
ಶಿರಸಿ: ನದಿ ಜೋಡಣೆ ವಿರೋಧಿಸಿ ಪಟ್ಟಣದ ಹೊಳೆ ತಟದುದ್ದಕ್ಕೂ ನಡೆದ ಅಧ್ಯಯನ ನಡಿಗೆಯ ಮಾಹಿತಿಯನ್ನು ನವೆಂಬರ್ ತಿಂಗಳಿನಲ್ಲಿ ನಡೆಯುವ ವಿಜ್ಞಾನ ಕಮ್ಮಟದಲ್ಲಿ ಚರ್ಚಿಸುವ ಜತೆ ಸಮಗ್ರ ವರದಿ ಸಿದ್ಧಪಡಿಸಿ ಜ.11ರಂದು ಶಿರಸಿಯಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಸಲ್ಲಿಸಲು ತೀರ್ಮಾನಿಸಲಾಗಿದೆ.
ಅ.25ರಂದು ಮಂಜುಗುಣಿಯ ಕಣಿವೆ ಕಾನಿನಿಂದ ಆರಂಭಗೊಂಡು ಪಟ್ಟಣದ ಹೊಳೆ ಜಲಾನಯನ ಪ್ರದೇಶದ ಸುಮಾರು 50 ಕಿ.ಮೀಗಳಷ್ಟು ವ್ಯಾಪ್ತಿಯಲ್ಲಿ ಅಧ್ಯಯನ ನಡಿಗೆ ನಡೆದು ಅ.27ರಂದು ಗಣೇಶಪಾಲದಲ್ಲಿ ಕೊನೆಯಾಗಿತ್ತು. ಈ ವೇಳೆ ನದಿ ಜೋಡಣೆ ಪಶ್ಚಿಮಘಟ್ಟದ ನದಿ ಭಾಗದ ಜನರ ಸಂಸ್ಕೃತಿ, ಜೀವನಶೈಲಿ, ಜಲ ಮೂಲಗಳ ಮೇಲಿನ ಅವಲಂಬನೆ ಹಾಗೂ ಇಲ್ಲಿನ ಜೀವವೈವಿಧ್ಯದ ಮೇಲಾಗುವ ಪರಿಣಾಮಗಳ ಕುರಿತಾದ ಅಧ್ಯಯನ ನಡೆಸಲಾಯಿತು. ಪರಿಸರ ಕಾರ್ಯಕರ್ತರಾದ ಬಾಲಚಂದ್ರ ಸಾಯಿಮನೆ, ನರಸಿಂಹ ಹೆಗಡೆ ಮಾನಿಗದ್ದೆ, ಪಾಂಡುರಂಗ ಹೆಗಡೆ, ಎಂಎಲ್‍ಸಿ ಶಾಂತಾರಾಮ ಸಿದ್ದಿ ಸೇರಿದಂತೆ ನೂರಾರು ಪರಿಸರ ಕಾರ್ಯಕರ್ತರು ಈ ಕಾರ್ಯದಲ್ಲಿ ತೊಡಗಿ ಜನಜಾಗೃತಿ ಮೂಡಿಸಿದರು.
ಈಗಾಗಲೇ ಯೋಜನಾ ವರದಿಯಲ್ಲಿ ಹೇಳಿರುವಂತೆ ಸುಮಾರು 750 ಎಕರೆಯಷ್ಟು ಭೂ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಸ್ತಾವನೆಯಿದ್ದು, ಅಂದಾಜು ಒಂದು ಲಕ್ಷ ಮರಗಳಿಗೆ ಕೊಡಲಿ ಬೀಳುವ ಸಾಧ್ಯತೆಗಳಿವೆ. ಈಗಾಗಲೇ ಉತ್ತರಕನ್ನಡ ಜಿಲ್ಲೆಯ ನೈಸರ್ಗಿಕ ಸಂಪತ್ತು ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಬಳಕೆಯಾಗಿದ್ದು, ಇನ್ನು ಮುಂಬರುವ ಯೋಜನೆಗಳನ್ನು ಕೈಗೊಳ್ಳಲು ಜಿಲ್ಲೆಯ ಧಾರಣಾ ಸಾಮರ್ಥ್ಯವನ್ನು ತಿಳಿದುಕೊಳ್ಳಬೇಕು ಎಂಬ ಸಲಹೆ ವ್ಯಕ್ತವಾಯಿತು.
ನದಿ ಜೋಡಣೆಯಂತಹ ನಿಸರ್ಗ ಮಾರಕವಾದ ಯೋಜನೆಗಳನ್ನು ಮೊಳಕೆಯ ಹಂತದಲ್ಲಿಯೇ ಚಿವುಟಬೇಕು. ನದಿಗಳ ಉಳಿವಿಗಾಗಿ ನಾವೆಲ್ಲರೂ ಮತ, ಪಂಗಡಗಳೆಂಬ ಬೇಧವನ್ನು ಮರೆತು ಒಟ್ಟಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಪಶ್ಚಿಮ ಘಟ್ಟದ ನದಿಗಳು ಗಂಗಾ ನದಿಗಿಂತಲೂ ಹಳೆಯದಾದವು ಅವುಗಳ ಅವೈಜ್ಞಾನಿಕ ಬಳಕೆಯಿಂದ ಪಶ್ಚಿಮ ಘಟ್ಟಕ್ಕೆ ವ್ಯತಿರಿಕ್ತ ಪರಿಣಾಮವಾಗುತ್ತದೆಎಂ.ಡಿ.ಸಭಾಶ್ಚಂದ್ರನ್ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ
ನದಿ ಜೋಡಣೆ ಹಿಮ್ಮೆಟ್ಟಿಸಲು ಕಾನೂನಾತ್ಮಕ ಹೋರಾಟ ಅತ್ಯಗತ್ಯವಾಗಿದ್ದು ಈ ಬಗ್ಗೆ ಗಂಭೀರವಾಗಿ ಪ್ರಯತ್ನಿಸಬೇಕುಮಹಾಬಲೇಶ್ವರ ಹೆಗಡೆ , ಕೆನಡಾದ ವಿನ್ನಿಪೆಗ್ ಯೂನಿವರ್ಸಿಟಿಯ ವಿಜ್ಞಾನಿQuote -