿಮೆ ಬಿಡುಗಡೆಗೆ ವಿಮಾ ಕಂಪನಿ ತಗಾದೆ ತೆಗೆದಿದೆ. ಸಂಸದನಾಗಿ ವಿಮಾ ಮೊತ್ತ ಬಿಡುಗಡೆ ಮಾಡಿಸಲು ಕೇಂದ್ರ ಸರ್ಕಾರ ಮಟ್ಟದಲ್ಲಿ ಶ್ರಮಿಸುತ್ತಿದ್ದು, ರಾಜ್ಯ ಸರ್ಕಾರ ಕೂಡ ಜವಾಬ್ದಾರಿಯುತವಾಗಿ ವರ್ತಿಸುವ ಅಗತ್ಯವಿದೆ’ ಎಂದು ಸಭೆಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಶ್ರೇಷ್ಠ ಕೃಷಿಕರಿಗೆ ಪ್ರಶಸ್ತಿ
ಇದೇ ವೇಳೆ 2025-26ನೇ ಸಾಲಿನ ಆತ್ಮ ಯೋಜನೆಯಡಿ ಕೃಷಿಯಲ್ಲಿ ಸಮಗ್ರ ಬೆಳೆ ಪದ್ದತಿ ಅಳವಡಿಸಿಕೊಂಡು ತಾಲ್ಲೂಕು ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಮಹಾಬಲೇಶ್ವರ ಗೌಡ ಕಬ್ಬೆ, ತೋಟಗಾರಿಕೆ ಸಂಬಂಧಿಸಿ ಆನಂದ ಹೆಗಡೆ ಹುಳಗೋಳ, ಜೇನು ಕೃಷಿಕ ಪ್ರವೀಣ ಹೆಗಡೆ ಬಕ್ಕಳ, ಕೋಳಿ ಸಾಕಣೆದಾರ ಕನ್ನ ಬಡಗಿ ತೆಪ್ಪಾರ, ಹೈನುಗಾರ ಗಣಪತಿ ಹೆಗಡೆ ಸದಾಶಿವಳ್ಳಿ ಅವರನ್ನು ಸನ್ಮಾನಿಸಲಾಯಿತು. ವಿಕಸಿತ ಭಾರತ@2047ರ ಕುರಿತ ಹಸ್ತಪ್ರತಿಯನ್ನು ಬಿಡುಗಡೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.