
ಶಿರಸಿ: ‘ಹಿರಿಯರ ಸೇವೆ ಮಾಡುವುದು ದೇವರ ಪೂಜೆಗೆ ಸಮಾನ’ ಎಂದು ಉಪವಿಭಾಗಾಧಿಕಾರಿ ಚಂದ್ರಶೇಖರ್ ಆರ್.ಜಿ. ಹೇಳಿದರು.
ಇಲ್ಲಿನ ಸುಯೋಗಾಶ್ರಮದಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಎಸ್.ಎಸ್.ಭಟ್ ಲೋಕೇಶ್ವರ ಅವರ ಆಶಯದಂತೆ ಭಾನುವಾರ ಆಯೋಜಿಸಲಾಗಿದ್ದ ‘ಹೊದೆಯಲೊಂದು ರಗ್ಗು, ಕುಡಿಯಲೊಂದು ಮಗ್ಗು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಆಧುನಿಕತೆಯ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಭೆಗಳು ಅವಕಾಶಗಳನ್ನು ಅರಸಿ ಹೋಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯರ ಇಳಿ ವಯಸ್ಸಿನ ಸಮಸ್ಯೆಗಳಿಗೆ ವೃದ್ಧಾಶ್ರಮಗಳು ಮಾತ್ರ ಸೂಕ್ತ ಪರಿಹಾರ ಒದಗಿಸಬಲ್ಲವು. ಆದ್ದರಿಂದ ವೃದ್ಧಾಶ್ರಮಗಳ ಬಲವರ್ಧನೆಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸುವುದು ಇಂದಿನ ಅಗತ್ಯವಾಗಿದೆ’ ಎಂದು ತಿಳಿಸಿದರು.
ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ನೂತನ ಸೋಲಾರ್ ದೀಪವನ್ನು ಉದ್ಘಾಟಿಸಿ, ‘ಪರಿಸರ ಸ್ನೇಹಿ ಹಾಗೂ ನವೀಕರಿಸಬಹುದಾದ ಇಂಧನ ಬಳಕೆಯ ಮಹತ್ವದ ಬಗ್ಗೆ ತಿಳಿಸಿದರು. ಇದೇ ವೇಳೆ ಎಸ್.ಎಸ್.ಭಟ್ ಲೋಕೇಶ್ವರ ಅವರ ಸಾಮಾಜಿಕ ಸೇವಾ ಕಾರ್ಯಗಳು ಇತರರಿಗೆ ಮಾದರಿಯಾಗಲಿ’ ಎಂದು ಹೇಳಿದರು.
ಸ್ಕೊಡ್‌ವೆಸ್ ಆಡಳಿತಾಧಿಕಾರಿ ಸರಸ್ವತಿ ಎನ್. ರವಿ, ಯಡಳ್ಳಿ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ. ಹೆಗಡೆ ಹಾಗೂ ಸುಯೋಗಾಶ್ರಮದ ಮುಖ್ಯಸ್ಥೆ ಲತಿಕಾ ಭಟ್ ಉಪಸ್ಥಿತರಿದ್ದರು. ಸ್ಕೊಡ್‌ವೆಸ್ ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ ನಿರೂಪಿಸಿ ವಂದಿಸಿದರು. ಇದೇ ವೇಳೆ ಸುಯೋಗಾಶ್ರಮದ ಹಿರಿಯರಿಗೆ ಉಚಿತವಾಗಿ ರಗ್ಗು ಮತ್ತು ಮಗ್ಗುಗಳನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.