ಸಿದ್ದಾಪುರ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆ. 17 ರಿಂದ ಆರಂಭವಾಗುವ ಸೇವಾ ಪಾಕ್ಷಿಕ ಅಭಿಯಾನವು ಅ. 2ರ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀಜೀ ಜಯಂತಿ ವರೆಗೆ ನಡೆಯಲಿದೆ. ಎಲ್ಲಾ ಹಂತದ ಪ್ರಮುಖರು ಹಾಗೂ ಕಾರ್ಯಕರ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಹೇಳಿದರು.
ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ನಡೆದ ಬಿಜೆಪಿ ಮಂಡಲದ ಸೇವಾ ಪಾಕ್ಷಿಕ ಅಭಿಯಾನದ ಕಾರ್ಯಾಗಾರವನ್ನು ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು.
‘ಸಿದ್ದಾಪುರವನ್ನು ಸಾಗರಕ್ಕೆ ಸೇರಿಸುವಂತೆ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಅವರ ವೈಯಕ್ತಿಕ ಮತ್ತು ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿದೆ. ಇದಕ್ಕೆ ಸಿದ್ದಾಪುರದ ಜನರ ಸಹಮತಿ ಇಲ್ಲ. ಶಿರಸಿಯ ಜೊತೆಗೆ ಹಾಗೂ ಉತ್ತರ ಕನ್ನಡದೊಂದಿಗೆ ಸಿದ್ದಾಪುರದ ಜನರ ಒಡನಾಟ ಯಾವತ್ತೂ ಇದೆ’ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ ಮಾತನಾಡಿ, ’ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರವಿದೆ. ಅಲ್ಪಸಂಖ್ಯಾತರ ಓಲೈಕೆ ಹಾಗೂ ವೋಟ್ ಬ್ಯಾಂಕ್ ರಾಜಕಾರಣ ಕಾಂಗ್ರೆಸ್ ನೀತಿಯೇ ಆಗಿದೆ’ ಎಂದು ದೂರಿದರು.
ಬಿಜೆಪಿ ಜಿಲ್ಲಾ ವಿಶೇಷ ಆಹ್ವಾನಿತ ಗುರುರಾಜ ಶಾನಭಾಗ, ಜಿ.ಪಂ ಮಾಜಿ ಸದಸ್ಯ ಎಂ.ಜಿ.ಹೆಗಡೆ ಗೆಜ್ಜೆ ಮಾತನಾಡಿದರು.
ಬಿಜೆಪಿ ಪ್ರಮುಖರು, ಸದಸ್ಯರು ಇದ್ದರು.
ಶಿರಸಿ: ಜಿಲ್ಲೆಯ ಎಲ್ಲ ಮಂಡಲಗಳಲ್ಲಿಅತ್ಯಂತ ಯೋಜನಾ ಬದ್ಧ ಹಾಗೂ ವ್ಯಾಪಕವಾಗಿ ಸೇವಾ ಕಾರ್ಯಕ್ರಮ ಸಂಘಟಿಸಿ, ಪ್ರಧಾನಿ ಮೋದಿ ಅವರ ಧ್ಯೇಯವಾದ ಸೇವಾ ಹೀ ಪರಮೋ ಧರ್ಮ ಇದಕ್ಕೆ ಅನ್ವರ್ಥವಾಗಿ ಎಲ್ಲಾ ಹಂತಗಳಲ್ಲಿ ಸೇವಾ ಚಟುವಟಿಕೆ ನಡೆಸಲಾಗುವುದು ಎಂದು ಬಿಜೆಪಿ ಉತ್ತರ ಕನ್ನಡ ಯುವ ಮೋರ್ಚಾ ಅಧ್ಯಕ್ಷ ಪ್ರೇಮಕುಮಾರ ನಾಯ್ಕ ಹೇಳಿದರು.
ನಗರದ ದೀನ್ ದಯಾಳ ಸಭಾಭವನದಲ್ಲಿ ಬಿಜೆಪಿ ನಗರ ಮಂಡಲದ ಸೇವಾ ಪಾಕ್ಷಿಕ ಅಭಿಯಾನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಸ್ವದೇಶಿ ವಸ್ತು ಬಳಕೆಯ ಸಂಕಲ್ಪದೊಂದಿಗೆ, ವೋಕಲ್ ಫಾರ್ ಲೋಕಲ್ ಪೂರಕವಾಗಿ ಆತ್ಮನಿರ್ಭರ ಭಾರತ ಅಭಿಯಾನವನ್ನು ಮುಂದಿನ ಮೂರು ತಿಂಗಳು ಹಮ್ಮಿಕೊಳ್ಳೋಣ’ ಎಂದು ಹೇಳಿದರು.
‘ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಸೆ.17ರಿಂದ ಆರಂಭವಾಗುವ ಸೇವಾ ಪಾಕ್ಷಿಕ ಅಭಿಯಾನವು ಅ.2ರ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜಯಂತಿವರೆಗೆ ನಡೆಯಲಿದೆ’ ಎಂದರು.
ಮಂಡಲ ಅಧ್ಯಕ್ಷ ಆನಂದ ಸಾಲೇರ ಅವರು ಅಭಿಯಾನದ ಮಂಡಲ ಸಂಚಾಲಕರು, ಸಹ ಸಂಚಾಲಕರ ಹೆಸರನ್ನು ಘೋಷಣೆ ಮಾಡಿದರು. ಇದೇ ವೇಳೆ ಅಟಲ್ ಜನ್ಮಶತಮಾನೋತ್ಸವ ನಿಮಿತ್ತ ನಡೆದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನವ್ಯಾ ಹನುಮಂತ ಮಡಿವಾಳ ಅವರಿಗೆ ಸನ್ಮಾನ ಮಾಡಲಾಯಿತು.
ಶಿರಸಿ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ರಸಿ ನಗರ ಪ್ರಭಾರಿ ಚಂದ್ರಕಲಾ ಭಟ್, ಜಿಲ್ಲಾ ಎಸ್‍ಟಿ ಮೋರ್ಚಾ ಅಧ್ಯಕ್ಷ ಶ್ರೀಕಾಂತ ಬಳ್ಳಾರಿ, ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಮಾಲತೇಶ ಹಾದಿಮನಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.