
ಹೊನ್ನಾವರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡಿ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ಮಂಜೂರಿ ಮಾಡಿ ಹೋರಾಟ ಸಮಿತಿ ವತಿಯಿಂದ ಬುಧವಾರ ಅಧಿವೇಶನ ನಡೆಯುತ್ತಿರುವ ಬೆಳಗಾವಿಯ ವಿಕಾಸ ಸೌಧದ ಸಮೀಪ ಪ್ರತಿಭಟನೆ ನಡೆಯಿತು.
ಭಟ್ಕಳ, ಹೊನ್ನಾವರ ಹಾಗೂ ಕುಮಟಾ ತಾಲ್ಲೂಕುಗಳಿಂದ ಆಗಮಿಸಿದ್ದ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಉದ್ಯಮಿ ಮಾಸ್ತಪ್ಪ ನಾಯ್ಕ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೊಳಿಸುವುದರಿಂದ ಪಶ್ಚಿಮ ಘಟ್ಟದ ಸೂಕ್ಶ್ಮ ಪರಿಸರಕ್ಕೆ ಧಕ್ಕೆಯಾಗಲಿದೆ. ಅರಣ್ಯ ನಾಶವಾಗುವ ಜೊತೆಗೆ ಜನಜೀವನ ಹಾಗೂ ಸಿಂಗಳಿಕದಂಥ ಅಪರೂಪದ ವನ್ಯ ಜೀವಿಗಳ ಆವಾಸ ಸ್ಥಾನಕ್ಕೆ ಧಕ್ಕೆಯಾಗಲಿದೆ. ಬೇರೆ ಮೂಲಗಳಿಂದ ವಿದ್ಯುತ್ ಉತ್ಪಾದನೆ ಸಾಧ್ಯವಿದ್ದರೂ ಪರಿಸರ ನಾಶ ಮಾಡಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೊಳಿಸಲು ಜನರ ವಿರೋಧದ ನಡುವೆಯೂ ಪ್ರಯತ್ನಿಸುತ್ತಿರುವುದು ಭ್ರಷ್ಟಾಚಾರದ ಅನುಮಾನ ಹುಟ್ಟಿಸಿದೆ. ಜಿಲ್ಲೆಯಲ್ಲಿ ಬಹು ಬೇಡಿಕೆಯುಳ್ಳ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ಸ್ಥಾಪಿಸಬೇಕೆ ಹೊರತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹೇರಬಾರದು'ಎಂದು ಪ್ರತಿಭಟನಾಕಾರರು ಸಚಿವರಿಗೆ ವಿವರಿಸಿದರು.
‘ಮನವಿ ಕುರಿತು ಸಂಬಂಧಿಸಿದ ಸಚಿವರ ಗಮನಕ್ಕೆ ತರಲಾಗುವುದು ಹಾಗೂ ಇಂಧನ ಸಚಿವರನ್ನು ಭೇಟಿಯಾಗಿ ಚರ್ಚಿಸಲು ಅವಕಾಶ ಕಲ್ಪಿಸಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.
ಮುಖಂಡರಾದ ಸೂರಜ್ ನಾಯ್ಕ ಸೋನಿ, ಜೆ.ಟಿ.ಪೈ, ರಾಜೇಶ ನಾಯ್ಕ ಮಹಿಮೆ, ಎಚ್.ಆರ್.ಗಣೇಶ, ಬೊಮ್ಮಾರ ಹೆಗಡೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.