ADVERTISEMENT

ಶಿರಸಿ| ನಾಡಗುಳಿ ಬೆಟ್ಟದಲ್ಲಿ ಪುಂಡರ ಕಾಟ: ಪರಿಸರ ರಕ್ಷಿಸುವಂತೆ ಪೊಲೀಸರ ಮೊರೆ

ರಾಜೇಂದ್ರ ಹೆಗಡೆ
Published 23 ಜನವರಿ 2026, 8:13 IST
Last Updated 23 ಜನವರಿ 2026, 8:13 IST
ಕಣ್ಮನ ಸೆಳೆಯುವ ಶಿರಸಿ ತಾಲ್ಲೂಕಿನ ನಾಡಗುಳಿ ಬೆಟ್ಟದ ಸಾಲು
ಕಣ್ಮನ ಸೆಳೆಯುವ ಶಿರಸಿ ತಾಲ್ಲೂಕಿನ ನಾಡಗುಳಿ ಬೆಟ್ಟದ ಸಾಲು   

ಶಿರಸಿ: ಪ್ರಕೃತಿಯ ಸೊಬಗಿನಿಂದಾಗಿ ಕಂಗೊಳಿಸುತ್ತಿದ್ದ ತಾಲ್ಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಡಗುಳಿ ಬೆಟ್ಟಗಳು ಈಗ ಮೋಜು-ಮಸ್ತಿ ಮಾಡುವ ಕಿಡಿಗೇಡಿಗಳ ತಾಣವಾಗಿ ಮಾರ್ಪಟ್ಟಿವೆ. ಹಗಲಿರುಳು ಇಲ್ಲಿಗೆ ಬರುವ ಪುಂಡರ ಹಾವಳಿಯಿಂದ ಬೇಸತ್ತಿರುವ ಗ್ರಾಮಸ್ಥರು, ತಮ್ಮ ಬೆಟ್ಟಗಳನ್ನು ರಕ್ಷಿಸಿಕೊಡುವಂತೆ ಪೊಲೀಸ್ ಇಲಾಖೆ ಮೊರೆ ಹೋಗಿದ್ದಾರೆ.

ಅಘನಾಶಿನಿ ಕಣಿವೆಯ ರಮಣೀಯ ದೃಶ್ಯಾವಳಿಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ನಾಡಗುಳಿ ಬೆಟ್ಟಗಳು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿವೆ. ಹಸಿರು ಹುಲ್ಲಿನ ಹೊದಿಕೆಯ ಮೇಲೆ ಸಾಗುವ ದಾರಿಗಳು ನಿಸರ್ಗ ಮಾತೆಯ ಬೈತಲೆಯಂತೆ ಗೋಚರಿಸುತ್ತವೆ. ಬೆಟ್ಟದ ತುದಿಯಲಿ ಬೀಸುವ ತಂಗಾಳಿ ಮತ್ತು ಮೋಡಗಳ ಸಖ್ಯ ಪ್ರವಾಸಿಗರಿಗೆ ಸ್ವರ್ಗಲೋಕದ ಅನುಭವ ನೀಡುತ್ತವೆ.

ಆದರೆ, ಎರಡು ವರ್ಷಗಳಿಂದ ಈ ಸೌಂದರ್ಯವೇ ಸ್ಥಳೀಯರಿಗೆ ಮುಳ್ಳಾಗಿ ಪರಿಣಮಿಸಿದೆ. ನಗರವಾಸಿಗಳು ಹಾಗೂ ದೂರದ ಊರುಗಳಿಂದ ಬರುವ ಕಿಡಿಗೇಡಿಗಳ ತಂಡ ಬೆಟ್ಟದ ಮೇಲೆ ಮದ್ಯಪಾನ ಮಾಡುತ್ತಾ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಮದುವೆಗೆ ಮುನ್ನವೇ ಇಲ್ಲಿಗೆ ಬರುವ ಜೋಡಿಗಳ ವರ್ತನೆ ಹಾಗೂ ತಡರಾತ್ರಿಯವರೆಗೂ ಕೇಳಿಬರುವ ಕಿಡಿಗೇಡಿಗಳ ಅಬ್ಬರದ ಕಿರುಚಾಟವು ಬೆಟ್ಟದ ಪಾದದಲ್ಲಿ ವಾಸಿಸುವ ಒಂಟಿ ಮನೆಗಳ ಜನರಲ್ಲಿ ಆತಂಕ ಸೃಷ್ಟಿಸಿದೆ.

ADVERTISEMENT

‘ತಿಂದೆಸೆದ ಆಹಾರದ ಪ್ಯಾಕೇಟ್‌ಗಳು, ಎಲುಬುಗಳ ರಾಶಿ ಬೀಳಲಾರಂಭಿಸಿದೆ. ಕುಗ್ರಾಮಗಳು, ಒಂಟಿ ಮನೆಗಳು ಜಾಸ್ತಿ ಇರುವ ಈ ಪ್ರದೇಶದಲ್ಲಿ ಹಗಲು ರಾತ್ರಿ ಎನ್ನದೇ ಮೋಜಿಗಾಗಿ ಓಡಾಡುವವರು ಸ್ಥಳೀಯರಿಗೆ ಆತಂಕ ಸೃಷ್ಟಿಸಿದ್ದಾರೆ. ತಡ ರಾತ್ರಿಯಾದರೂ ಬೆಟ್ಟದ ಮೇಲೆ ಮತ್ತಿನಲ್ಲಿ ಕೂಗುವವರ ಅಬ್ಬರ ನಾಡಗುಳಿ ಬೆಟ್ಟದ ಪಾದದಲ್ಲಿರುವ ಹಳ್ಳಿಯ ಜನತೆಯನ್ನು ಭಯ ಬೀಳಿಸಿದೆ’ ಎನ್ನುತ್ತಾರೆ ಗ್ರಾಮಸ್ಥರು. 

‘ವಾಸ್ತವವಾಗಿ ಈ ಬೆಟ್ಟಗಳು ಕೇವಲ ಪ್ರವಾಸಿ ತಾಣಗಳಲ್ಲ, ಇವು ಸುತ್ತಮುತ್ತಲಿನ  ಗ್ರಾಮಗಳಾದ ಉಗ್ರೆಸರ, ಕಾರೇಮನೆ, ನಾಡಗುಳಿ, ಹಳೆಮನೆ ಸೇರಿದಂತೆ ಹತ್ತಾರು ಹಳ್ಳಿಗಳ ರೈತರ ಹೈನುಗಾರಿಕೆಗೆ ಆಧಾರವಾಗಿರುವ ಹುಲ್ಲುಗಾವಲುಗಳಾಗಿವೆ. ಮಳೆಗಾಲ ಮುಗಿದ ನಂತರ ರೈತರು ಇಲ್ಲಿಂದ ಹುಲ್ಲು ಕಟಾವು ಮಾಡಿ ಜಾನುವಾರುಗಳಿಗೆ ಮೇವು ಸಂಗ್ರಹಿಸುತ್ತಾರೆ. ಆದರೆ, ಈಗ ಬೆಟ್ಟದ ತುಂಬೆಲ್ಲ ಬಿದ್ದಿರುವ ಒಡೆದ ಮದ್ಯದ ಬಾಟಲಿಗಳು ಕೃಷಿಕರ ಕಾಲಿಗೆ ಚುಚ್ಚುತ್ತಿವೆ. ಆಹಾರದ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ರಾಶಿಯಿಂದಾಗಿ ಈ ಪ್ರದೇಶವು ಕಲುಷಿತಗೊಳ್ಳುತ್ತಿದೆ. ನೈಸರ್ಗಿಕ ಗಾಳಿಯ ಬದಲಿಗೆ ಇಲ್ಲಿ ಮದ್ಯದ ವಾಸನೆ ತುಂಬಿರುವುದು ತೀವ್ರ ಆತಂಕ ಮೂಡಿಸುತ್ತಿದೆ’ ಎನ್ನುತ್ತಾರೆ ಸ್ಥಳೀಯರಾದ ರಾಜಾರಾಮ ಹೆಗಡೆ. 

ಪೊಲೀಸರೇ ಬೆಟ್ಟವನ್ನು ಕಾದು ಇಲ್ಲಿ ಮೋಜು ಮಸ್ತಿ ಮಾಡುತ್ತಿರುವವರನ್ನು ವಶಕ್ಕೆ ಪಡೆಯುವಂತೆ ಕೇಳಿಕೊಂಡಿದ್ದೇವೆ
ಎಚ್.ವಿ.ಗಣೇಶ ನೆಗ್ಗು ಗ್ರಾಮ ಪಂಚಾಯಿತಿ ಸದಸ್ಯ

ಪಂಚಾಯಿತಿಯಲ್ಲಿ ಅನುದಾನವಿಲ್ಲ

‘ಬೆಟ್ಟದ ಇಕ್ಕೆಲಗಳಲ್ಲಿಯೂ ಬೇಲಿ ನಿರ್ಮಿಸಿ ಯಾರೂ ತೆರಳದಂತೆ ಮಾಡುವ ಬಗ್ಗೆಯೂ ಗ್ರಾಮ ಪಂಚಾಯಿತಿಯಲ್ಲಿ ಚರ್ಚಿಸಿದ್ದೆವು. ಆದರೆ ಐದು ಕಿ.ಮೀ.ಗಳಷ್ಟು ದೂರ ಬೇಲಿ ನಿರ್ಮಿಸಬೇಕಿದ್ದು ಇಷ್ಟೊಂದು ಅನುದಾನ ಗ್ರಾಮ ಪಂಚಾಯಿತಿಯಲ್ಲಿ ಇಲ್ಲ’ ಎಂಬುದು ಪಂಚಾಯಿತಿ ಪ್ರತಿನಿಧಿಗಳ ಮಾತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.