ADVERTISEMENT

ಆರಂಭಗೊಳ್ಳದ ಕಾಮಗಾರಿಗಳ ಪ್ರತ್ಯೇಕ ಪಟ್ಟಿ

ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 16:02 IST
Last Updated 29 ಮಾರ್ಚ್ 2023, 16:02 IST
ಪ್ರಭುಲಿಂಗ ಕವಳಿಕಟ್ಟಿ
ಪ್ರಭುಲಿಂಗ ಕವಳಿಕಟ್ಟಿ   

ಕಾರವಾರ: ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಬುಧವಾರದಿಂದ ಜಾರಿಯಾಗಿದ್ದು ಅನುಮೋದನೆಗೊಂಡು ಆರಂಭಗೊಳ್ಳದ ಕಾಮಗಾರಿಗಳು ಮತ್ತು ಈಗಾಗಲೆ ಆರಂಭಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಾಗಿದೆ’ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

‘ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ದೂರು ಸಲ್ಲಿಕೆಯಾಗುವ ಮುನ್ನೆಚ್ಚರಿಕೆ ಕಾರಣ ಇಂತಹ ಪಟ್ಟಿ ಸಿದ್ಧವಿಟ್ಟುಕೊಂಡಿದ್ದೇವೆ. ಸರ್ಕಾರದಿಂದ ಅನುಮೋದನೆ ದೊರೆತ ಕಾಮಗಾರಿ, ಅನುಮೋದನೆ ದೊರೆತು ಆರಂಭಗೊಂಡ ಕಾಮಗಾರಿ, ಅನುಮೋದನೆ ದೊರೆಯದ ಕಾಮಗಾರಿಗಳ ಮಾಹಿತಿ ಕಲೆಹಾಕಿದ್ದೇವೆ. ಜನಪ್ರತಿನಿಧಿಗಳು ಭೂಮಿಪೂಜೆ ನಡೆಸಿದ ಮಾತ್ರಕ್ಕೆ ಕಾಮಗಾರಿ ಆರಂಭವಾದಂತಲ್ಲ. ಕೆಲಸ ನೀತಿ ಸಂಹಿತೆ ಜಾರಿಗೆ ಮುನ್ನ ಆರಂಭಗೊಂಡಿದ್ದರೆ ಮಾತ್ರ ಅವುಗಳ ಮುಂದುವರಿಕೆಗೆ ಅವಕಾಶವಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ನೀತಿ ಸಂಹಿತೆ ಜಾರಿಯಾಗುವ ಮೂರು ದಿನ ಮೊದಲೇ ಜಿಲ್ಲೆಯಾದ್ಯಂತ ಬ್ಯಾನರ್, ಬಂಟಿಂಗ್ಸ್ ತೆರವು ಮಾಡಲಾಗಿದೆ. ಪೊಲೀಸ್, ಅಬಕಾರಿ ತಂಡಗಳು ಚೆಕ್‍ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಲಾಗುತ್ತಿವೆ. ಕಳೆದ ಹತ್ತು ದಿನಗಳಲ್ಲಿ ಮಾಜಾಳಿ ಚೆಕ್‍ಪೋಸ್ಟ್‌ನಲ್ಲಿ ₹10 ಲಕ್ಷ ನಗದು, ಜಿಲ್ಲೆಯ ವಿವಿಧೆಡೆ ₹40.75 ಲಕ್ಷ ಮೌಲ್ಯದ ಅಕ್ರಮ ಮದ್ಯ, ₹ 7.50 ಲಕ್ಷ ಮೌಲ್ಯದ ಆಭರಣ ಸೇರಿದಂತೆ ₹69 ಲಕ್ಷ ಮೌಲ್ಯದ ಪರಿಕರ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘80 ವರ್ಷ ಮೇಲ್ಪಟ್ಟವರಿಗೆ, ಅಂಗವಿಕಲರಿಗೆ ಅಂಚೆ ಮತದಾನ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿ ಅಗತ್ಯ ಮಾಹಿತಿ ನೀಡಲಾಗಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಸಿಇಒ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಇದ್ದರು.

––––––––––––––––––

ಅಕ್ರಮ ಮದ್ಯ: ತಿಂಗಳೊಳಗೆ 102 ಪ್ರಕರಣ

ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಮುನ್ನವೇ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದ ಅಕ್ರಮ ಮದ್ಯ ಸಾಗಾಟ ಪ್ರಕರಣಗಳನ್ನು ಬೇಧಿಸಲಾಗಿದೆ. ಗೋವಾ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಇಲ್ಲಿ ಪಕ್ಕದ ರಾಜ್ಯದ ಅಗ್ಗದ ಮದ್ಯವನ್ನು ಹೇರಳ ಪ್ರಮಾಣದಲ್ಲಿ ತರುವ ಪ್ರಯತ್ನ ನಡೆಯುತ್ತಿದೆ.

ಮಾರ್ಚ್ 4 ರಿಂದ ಮಾರ್ಚ್ 29ರ ವರೆಗೆ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿದ್ದ ಅಬಕಾರಿ ತಂಡ 3138.7 ಲೀ. ಗೋವಾ ಅಕ್ರಮ ಮದ್ಯ, 1267 ಲೀ. ಅಕ್ರಮ ಮದ್ಯ, 2460 ಲೀ. ಬಿಯರ್ ವಶಕ್ಕೆ ಪಡೆದಿದೆ. 2 ದ್ವಿಚಕ್ರ ವಾಹನ, 4 ನಾಲ್ಕು ಚಕ್ರದ ವಾಹನ, 1 ಬಸ್ ವಶಕ್ಕೆ ಪಡೆಯಲಾಗಿದೆ. ಒಟ್ಟೂ 74 ಮಂದಿಯನ್ನು ಬಂಧಿಸಲಾಗಿದೆ.

‘ಚುನಾವಣೆಗೆ ಹಲವು ದಿನಗಳ ಮುನ್ನವೇ ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿಡುವ ಸಾಧ್ಯತೆ ಹೆಚ್ಚು. ಗೋವಾ ಗಡಿಗೆ ಹೊಂದಿಕೊಂಡೇ ಇರುವ ಪ್ರದೇಶವಾಗಿರುವ ಕಾರಣ ಇವುಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕಿದೆ. ಆಯಾ ವಲಯವಾರು ಅಧಿಕಾರಿ, ಸಿಬ್ಬಂದಿಯ ಪ್ರತ್ಯೇಕ ತಂಡ ರಚಿಸಿ ಗಸ್ತು ಹೆಚ್ಚಿಸಲಾಗುತ್ತಿದೆ’ ಎಂದು ಅಬಕಾರಿ ಉಪಾಯುಕ್ತ ಜಗದೀಶ ಕುಲಕರ್ಣಿ ತಿಳಿಸಿದ್ದಾರೆ.

ಅಂಕಿ–ಅಂಶ

₹40.75 ಲಕ್ಷ

ಅಕ್ರಮ ಮದ್ಯ, ವಾಹನಗಳ ಮೌಲ್ಯ

7328 ಲೀ.

ವಶಕ್ಕೆ ‍ಪಡೆದ ಅಕ್ರಮ ಮದ್ಯ ಪ್ರಮಾಣ

₹11.56 ಲಕ್ಷ

ಮಾದಕ ಪದಾರ್ಥ

₹7.50 ಲಕ್ಷ

ದಾಖಲೆ ರಹಿತ ಬೆಳ್ಳಿ ಆಭರಣ

₹10.45 ಲಕ್ಷ

ದಾಖಲೆ ರಹಿತ ನಗದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.