
ಶಿರಸಿ: ‘ಉತ್ತರ ಕನ್ನಡ ಜಿಲ್ಲೆಯಲ್ಲಿ ನದಿ ಜೋಡಣೆ, ಭೂಗತ ಜಲವಿದ್ಯುತ್ ಯೋಜನೆ ಹಾಗೂ ಬಂದರು ಯೋಜನೆಗಳನ್ನು ವಿರೋಧಿಸುವ ಜತೆ ವೈಜ್ಞಾನಿಕ ದತ್ತಾಂಶ ಸಂಗ್ರಹಿಸಿ ಕಾನೂನಾತ್ಮಕವಾಗಿ ಧ್ವನಿ ಎತ್ತಬೇಕಿದೆ’ ಎಂದು ಬೇಡ್ತಿ– ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಪ್ರಸ್ತಾವಿತ ಬೇಡ್ತಿ– ವರದಾ ಹಾಗೂ ಅಘನಾಶಿನಿ– ವೇದಾವತಿ ನದಿ ಜೋಡಣೆ ಯೋಜನೆ ಹಿನ್ನೆಲೆ ಪಶ್ಚಿಮಘಟ್ಟ ನದಿ ಕಣಿವೆಗಳ ಸಂರಕ್ಷಣೆ ಮತ್ತು ಬೃಹತ್ ಯೋಜನೆಗಳ ಪರಿಣಾಮಗಳ ಕುರಿತು ನಗರದ ಟಿಎಸ್ಎಸ್ ಸಭಾಂಗಣದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ವಿಜ್ಞಾನ ಕಮ್ಮಟದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
‘ನದಿಯ ಸಹಜ, ಪ್ರಾಕೃತಿಕ ಹರಿವನ್ನು ಮಾರ್ಪಡಿಸಿದಾಗ ಉಂಟಾಗುವ ದುಷ್ಪರಿಣಾಮಗಳ ವೈಜ್ಞಾನಿಕ ಅಧ್ಯಯನ ವರದಿ ಸಿದ್ಧಪಡಿಸಿದರೆ ಮಾತ್ರ ಸರ್ಕಾರ, ಕೋರ್ಟ್ ಹಾಗೂ ಚಿಂತಕರ ಮುಂದಿಡಲು ಸಾಧ್ಯ’ ಎಂದರು.
‘ಯೋಜನೆಗಳ ಅವೈಜ್ಞಾನಿಕ ಅನುಷ್ಠಾನದಿಂದಾಗಿ ದೀರ್ಘಾವಧಿ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಸತ್ಯ ಎತ್ತಿನಹೊಳೆ ಯೋಜನೆ ವಿಫಲತೆಯು ತೆರೆದಿಟ್ಟಿದೆ. ನದಿಗಳು ಕೇವಲ ನೀರಿನ ಮೂಲವಲ್ಲ, ಅವು ಸಂಪೂರ್ಣ ಪರಿಸರ ವ್ಯವಸ್ಥೆ ಮತ್ತು ಜಲಚಕ್ರದ ಕೇಂದ್ರ ಬಿಂದು. ಹಾಗಾಗಿ ಯಾವುದೇ ನದಿ ಹರಿವಿನ ಬದಲಾವಣೆಯನ್ನು ವಿಜ್ಞಾನ ಮತ್ತು ಪರಿಸರ ಸುರಕ್ಷತೆಯ ಆಧಾರದ ಮೇಲೆ ತಡೆಯುವುದು ಅತ್ಯಗತ್ಯ’ ಎಂದು ಹೇಳಿದರು.
ಭೂಗರ್ಭಶಾಸ್ತ್ರಜ್ಞ ಶ್ರೀನಿವಾಸ ರೆಡ್ಡಿ ಮಾತನಾಡಿ, ‘ಗ್ರಾಮ ಪಂಚಾಯಿತಿ ಮಟ್ಟದಲ್ಲೇ ವಿಪತ್ತು ನಿರ್ವಹಣಾ ಸಮಿತಿ ರಚಿಸಬೇಕು. ಪ್ರತ್ಯೇಕ ನಕ್ಷೆ ಸಿದ್ಧಪಡಿಸಿ ಎಲ್ಲಿ ಹೆಚ್ಚಿನ ಆತಂಕವಿದೆಯೋ ಅಲ್ಲಿ ಯಾವುದೇ ಯೋಜನೆ ಅನುಷ್ಠಾನವಾಗದಂತೆ ಎಚ್ಚರಿಕೆವಹಿಸಲು ಸ್ಥಳೀಯರ ಪಾಲ್ಗೊಳ್ಳುವಿಕೆಯಲ್ಲಿ ಕ್ರಮವಹಿಸಬೇಕು’ ಎಂದು ಹೇಳಿದರು.
ವಾಲ್ಮಿ ಸಂಸ್ಥೆಯ ನಿರ್ದೇಶಕ ರಾಜೇಂದ್ರ ಪ್ರೋದ್ದಾರ್ ಮಾತನಾಡಿ, ‘ಪಶ್ಚಿಮ ಘಟ್ಟವು ರಾಜ್ಯದ ನೀರಿನ ತೊಟ್ಟಿ. ಪೂರ್ವದ ಜಿಲ್ಲೆಗಳಾದ ಕೋಲಾರ, ಚಿತ್ರದುರ್ಗ, ತುಮಕೂರು ಸೇರಿದಂತೆ ಬಯಲುಸೀಮೆಯ ಕೃಷಿ ಮತ್ತು ಜೀವನ, ಪಶ್ಚಿಮ ಘಟ್ಟದ ನದಿಗಳ ಮೇಲೆಯೇ ಅವಲಂಬಿತವಾಗಿದೆ. ಈ ಮೂಲವನ್ನೇ ನಾಶ ಮಾಡುವುದು ಎಂದರೆ ಪೂರ್ವ ಜಿಲ್ಲೆಗಳ ರೈತರ ಭವಿಷ್ಯಕ್ಕೆ ಕೊಳ್ಳಿ ಇಟ್ಟಂತೆ. ಸರ್ಕಾರ ಹೊಸ ಯೋಜನೆಗಳಿಗೆ ಲಕ್ಷಾಂತರ ಕೋಟಿ ಸುರಿಯುತ್ತಿದೆ. ಆದರೆ, ಲಭ್ಯವಿರುವ ನೀರಿನ ಬಳಕೆಯ ದಕ್ಷತೆ ಅತ್ಯಂತ ಕಳಪೆಯಾಗಿದೆ. ಇರುವ ನೀರನ್ನೇ ಸರಿಯಾಗಿ ಬಳಸಲಾಗದ ವ್ಯವಸ್ಥೆ ನಡುವೆ ಹೊಸ ನೀರನ್ನು ತಂದು ಏನು ಸಾಧಿಸಲು ಸಾಧ್ಯ?’ ಎಂದು ಪ್ರಶ್ನಿಸಿದರು.
ಪರಿಸರ ತಜ್ಞ ಬಿ.ಎಂ.ಕುಮಾರಸ್ವಾಮಿ, ಪರಿಸರ ಬರಹಗಾರ ಶಿವಾನಂದ ಕಳವೆ, ವನ್ಯಜೀವಿ ತಜ್ಞ ಗಿರಿಧರ ಕುಲಕರ್ಣಿ, ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಸ್ವರ್ಣವಲ್ಲೀ ಮಹಾಸಂಸ್ಥಾನದ ಅಧ್ಯಕ್ಷ ವಿ.ಎನ್.ಹೆಗಡೆ ಇದ್ದರು.
ಕೊಳ್ಳ ಸಂರಕ್ಷಣಾ ಸಮಿತಿ ಸಂಚಾಲಕ ಅನಂತ ಅಶೀಸರ ಸ್ವಾಗತಿಸಿದರು, ಕಾರ್ಯಕ್ರಮ ಸಂಚಾಲಕ ಕೇಶವ ಕೊರ್ಸೆ ಗೋಷ್ಠಿಗಳ ಕುರಿತು ಮಾಹಿತಿ ನೀಡಿದರು.
ಉತ್ತರಕನ್ನಡ ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯ ಮುಗಿದ ಬಗ್ಗೆ ಈ ಹಿಂದೆಯೇ ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಸಿದ್ದರೂ ಸರ್ಕಾರಗಳು ದೊಡ್ಡ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆಅನಂತ ಅಶೀಸರ ಅಧ್ಯಕ್ಷ ಕೊಳ್ಳ ಸಂರಕ್ಷಣಾ ಸಮಿತಿ
ಜಿಲ್ಲೆಯ ನೀರನ್ನು ಬೇರೆಡೆ ಒಯ್ಯುತ್ತೇವೆ ಎನ್ನುವ ರಾಜಕಾರಣಿಗಳು ಜಿಲ್ಲೆಯಲ್ಲೇ ಇನ್ನಷ್ಟು ಕಾಡು ಬೆಳೆಸೋಣ ಎಂಬ ಯೋಜನೆ ತರುವ ಬಗ್ಗೆ ಪ್ರಯತ್ನಿಸಿಲ್ಲ. ಇದು ನದಿ ಕಣಿವೆಗಳ ಬಗ್ಗೆ ಅವರ ನಿಲುವು ಸ್ಪಷ್ಟಪಡಿಸುತ್ತದೆಟಿ.ವಿ.ರಾಮಚಂದ್ರ ವಿಜ್ಞಾನಿ ಪರಿಸರಶಾಸ್ತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.