
ಗೇರುಸೊಪ್ಪ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಸಂಬಂಧಿಸಿದಂತೆ ಇಲ್ಲಿನ ಗುತ್ತಿ ಕನ್ನಿಕಾ ಪರಮೇಶ್ವರಿ ದೇವಾಲಯ ಸಭಾಂಗಣದಲ್ಲಿ ಗುರುವಾರ ನಡೆದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಯೋಜನೆಗೆ ಪ್ರಬಲ ವಿರೋಧ ಅಭಿಪ್ರಾಯ ವ್ಯಕ್ತವಾಯಿತು.
ಶರಾವತಿ ಕೊಳ್ಳ ಉಳಿಯಬೇಕು, ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಪದವಿ ಕಾಲೇಜಿನ ವಿದ್ಯಾರ್ಥಿಗಳೇ 1,250ಕ್ಕೂ ಹೆಚ್ಚು ಅರ್ಜಿಗಳನ್ನು ಯೋಜನೆ ವಿರುದ್ಧ ಸಲ್ಲಿಸಿದರು. ಆನ್‌ಲೈನ್ ಮೂಲಕ 4,500ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾದವು. ಜನರ ಪ್ರಶ್ನೆಗಳಿಗೆ ಉತ್ತರಿಸದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತವಾಯಿತು.
ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯ್ ವಿ.ಎಂ. ಯೋಜನೆಯ ಕುರಿತ ವಿವರ ನೀಡಿದರು. ಅಹವಾಲು ಸಲ್ಲಿಕೆಗೆ ಅವಕಾಶ ನೀಡುತ್ತಿದ್ದಂತೆ ಸಂಕ್ಷಿಪ್ತವಾಗಿ ಅಭಿಪ್ರಾಯ ಸಲ್ಲಿಸಲು ಅಧಿಕಾರಿಗಳು ಸೂಚಿಸಿದರು.
‘ಜನರ ಅಹವಾಲನ್ನು ತಾಳ್ಮೆಯಿಂದ ಕೇಳುವ ವ್ಯವಧಾನ ಇರಬೇಕು. ಸಭೆ ಕರೆದು ಸಂಕ್ಷಿಪ್ತವಾಗಿ ಮಾತನಾಡಿ ಎಂಬುದು ಸರಿಯಲ್ಲ’ ಎಂದು ಬಂಗಾರಮಕ್ಕಿಯ ಮಾರುತಿ ಗುರೂಜಿ ಹೇಳಿದರು.
‘ಯೋಜನೆ ಜಾರಿಯಿಂದ ಉಂಟಾಗುವ ಹಾನಿಗೆ ಕೈಗೊಳ್ಳುವ ಉಪಕ್ರಮಗಳನ್ನು ಕಾಟಾಚಾರಕ್ಕೆ ವಿವರಿಸಲಾಗುತ್ತಿದೆ. ಆದರೆ, ಅವುಗಳ ಬಗ್ಗೆ ವಿಸ್ತೃತ ವಿವರಣೆ ಇಲ್ಲ. ಯೋಜನೆ ವಿರುದ್ಧ ಕೇಂದ್ರ ಸರ್ಕಾರಕ್ಕೆ ದೂರು ನೀಡಲಾಗಿದೆ’ ಎಂದರು.
‘ಯೋಜನೆಗಳನ್ನು ಜಿಲ್ಲೆಯಲ್ಲಿ ಒತ್ತಾಯಪೂರ್ವಕವಾಗಿ ಹೇರಲಾಗುತ್ತದೆ. ಪರಿಸರ ನಾಶವಾಗುತ್ತದೆ. ಕೆಲಸವೂ ಅನ್ಯರ ಪಾಲಾಗುತ್ತಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಲು ಶಾಂತಿಪ್ರಿಯ ಜಿಲ್ಲೆ ಎಂಬ ಹಣೆಪಟ್ಟಿ ಕಳಚಲು ಜನರು ಸಿದ್ದರಿದ್ದಾರೆ’ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಹೇಳಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ‘ರಾಜ್ಯದಿಂದ ಅನ್ಯ ರಾಜ್ಯಗಳಿಗೆ ವಿದ್ಯುತ್ ಪೂರೈಕೆ ಆಗುತ್ತಿದೆ. ಜನವಿರೋಧದ ನಡುವೆಯೂ ಯೋಜನೆ ಜಾರಿಗೆ ತರಲು ಮುಂದಾದರೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುತ್ತದೆ’ ಎಂದರು.
ಬೇಗೋಡಿ ಗ್ರಾಮಸ್ಥ ಮಂಜುನಾಥ ಹೆಗಡೆ, ‘ಜೋಗ ವಿದ್ಯುದಾಗಾರ ಯೋಜನೆಯಿಂದಾಗಿಯೇ ಶರಾವತಿ ಕೆಳಭಾಗ ನಾಶವಾಗಿದೆ. ಈ ಭಾಗದಲ್ಲಿ ಸಣ್ಣ ಕಾಲುಸಂಕವನ್ನೂ ಕಟ್ಟಿಕೊಡುವುದಿಲ್ಲ. ರಸ್ತೆ ಹಾಳಾದರೂ ಸರಿಪಡಿಸಲಿಲ್ಲ’ ಎಂದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ‘ಅಭಯಾರಣ್ಯ ಪ್ರದೇಶದಲ್ಲಿ ಯೋಜನೆ ಜಾರಿಗೆ ತರಲು ಮುಂದಾಗಲಾಗಿದೆ. 1,200 ಎಕರೆ ಅರಣ್ಯ ಪ್ರದೇಶಕ್ಕೆ ಹಾನಿಯಾಗಲಿದೆ’ ಎಂದರು.
‘ಯೋಜನೆಯ ವಿಸ್ತೃತ ಯೋಜನಾ ವರದಿಯೇ ಅವೈಜ್ಞಾನಿಕ. ಸ್ಪಷ್ಟ ಅಧ್ಯಯನ ನಡೆಸದೆ, ಪರಿಸರದ ಮೇಲಿನ ಪ್ರತಿಕೂಲ ಅಧ್ಯಯನ ನಡೆಸದೆ ವರದಿ ಸಿದ್ಧಪಡಿಸಲಾಗಿದೆ. ಯೋಜನೆಯನ್ನು ಕೈಬಿಡಲೇಬೇಕು’ ಎಂದು ವಕೀಲೆ ಶ್ರೀಜಾ ಚಕ್ರವರ್ತಿ ಒತ್ತಾಯಿಸಿದರು.
ಪರಿಸರ ತಜ್ಷ ಎಂ.ಡಿ.ಸುಭಾಷಚಂದ್ರನ್, ಶಿವರಾಮ ಗಾಂವಕರ, ಸೂರಜ್ ನಾಯ್ಕ ಸೋನಿ, ಸಿಪಿಐಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಯಮುನಾ ಗಾಂವಕರ, ಇತರರು ಅಭಿಪ್ರಾಯ ಮಂಡಿಸಿದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಕೀರ್ತಿಕುಮಾರ್, ಪ್ರಾದೇಶಿಕ ಪರಿಸರ ಅಧಿಕಾರಿ ಬಿ.ಕೆ.ಸಂತೋಷ್ ಇದ್ದರು.
ಪಶ್ಚಿಮ ಘಟ್ಟ ಬಿಟ್ಟು ತೊಲಗಿ
‘ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ವಿಭಾಗ ಮಟ್ಟದ ಅರಣ್ಯ ಅಧಿಕಾರಿಗಳು ವರದಿ ನೀಡಿದ್ದರು. ಅದನ್ನು ತಿರಸ್ಕರಿಸಿ ಉನ್ನತ ಹಂತದಿಂದ ಯೋಜನೆ ಪರ ವರದಿ ನೀಡಲಾಗಿದೆ. ಸುರಂಗ ಕೊರೆಯಲು 18 ಸಾವಿರ ಟನ್ ಕೈಗಾರಿಕೆ ಸ್ಫೋಟಕ ಬಳಸಲಾಗುತ್ತದೆ. ಅವುಗಳಿಂದ ಉಂಟಾಗುವ ದುಷ್ಪರಿಣಾಮ ತಡೆಯಲಾಗದು. ಯೋಜನೆ ಮೇಲೆ ಯೋಜನೆ ಹೇರುವ ಕೆಪಿಸಿಯವರನ್ನು ಪಶ್ಚಿಮ ಘಟ್ಟ ಬಿಟ್ಟು ತೊಲಗಿ ಎಂದು ಆಂದೋಲನ ನಡೆಸಬೇಕಾಗುತ್ತದೆ’ ಎಂದು ಜನಗ್ರಾಮ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಅಖಿಲೇಶ್ ಚಿಪ್ಪಳಿ ಎಚ್ಚರಿಸಿದರು.
ಕಿರಿದಾದ ಸಭಾಂಗಣದಲ್ಲಿ ಸಭೆಗೆ ಆಕ್ಷೇಪ
ಪರಿಸರ ಸಾರ್ವಜನಿಕ ಆಲಿಕೆ ಸಭೆಯನ್ನು ಇಕ್ಕಟ್ಟಾದ ಸಭಾಂಗಣದಲ್ಲಿ ಆಯೋಜಿಸಿದ್ದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಕುಳಿತುಕೊಳ್ಳಲು ಆಸನ ಇಲ್ಲದೆ ಹಲವರು ತಾಸುಗಟ್ಟಲೆ ಹೊರಗೆ ನಿಂತಿದ್ದರು. ನಿಂತಿದ್ದವರನ್ನು ಚದುರಿಸಲು ಪೊಲೀಸರು ಪ್ರಯತ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.