ADVERTISEMENT

ಶರಾವತಿ ನೀರು ಸರಬರಾಜು ಯೋಜನೆಗೆ ಚಾಲನೆ

ಕಾಮಗಾರಿ ಕಳಪೆಯಾದರೆ ಗುತ್ತಿಗೆದಾರರ ವಿರುದ್ಧ ಕ್ರಮ: ಸಚಿವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 3:04 IST
Last Updated 3 ಮಾರ್ಚ್ 2021, 3:04 IST
ಶರಾವತಿ ನದಿ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಯೋಜನೆಗೆ ಚಾಲನೆ ನೀಡಿದ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕರಾದ ಸುನೀಲ ನಾಯ್ಕ, ದಿನಕರ ಶೆಟ್ಟಿ ಇದ್ದಾರೆ
ಶರಾವತಿ ನದಿ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಯೋಜನೆಗೆ ಚಾಲನೆ ನೀಡಿದ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕರಾದ ಸುನೀಲ ನಾಯ್ಕ, ದಿನಕರ ಶೆಟ್ಟಿ ಇದ್ದಾರೆ   

ಹೊನ್ನಾವರ: ಅಭಿವೃದ್ಧಿ ವಿಚಾರಗಳಲ್ಲಿ ರಾಜಕೀಯ ಮಾಡದೆ, ಅಗತ್ಯ ಇರುವೆಡೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ತಿಳಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ₹ 122 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಹೊನ್ನಾವರ ಪಟ್ಟಣ ಹಾಗೂ ಮಾರ್ಗ ಮಧ್ಯದ 9 ಗ್ರಾಮ ಪಂಚಾಯಿತಿಗಳಿಗೆ ಶರಾವತಿ ನದಿ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ಕಾಮಗಾರಿಯ ಪ್ರಗತಿಯ ವೀಕ್ಷಣೆಗೆ ಬರುತ್ತೇನೆ. ಕಾಮಗಾರಿ ಕಳಪೆಯಾದರೆ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಲಾಗುವುದು. ₹ 85 ಕೋಟಿ ವೆಚ್ಚದಲ್ಲಿ ದಾಂಡೇಲಿಯಲ್ಲಿ ಹಾಗೂ ₹ 4 ಕೋಟಿ ವೆಚ್ಚದಲ್ಲಿ ಯಲ್ಲಾಪುರದಲ್ಲಿ ನೀರು ಸರಬರಾಜು ಮಾಡುವ ಯೋಜನೆಯ ಪ್ರಸ್ತಾವ ಸರ್ಕಾರದ ಮುಂದಿದ್ದು, ಯೋಜನೆಯ ಜಾರಿಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಜನರಿಗೆ ಉದ್ಯೋಗ ಒದಗಿಸಲು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಪ್ರಗತಿ ಹೊಂದಬೇಕಿದ್ದು, ಅದಕ್ಕೆ ರಸ್ತೆ, ರೈಲು ಹಾಗೂ ವಿಮಾನ ಸೌಲಭ್ಯದ ಅಗತ್ಯವಿದೆ. ಜಿಲ್ಲೆಯ 57 ಸಾವಿರ ಎಕರೆ ಭೂಮಿಯನ್ನು ಡಿನೋಟಿಫೈ ಮಾಡಲು ಕ್ರಮ ಜರುಗಿಸಲಾಗಿದೆ. ಅಧಿಕಾರಿಗಳ ಮನಸ್ಥಿತಿಯನ್ನು ಆಧರಿಸಿ ಕಾನೂನಿನ ಅರ್ಥ ವಿವರಣೆ ನಡೆದಿದ್ದು, ಜಿಲ್ಲಾಧಿಕಾರಿ, ಅರಣ್ಯ ಇಲಾಖೆಯ ಅಧಿಕಾರಿಗಳು ಕಾನೂನಿನ ತೊಡಕು ಉಂಟುಮಾಡದೆ ಜನರಿಗೆ ಸೌಲಭ್ಯ ಕಲ್ಪಿಸಿಕೊಡಬೇಕು. ಇ-ಸ್ವತ್ತು ಹಾಗೂ ಫಾರ್ಮ್‌ ಸಂಖ್ಯೆ 3 ಸಮಸ್ಯೆ ಶೀಘ್ರ ಬಗೆಹರಿಯುವ ವಿಶ್ವಾಸವಿದೆ. ಜಿಲ್ಲೆಗೆ ವಿವಿಧ ಇಲಾಖೆಗಳ ಸಚಿವರನ್ನು ಕರೆ ತರುವ ಮೂಲಕ ಅಭಿವೃದ್ಧಿಗೆ ಚುರುಕು ನೀಡುವ ಪ್ರಯತ್ನ ನಡೆಸಿದ್ದೇನೆ ಎಂದು ಹೇಳಿದರು.

ಶಾಸಕ ಸುನೀಲ ನಾಯ್ಕ ಮಾತನಾಡಿ, ಬಹುಕಾಲದ ನಂತರ ಶರಾವತಿ ನದಿ ನೀರು ಸದ್ಬಳಕೆಯಾಗುವ ಯೋಜನೆ ಜಾರಿಗೆ ಬರುತ್ತಿದೆ. ನಾವು ಮಾಡುವ ಕೆಲಸ ಶಾಶ್ವತವಾಗಿ ಉಳಿಯುತ್ತದೆ. ಕೇವಲ ಮರಳು, ಜಲ್ಲಿ ಉದುರಿಸಿ ನಾನೇ ಎಲ್ಲ ಮಾಡಿದ್ದೇನೆ ಎನ್ನುವ 'ಉತ್ತರಕುಮಾರ' ನನ್ನ ಕ್ಷೇತ್ರದಲ್ಲಿ ಇದ್ದು ಇದಕ್ಕೆಲ್ಲ ಸೊಪ್ಪು ಹಾಕದೆ ಜನತೆಯ ಪರವಾಗಿ ಕೆಲಸ ಮುಂದುವರಿಸಿಕೊಂಡು ಹೋಗುತ್ತೇನೆ' ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಿವರಾಜ ಮೇಸ್ತ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಎಚ್.ಎಂ. ಕುಮಾರ, ಜಿಲ್ಲಾಧಿಕಾರಿ ಮುಲ್ಲೈ ಮಹಿಲನ್, ಡಿಸಿಎಫ್ ಗಣಪತಿ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಿಯಾಂಗಾ, ಸದಸ್ಯೆ ಶ್ರೀಕಲಾ ಶಾಸ್ತ್ರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ, ಒಳಚರಂಡಿ ಮಂಡಳಿಯ ಮುಖ್ಯ ಎಂಜಿನಿಯರ್ ಕೆ.ವಿ.ಶ್ರೀಕೇಶವ ಉಪಸ್ಥಿತರಿದ್ದರು. ಯುವಜನಸೇವೆ ಹಾಗೂ ಕ್ರೀಡಾಧಿಕಾರಿ ಸುಧೀಶ ನಾಯ್ಕ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.