ADVERTISEMENT

ಶಿರಸಿ | ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ವೃದ್ಧೆಗೆ ಆಸರೆಯಾದ ವಾತ್ಸಲ್ಯ ಮನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 8:17 IST
Last Updated 21 ಫೆಬ್ರುವರಿ 2026, 8:17 IST
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಕಾರ್ಯಕರ್ತರು ಶ್ರಮದಾನದ ಮೂಲಕ ನಿರ್ಮಿಸಿರುವ ವಾತ್ಸಲ್ಯ ಮನೆಯನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಕಾರ್ಯಕರ್ತರು ಶ್ರಮದಾನದ ಮೂಲಕ ನಿರ್ಮಿಸಿರುವ ವಾತ್ಸಲ್ಯ ಮನೆಯನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು   

ಶಿರಸಿ: ತಾಲ್ಲೂಕಿನ ಶಿರಸಿಮಕ್ಕಿ ಬಳಿಯ ವಡಗೆರೆಯ 72 ವರ್ಷದ ವೃದ್ಧೆ ಮಾದೇವಿ ನಾರಾಯಣ ಗೌಡ ಅವರ ಮೂರು ದಶಕಗಳ ಸಂಕಷ್ಟದ ಬದುಕಿಗೆ ಈಗ ಸುಸಜ್ಜಿತ ಮನೆಯ ಆಸರೆ ದೊರೆತಿದೆ. ಶಿವರಾತ್ರಿಯಂದು ಈ ಹೊಸ ಮನೆಗೆ ಪ್ರವೇಶಿಸುವ ಮೂಲಕ ಅವರ ಜೀವನದಲ್ಲಿ ಭರವಸೆಯ ಹೊಸ ಬೆಳಕು ಮೂಡಿದೆ.

ಬಾಲ್ಯದಿಂದಲೂ ಕೃಷಿ ಹಾಗೂ ಕೂಲಿ ಕಾರ್ಯ ಮಾಡಿಕೊಂಡಿದ್ದ ಮಾದೇವಿ ಅವರು, ಅವಿವಾಹಿತರಾಗಿದ್ದು ತಮ್ಮ ಸಹೋದರನೊಂದಿಗೆ ಸಣ್ಣ ಜೋಪಡಿಯಲ್ಲಿ ವಾಸವಿದ್ದರು. ಕೆಲವು ವರ್ಷಗಳ ಹಿಂದೆ ಸಹೋದರ ಮೃತಪಟ್ಟ ನಂತರ ಒಂಟಿಯಾದ ಅವರಿಗೆ ವೃದ್ಧಾಪ್ಯ ವೇತನವೇ ಜೀವನಕ್ಕೆ ಆಧಾರವಾಗಿತ್ತು. ಅವರು ವಾಸವಿದ್ದ ಜೋಪಡಿ ಸಂಪೂರ್ಣ ಶಿಥಿಲಗೊಂಡು ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿತ್ತು. ಮಲೆನಾಡಿನ ಭೀಕರ ಮಳೆಗಾಲದಲ್ಲಿ ಈ ಹಳೆಯ ಮನೆಯಲ್ಲಿ ವಾಸಿಸುವುದು ಅಪಾಯಕಾರಿ ಎಂದು ಮನಗಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಅವರಿಗೆ ನೆರವಾಗಲು ಮುಂದಾದರು.

ಆರಂಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಇವರನ್ನು ವೃದ್ಧಾಶ್ರಮಕ್ಕೆ ಸೇರಿಸಲು ಅಧಿಕಾರಿಗಳು ಪ್ರಯತ್ನಿಸಿದ್ದರು. ಆದರೆ, ತಾವು ಹುಟ್ಟಿ ಬೆಳೆದ ಮನೆ ಬಿಟ್ಟು ಬರಲು ಮಾದೇವಿ ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವಾತ್ಸಲ್ಯ ಯೋಜನೆಯಡಿ ಹಳೆಯ ಮನೆಯ ಪಕ್ಕದಲ್ಲಿಯೇ ಹೊಸ ಮನೆಯನ್ನು ನಿರ್ಮಿಸಿಕೊಡಲು ನಿರ್ಧರಿಸಲಾಯಿತು.

ADVERTISEMENT

ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ ಎಂ., ಅಧಿಕಾರಿಗಳಾದ ರಾಘವೇಂದ್ರ ಕೆ., ಮಲ್ಲಿಕಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಕಾರ್ಯಕರ್ತರು ಶ್ರಮದಾನದ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಸುಸಜ್ಜಿತ ಮನೆಯನ್ನು ನಿರ್ಮಿಸಿದ್ದಾರೆ. ಭಾನುವಾರ ಶಿವರಾತ್ರಿಯ ಶುಭ ದಿನದಂದು ಮಾದೇವಿ ಅವರು ತಮ್ಮ ಹೊಸ ಮನೆಗೆ ಸಂತಸದಿಂದ ಪ್ರವೇಶ ಮಾಡಿದರು. ಸಂಕಷ್ಟದ ಕಾಲದಲ್ಲಿ ತಮಗೆ ನೆರವಾದ ಸಂಸ್ಥೆ ಹಾಗೂ ಕಾರ್ಯಕರ್ತರಿಗೆ ವೃದ್ಧೆ ಕೃತಜ್ಞತೆ ಸಲ್ಲಿಸಿದ್ದಾರೆ.

ನಿರ್ಗತಿಕರು ಮತ್ತು ಅಸಹಾಯಕ ಸ್ಥಿತಿಯಲ್ಲಿರುವವರಿಗೆ ಉಚಿತವಾಗಿ ವಾತ್ಸಲ್ಯ ಮನೆ ನಿರ್ಮಿಸಿ ಸೂರು ಕಲ್ಪಿಸಲಾಗುತ್ತಿದೆ. ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಇದುವರೆಗೆ 11 ವಾತ್ಸಲ್ಯ ಮನೆ ನಿರ್ಮಿಸಿದ್ದೇವೆ
ದಿನೇಶ ಎಂ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.