ಶಿರಸಿ: ಭತ್ತದಲ್ಲಿ ತೆನೆ ತಿಗಣೆ ಹುಳುಗಳ ಬಾಧೆ ವ್ಯಾಪಕವಾಗಿದೆ. ಎಳೆಯ ತೆನೆಗಳಲ್ಲಿ ಹಾಲುಗಾಳುಗಳಿಂದ ಈ ಕೀಟಗಳು
ರಸ ಹೀರುವುದರಿಂದ ಕಾಳುಗಳು ಜೊಳ್ಳಾಗಿ ಬೆಳೆಗಾರರಿಗೆ ನಷ್ಟಕ್ಕೆ ಕಾರಣವಾಗುತ್ತಿದೆ.
ಉತ್ತರಕನ್ನಡ ಜಿಲ್ಲೆಯ ಪ್ರಮುಖ ಆಹಾರ ಧಾನ್ಯ ಬೆಳೆ. ಪ್ರಸಕ್ತ ಹಂಗಾಮಿನಲ್ಲಿ ಸುಮಾರು 40 ಸಾವಿರ ಹೆಕ್ಟೇರ್
ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಬಹುತೇಕ ಕಡೆ ಸದ್ಯ ತೆನೆ ಹಂತದವರೆಗೆ ಭತ್ತ ಬೆಳವಣಿಗೆಯಾಗಿದೆ. ಈ ಹಂತದಲ್ಲಿ ಎಲೆ ಸುರಳಿ ಕೀಟ, ಕೊಳವೆ ಹುಳು, ಗಣ್ಣು ಹುಳಗಳ ಕಾಟ ಹೆಚ್ಚಿದೆ. ಮರಿಹುಳು ಕಾಂಡವನ್ನು ಕೊರೆದು ಸುಳಿ ಒಣಗುವಂತೆ ಮಾಡುತ್ತವೆ. ಇದರ ಹಾವಳಿ ತೆನೆ ಹಂತದಲ್ಲಿ ಕಂಡುಬಂದಿದ್ದು, ಬಿಳಿಯ ಜೊಳ್ಳು ತೆನೆಗಳು ಉಂಟಾಗುತ್ತಿವೆ.
ಬನವಾಸಿ, ದಾಸನಕೊಪ್ಪ, ಅಂಡಗಿ, ಚಿಗಳ್ಳಿ, ಮಳಗಿ ಸೇರಿ ಮುಂಡಗೋಡ ಭಾಗದಲ್ಲಿ ಈ ರೋಗ ವ್ಯಾಪಕವಾಗಿದ್ದು, ರೈತರನ್ನು ಆತಂಕಕ್ಕೆ ತಳ್ಳುವಂತೆ ಮಾಡಿದೆ.
‘ಬಹಳಷ್ಟು ಭಾಗಗಳಲ್ಲಿ ಕೆಲ ದಿನಗಳ ಹಿಂದೆ ಭತ್ತದ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡಿತ್ತು. ಇದರಿಂದ ಆತಂಕಗೊಂಡ ರೈತರು ರೋಗ ಹತೋಟಿಗೆ ತರಲು ಅಪಾರ ಪ್ರಮಾಣದಲ್ಲಿ ಔಷಧ ಸಿಂಪಡಿಸಿದ್ದರು. ಅದು ಸುಧಾರಿಸಿತು ಎನ್ನುವಷ್ಟರಲ್ಲಿಯೇ ಈಗ ತೆನೆ ತಿಗಣೆ ಕಾಟದಿಂದ ರೈತ ಬಸವಳಿದು ಹೋಗಿದ್ದಾರೆ. ಮುಂಗಾರಿನಲ್ಲಿ ನಾಟಿ ನೆಟ್ಟು, ಗೊಬ್ಬರ ಹಾಕಿ ಬೆಳೆಸಿದ್ದ ಭತ್ತದ ಬೆಳೆ ಇನ್ನು ಒಂದೆರಡು ತಿಂಗಳಲ್ಲಿ ಕೊಯ್ಲುಗೆ ಬರಲಿದೆ. ಆದರೆ ಈ ಸಮಯದಲ್ಲಿಯೇ ತಿಗಣೆ ಬಾಧೆ ವ್ಯಾಪಿಸಿರುವುದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ’ ಎಂಬುದು ದಾಸನಕೊಪ್ಪದ ಭತ್ತ ಕೃಷಿಕ ಮುನಿರಾಜು ಅವರ ಮಾತು.
‘ಸಮೃದ್ಧವಾಗಿ ಬೆಳೆದ ಭತ್ತದ ಬೆಳೆಯು ತೆನೆ ಬಂದಿದ್ದು ಹಾಲು ತುಂಬುತ್ತಿದೆ. ಈ ಸಮಯದಲ್ಲಿ ಬೆಳೆಯನ್ನು ಕಾಡುವ ಕೀಟ, ರೋಗಗಳಿಂದ ಕಾಪಾಡಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಅದರಲ್ಲೂ ತಿಗಣೆಯನ್ನು ನಾಶ ಮಾಡಿ ಫಸಲು ರಕ್ಷಿಸುವುದಂತು ಸುಲಭವಲ್ಲ. ಈ ಕೀಟ ಭತ್ತದ ತೆನೆಯಲ್ಲಿ ಹಾಲು ತುಂಬುವ ಸಮಯದಲ್ಲಿಯೇ ಹೆಚ್ಚಾಗಿ ಕಾಡುತ್ತದೆ’ ಎನ್ನುತ್ತಾರೆ ಅವರು.
‘ಈ ಹುಳಗಳು ಸೂಕ್ಷ್ಮವಾಗಿದ್ದು, ತೆನೆಯಲ್ಲಿರುವ ಭತ್ತದ ಕಾಳಿನ ಬಣ್ಣದಲ್ಲಿಯೇ ಇರುತ್ತವೆ. ಹೀಗಾಗಿ ಅವುಗಳು ಮೇಲ್ನೋಟಕ್ಕೆ ಗೊತ್ತೇ ಆಗುವುದಿಲ್ಲ. ಈ ಹುಳುಗಳು ಹಾಲು ತುಂಬುವ ಸಮಯದಲ್ಲಿ ಭತ್ತದ ಮೇಲೆ ದಾಳಿ ಮಾಡಿ ಭತ್ತದ ಕಾಳಿನ ಹಾಲನ್ನು ಹೀರುತ್ತವೆ. ಇದರಿಂದ ಭತ್ತದ ಕಾಳು ಜೊಳ್ಳು ಆಗಲಿದ್ದು, ಇಳುವರಿ ಮೇಲೆ ಪರಿಣಾಮ ಬೀರಲಿದೆ’ ಎನ್ನುತ್ತಾರೆ ಬಹುತೇಕ ಕೃಷಿಕರು.
ಮೆಲಾಥಿಯಾನ್ 50ಇ.ಸಿ.2 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ ಎಕರೆಗೆ 8 ಕೆಜಿ ಶೇಕಡಾ 5ರ ಮೆಲಾಥಿಯಾನ್ ಪುಡಿ ಎರಚಬೇಕುರೂಪಾ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.