ಕಾರವಾರ: ಜಗತ್ತಿನಲ್ಲೇ ಅಪರೂಪದ ರಾಮಪತ್ರೆ ಜಡ್ಡಿ (ಮಿಸ್ಟರಿಕಾ ಸ್ವ್ಯಾಂಪ್), ಸೀಮಿತ ಸಂಖ್ಯೆಯ ಸಿಂಹ ಬಾಲದ ಸಿಂಗಳೀಕ ಸೇರಿದಂತೆ ಅಳಿವಿನಂಚಿನಲ್ಲಿನ ಸಸ್ಯ, ಜೀವ ಪ್ರಬೇಧಗಳಿರುವ ಶರಾವತಿ ಕಣಿವೆ ಮತ್ತು ಶರಾವತಿ ಅಭಯಾರಣ್ಯಕ್ಕೆ ಅಪಾಯ ಎದುರಾಗಿದೆ.
ಇಂತದ್ದೊಂದು ಆತಂಕವನ್ನು ಕೇವಲ ಪರಿಸರ ವಾದಿಗಳಷ್ಟೇ ಅಲ್ಲ, ಜಿಲ್ಲೆಯ ಸಾಮಾನ್ಯ ಯುವಕರೂ ವ್ಯಕ್ತಪಡಿಸುತ್ತಿದ್ದಾರೆ. ₹10 ಸಾವಿರ ಕೋಟಿ ವೆಚ್ಚದಲ್ಲಿ ಗೇರುಸೊಪ್ಪ ಜಲಾಶಯದಿಂದ ಸಾಗರ ತಾಲ್ಲೂಕಿನ ತಳಕಳಲೆ ಜಲಾಶಯಕ್ಕೆ ನೀರು ಸಾಗಿಸಿ ಜಲವಿದ್ಯುತ್ ಉತ್ಪಾದಿಸುವ ‘ಶರಾವತಿ ಪಂಪ್ಡ್ ಸ್ಟೋರೇಜ್’ ಯೋಜನೆ ಇಂತಹ ಆತಂಕ ಹುಟ್ಟುಹಾಕಿದೆ.
‘ಶರಾವತಿ ನದಿಗೆ ಗೇರುಸೊಪ್ಪದಲ್ಲಿ ಶರಾವತಿ ಟೇಲರಿಸ್ ಯೋಜನೆ ಹೆಸರಿನಲ್ಲಿ ಜಲಾಶಯ ನಿರ್ಮಿಸುವ ವೇಳೆ ಇನ್ನುಮುಂದೆ ಶರಾವತಿ ನದಿ ಕಣಿವೆಯಲ್ಲಿ ಯಾವುದೇ ಯೋಜನೆ ಜಾರಿಗೆ ತರುವುದಿಲ್ಲ ಎಂದು ಹೈಕೋರ್ಟ್‌ನಲ್ಲಿ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಸಲ್ಲಿಸಿದ ಅಫಿಡವಿಟ್‌ನ್ನು ಉಲ್ಲಂಘಿಸಿದೆ. 342ಕ್ಕೂ ಹೆಚ್ಚು ಸಸ್ಯ ಪ್ರಬೇಧ, ಜೀವಿಗಳಿರುವ ಅಭಯಾರಣ್ಯ ಸಂರಕ್ಷಿಸಬೇಕಿದ್ದ ಸರ್ಕಾರವೇ ಒಪ್ಪಿತ ನೀತಿ ಉಲ್ಲಂಘಿಸಿ ಯೋಜನೆ ಜಾರಿಗೆ ಮುಂದಾಗಿದೆ’ ಎಂಬುದು ಪರಿಸರವಾದಿಗಳ ಆರೋಪ.
‘ಪಂಪ್ಡ್ ಸ್ಟೋರೇಜ್ ಯೋಜನೆಯ ಪರಿಸರ ಪರಿಣಾಮ ವರದಿಯೇ ತಪ್ಪಿನಿಂದ ಕೂಡಿದೆ. ಯೋಜನೆಗೆ ಪರವಾದ ವರದಿಯನ್ನು ಸಲ್ಲಿಸಲಾಗಿದೆ. ಅರಣ್ಯ ಇಲಾಖೆಯ ವಿಭಾಗ ಮಟ್ಟದ ಅಧಿಕಾರಿಗಳು ಯೋಜನೆಗೆ ಅನುಮತಿ ನೀಡಬಾರದು ಎಂದು ಸಲ್ಲಿಸಿದ್ದ ವರದಿಗೆ ವಿರುದ್ಧವಾಗಿ ಉನ್ನತ ಮಟ್ಟದಿಂದ ಯೋಜನೆಗೆ ಒಪ್ಪಿಗೆ ದೊರೆತಿದೆ. ಇದು ಪರಿಸರ ಕಾಯ್ದೆಗಳ ಉಲ್ಲಂಘನೆ’ ಎಂದು ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಲಿಖಿತವಾಗಿ ಆಕ್ಷೇಪ ಸಲ್ಲಿಸಿದ್ದಾರೆ.
‘ಶರಾವದಿ ನದಿಯಲ್ಲಿ 14 ಕಿ.ಮೀ ದೂರದವರೆಗೆ ಉಪ್ಪುನೀರು ನುಗ್ಗುತ್ತಿದೆ. ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾದರೆ 1 ಕೋಟಿಗೂ ಹೆಚ್ಚು ಲೀಟರ್ ನೀರನ್ನು ಮೇಲ್ಮಟ್ಟದ ಜಲಾಶಯಕ್ಕೆ ಸಾಗಿಸಲಾಗುತ್ತದೆ. ಗೇರುಸೊಪ್ಪ ಜಲಾಶಯದಿಂದ ನದಿಗೆ ಹರಿಯುವ ನೀರಿನ ಪ್ರಮಾಣ ಇಳಿಕೆಯಾಗಲಿದೆ. ಇದರಿಂದ ಉಪ್ಪುನೀರು ಇನ್ನಷ್ಟು ದೂರದವರೆಗೆ ನುಗ್ಗಲಿದೆ. ನದಿಯಲ್ಲಿ ಕೇವಲ 45 ಪ್ರಬೇಧದ ಮೀನುಗಳಿವೆ. ಅವುಗಳಿಗೆ ಸೂಕ್ತ ಪೋಷಕಾಂಶ ಸಿಗದೆ ಅವೂ ನಶಿಸಲಿವೆ’ ಎಂದು ಪರಿಸರ ಸಂಶೋಧಕ ಗುರುಪ್ರಸಾದ್ ಹೆಗಡೆ ಹೇಳುತ್ತಾರೆ.
ವಿದ್ಯುತ್ ಬೇಡಿಕೆ ಪೂರೈಕೆ ನಿರ್ವಹಣೆಗೆ ಪಂಪ್ಡ್ ಸ್ಟೋರೇಜ್ ಯೋಜನೆ ಬದಲು ಉತ್ತರ ಕನ್ನಡ ಶಿವಮೊಗ್ಗ ಜಿಲ್ಲೆಗಳಲ್ಲಿನ 3 ಲಕ್ಷ ಮನೆಗಳಿಗೆ ಚಾವಣಿ ಸೋಲಾರ್ ವ್ಯವಸ್ಥೆ ಕಲ್ಪಿಸಲು ಕೆಪಿಸಿ ಮುಂದಾಗಲಿಅನಂತ ಹೆಗಡೆ ಅಶೀಸರ ಜೀವ ವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾದ ಬಳಿಕವೂ ಗೇರುಸೊಪ್ಪ ಜಲಾಶಯದಿಂದ ನದಿಗೆ ಹರಿಯುವ ನೀರಿನ ಪ್ರಮಾಣದಲ್ಲಿ ಇಳಿಕೆಯಾಗದು. ಸುರಂಗ ಕೊರೆದರೂ ಭೂಕುಸಿತ ಸಂಭವಿಸದು ಎಂಬುದಕ್ಕೆ ವರಾಹಿ ಯೋಜನೆ ಸಾಕ್ಷಿವಿಜಯ ವಿ.ಎಂ ಕೆಪಿಸಿ ಮುಖ್ಯ ಕಚೇರಿಯ ಇಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.