ADVERTISEMENT

ದುಪ್ಪಟ್ಟಾಯ್ತು ನಾಡದೋಣಿ ಸೀಮೆಎಣ್ಣೆ ದರ: ಚಿಂತೆಯಲ್ಲಿ ಸಾಂಪ್ರದಾಯಿಕ ಮೀನುಗಾರ

ಗಣಪತಿ ಹೆಗಡೆ
Published 20 ಜುಲೈ 2025, 4:50 IST
Last Updated 20 ಜುಲೈ 2025, 4:50 IST
ಕಾರವಾರದ ಅಲಿಗದ್ದಾ ಕಡಲತೀರದಲ್ಲಿ ಇರಿಸಲಾಗಿರುವ ನಾಡದೋಣಿಗಳು (ಸಂಗ್ರಹ ಚಿತ್ರ)
ಕಾರವಾರದ ಅಲಿಗದ್ದಾ ಕಡಲತೀರದಲ್ಲಿ ಇರಿಸಲಾಗಿರುವ ನಾಡದೋಣಿಗಳು (ಸಂಗ್ರಹ ಚಿತ್ರ)   

ಕಾರವಾರ: ಬೆಳಕಿನ ಮೀನುಗಾರಿಕೆ, ಬುಲ್ ಟ್ರಾಲ್ ಚಟುವಟಿಕೆಯಿಂದ ಮೀನಿನ ಕೊರತೆಯಿಂದ ಕಂಗೆಟ್ಟಿರುವ ಸಾಂಪ್ರದಾಯಿಕ ಮೀನುಗಾರರಿಗೆ ಸೀಮೆಎಣ್ಣೆ ಬೆಲೆ ದುಬಾರಿ ಆಗಿರುವುದು ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.

ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಳ್ಳುವ ವೇಳೆಗೆ ಕಡಲಿಗೆ ಇಳಿಯಲು ಸಜ್ಜುಗೊಂಡಿರುವ ಮೋಟಾರೀಕೃತ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಖರೀದಿ ಆರ್ಥಿಕ ಏಟು ನೀಡಬಹುದು ಎಂಬ ಚಿಂತೆ ಕಾಡಲಾರಂಭಿಸಿದೆ. ವರ್ಷದ ಹಿಂದೆ ಪ್ರತಿ ಲೀಟರ್‌ಗೆ ₹35ಕ್ಕೆ ಸಿಗುತ್ತಿದ್ದ ಸೀಮೆಎಣ್ಣೆ ದರ ಈಗ ₹62ಕ್ಕೆ ಏರಿಕೆಯಾಗಿರುವುದು ಈ ಚಿಂತೆಗೆ ಕಾರಣ.

ಜಿಲ್ಲೆಯಲ್ಲಿ ಪರ್ಸಿನ್, ಟ್ರಾಲರ್ ದೋಣಿಗಳಿಗಿಂತ ನಾಡದೋಣಿಗಳ ಸಂಖ್ಯೆ ಹೆಚ್ಚಿದೆ. 8 ಸಾವಿರದಷ್ಟಿರುವ ನಾಡದೋಣಿಗಳ ಪೈಕಿ 4 ಸಾವಿರದಷ್ಟು ದೋಣಿಗಳು ಮೋಟಾರೀಕೃತವಾಗಿವೆ. ಇಂತಹ ದೋಣಿಗಳಿಗೆ ಸೀಮೆಎಣ್ಣೆ ಬಳಕೆ ಅನಿವಾರ್ಯ. ಯಾಂತ್ರೀಕೃತ ದೋಣಿಗಳಲ್ಲಿ ಟನ್‌ಗಟ್ಟಲೆ ಮೀನು ಹಿಡಿದು ತರಬಹುದು, ಆದರೆ, ನಾಡದೋಣಿಯಲ್ಲಿ ಕೆಲವೇ ಕೆಜಿ ಮೀನು ಹಿಡಿಯಲು ಸಾವಿರಾರು ರೂಪಾಯಿ ವ್ಯಯಿಸಬೇಕಾಗುತ್ತಿದೆ ಎನ್ನುತ್ತಾರೆ ಸಾಂಪ್ರದಾಯಿಕ ಮೀನುಗಾರರು.

ADVERTISEMENT

‘ಮೋಟಾರೀಕೃತ ನಾಡದೋಣಿಯೊಂದಕ್ಕೆ ಪ್ರತಿ ತಿಂಗಳು 200 ಲೀಟರ್ ಸೀಮೆಎಣ್ಣೆ ವಿತರಿಸಲಾಗುತ್ತಿದೆ. ವರ್ಷದಲ್ಲಿ 9 ತಿಂಗಳು ಮಾತ್ರವೇ ಈ ಸೌಲಭ್ಯವಿದೆ. 2 ವರ್ಷದ ಹಿಂದೆ ಲೀಟರ್ ಸೀಮೆಎಣ್ಣೆ ₹35ಕ್ಕೆ ಸಿಗುತ್ತಿತ್ತು. ಈಗ ಅದರ ದರವು ದುಪ್ಪಟ್ಟಾಗಿದೆ. ದೋಣಿಯನ್ನು ಸಮುದ್ರಕ್ಕೆ ಇಳಿಸಿದರೆ ಪ್ರತಿ ತಾಸಿಗೆ ಕನಿಷ್ಠ 8 ಲೀಟರ್ ಸೀಮೆಎಣ್ಣೆ ಬೇಕಾಗುತ್ತದೆ. ಅದರ ಜೊತೆಗೆ ಸೇರಿಸುವ 2ಟಿ ಎಂಜಿನ್ ಆಯಿಲ್, ಪೆಟ್ರೋಲ್ ವೆಚ್ಚ ಸೇರಿಸಿದರೆ ತಾಸಿಗೆ ಕನಿಷ್ಠ ₹850 ರಿಂದ ₹900 ವೆಚ್ಚವಾಗುತ್ತದೆ. ನಾಡದೋಣಿಯೊಂದರ ಇಂಧನ ವೆಚ್ಚಕ್ಕೆ ದಿನಕ್ಕೆ ₹6 ರಿಂದ ₹8 ಸಾವಿರದವರೆಗೆ ಖರ್ಚು ತಗಲುತ್ತದೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಅಷ್ಟೊಂದು ಮೀನಿನ ಲಭ್ಯತೆಯೂ ಇಲ್ಲ. ಇದು ಮೀನುಗಾರರಿಗೆ ಆರ್ಥಿಕ ಹೊರೆ’ ಎಂದು ನಾಡದೋಣಿ ಮೀನುಗಾರರ ಒಕ್ಕೂಟದ ರಾಜ್ಯ ಘಟಕದ ಸಹ ಕಾರ್ಯದರ್ಶಿ ಸೋಮನಾಥ ಮೊಗೇರ ತಿಳಿಸಿದರು.

‘ಮೋಟಾರೀಕೃತ ನಾಡದೋಣಿಗಳು ಆಗಸ್ಟ್ ಮೊದಲ ವಾರದಿಂದಲೇ ಮೀನುಗಾರಿಕೆ ಚಟುವಟಿಕೆ ಆರಂಭಿಸುತ್ತವೆ. ಆದರೆ, ಸೆಪ್ಟೆಂಬರ್ ತಿಂಗಳಿನಿಂದ ಸೀಮೆಎಣ್ಣೆ ವಿತರಣೆ ಆರಂಭವಾಗುತ್ತದೆ. ಅಷ್ಟರ ಒಳಗೆ ಸೀಮೆಎಣ್ಣೆ ದರ ಇಳಿಕೆ ಮಾಡಿದರೆ ಅನುಕೂಲ ಆಗಲಿದೆ’ ಎಂದರು. 

ಸೀಮೆಎಣ್ಣೆ ದರ ಇಳಿಕೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಲು ನಾಡದೋಣಿ ಮೀನುಗಾರರ ಒಕ್ಕೂಟ ಸಭೆ ನಡೆಸಿ ನಿರ್ಧರಿಸಿದೆ
ಸೋಮನಾಥ ಮೊಗೇರ ನಾಡದೋಣಿ ಮೀನುಗಾರರ ಒಕ್ಕೂಟದ ಸಹ ಕಾರ್ಯದರ್ಶಿ
ಕೇಂದ್ರದಿಂದ ಸೀಮೆಎಣ್ಣೆ ಪೂರೈಕೆ ಸ್ಥಗಿತವಾಗಿದೆ. ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ (ಕೆಎಫ್‌ಡಿಸಿ) ಸೀಮೆಎಣ್ಣೆ ಖರೀದಿಸಿ ಮೀನುಗಾರಿಕೆ ಸಹಕಾರ ಸಂಘಗಳ ಮೂಲಕ ವಿತರಣೆ ಮಾಡಲಾಗುತ್ತಿದೆ
ರವೀಂದ್ರ ತಳೇಕರ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ

ದರ ಏರಿಕೆಗೆ ಕಾರಣವೇನು?:

‘ಪರಿಸರ ಮಾಲಿನ್ಯ ನಿಯಂತ್ರಣದ ದೃಷ್ಟಿಯಿಂದ ಕೇಂದ್ರ ಸರ್ಕಾರ ಸೀಮೆಎಣ್ಣೆ ಬಳಕೆ ನಿಯಂತ್ರಿಸುತ್ತಿದೆ. ಹೀಗಾಗಿ ಸೀಮೆಎಣ್ಣೆ ಪೂರೈಕೆ ಸ್ಥಗಿತವಾಗಿದೆ. ಈ ಮೊದಲು ಅಲ್ಲಿಂದ ಪೂರೈಕೆಯಾಗುತ್ತಿದ್ದ ಸೀಮೆಎಣ್ಣೆಯು ₹35 ದರಕ್ಕೆ ಮೀನುಗಾರರಿಗೆ ಲಭಿಸುತ್ತಿತ್ತು. ಸದ್ಯ ಮಾಲಿನ್ಯ ಪ್ರಮಾಣ ಕಡಿಮೆ ಆಗಬಹುದಾದ ಬಿಳಿ ಸೀಮೆಎಣ್ಣೆಯನ್ನು ಕೆಎಫ್‌ಡಿಸಿ ಮೂಲಕ ಖರೀದಿಸಿ ರಾಜ್ಯ ಸರ್ಕಾರ ಮೀನುಗಾರರಿಗೆ ಒದಗಿಸುತ್ತಿದೆ. ಈ ಸೀಮೆಎಣ್ಣೆಯ ದರವು ಹೆಚ್ಚಿದೆ’ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪ್ರತೀಕ್ ಶೇಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಸೀಮೆಎಣ್ಣೆ ಬದಲು ಪೆಟ್ರೋಲ್ ಎಂಜಿನ್ ಅಳವಡಿಕೆಗೆ ಇಲಾಖೆಯು ಪ್ರೋತ್ಸಾಹಿಸುತ್ತಿದೆ. ಪ್ರತಿ ಎಂಜಿನ್ ಖರೀದಿಗೆ ತಲಾ ₹50 ಸಾವಿರ ಸಹಾಯಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 2 ಸಾವಿರಷ್ಟು ನಾಡದೋಣಿಗಳಿಗೆ ಈಗಾಗಲೆ ಪೆಟ್ರೋಲ್ ಎಂಜಿನ್ ಅಳವಡಿಕೆಯಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.