ADVERTISEMENT

ರಸ್ತೆ ಸುರಕ್ಷತಾ ಸಪ್ತಾಹ| ಅಪ್ರಾಪ್ತರಿಗೆ ವಾಹನ ನೀಡಬೇಡಿ: ನ್ಯಾಯಾಧೀಶೆ ಶಾರದಾದೇವಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 8:12 IST
Last Updated 23 ಜನವರಿ 2026, 8:12 IST
ಶಿರಸಿ ಆರ್.ಟಿ.ಒ ಕಚೇರಿಯಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಶಾರದಾದೇವಿ ಸಿ. ಹಟ್ಟಿ ಅವರು ರಸ್ತೆ ಸುರಕ್ಷತಾ ನಿಯಮಗಳನ್ನು ಒಳಗೊಂಡ ಭಿತ್ತಿಪತ್ರ ಬಿಡುಗಡೆ ಮಾಡಿದರು 
ಶಿರಸಿ ಆರ್.ಟಿ.ಒ ಕಚೇರಿಯಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಶಾರದಾದೇವಿ ಸಿ. ಹಟ್ಟಿ ಅವರು ರಸ್ತೆ ಸುರಕ್ಷತಾ ನಿಯಮಗಳನ್ನು ಒಳಗೊಂಡ ಭಿತ್ತಿಪತ್ರ ಬಿಡುಗಡೆ ಮಾಡಿದರು    

ಶಿರಸಿ: ‘ಮೊಬೈಲ್ ಗೀಳು ಹಾಗೂ ಸಮಯದ ಅಭಾವದಿಂದಾಗಿ ಅಪಘಾತಗಳು ಹೆಚ್ಚುತ್ತಿವೆ. ಪಾಲಕರು ಅಪ್ರಾಪ್ತ ವಯಸ್ಕರಿಗೆ ವಾಹನಗಳನ್ನು ನೀಡಬಾರದು ಮತ್ತು ಮಕ್ಕಳಿಗೆ ಜೀವನದ ಕಷ್ಟಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದು ಸಿವಿಲ್ ನ್ಯಾಯಾಧೀಶೆ ಶಾರದಾದೇವಿ ಸಿ.ಹಟ್ಟಿ ತಿಳಿಸಿದರು.

ನಗರದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚಾರಣೆ-2026ರ ಅಂಗವಾಗಿ ಗುರುವಾರ ನಡೆದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅಪಘಾತಗಳು ಅನಿಶ್ಚಿತವಾಗಿ ಸಂಭವಿಸುತ್ತವೆ. ವಾಹನ ಸವಾರರು ಕಾನೂನು ಮೀರಿ ನಡೆಯಬಾರದು ಹಾಗೂ ದಾಖಲೆ ಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಇಂದಿನ ಜನಾಂಗದಲ್ಲಿ ತಾಳ್ಮೆಯ ಕೊರತೆ ಎದ್ದು ಕಾಣುತ್ತಿದೆ. ಹಿರಿಯರನ್ನು ನೋಡಿ ಮಕ್ಕಳು ಕಲಿಯುವುದರಿಂದ, ಮೊದಲು ನಾವು ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ಶಿರಸಿಯಲ್ಲಿ ಗಾಂಜಾದಂತಹ ಮಾದಕ ವಸ್ತುಗಳ ಹಾವಳಿ ಹೆಚ್ಚುತ್ತಿದ್ದು, ಪಾಲಕರು ಮಕ್ಕಳ ಮೇಲೆ ನಿಗಾ ಇಡದಿದ್ದರೆ ಅಪಾಯ ತಪ್ಪಿದ್ದಲ್ಲ’ ಎಂದು ಅವರು ಎಚ್ಚರಿಸಿದರು.

ADVERTISEMENT

ಪ್ರಧಾನ ಹೆಚ್ಚುವರಿ ನ್ಯಾಯಾಧೀಶ ಅಲ್ತಾಫ್ ಹುಸೇನ್ ಸಾಬ್ ಮಾತನಾಡಿ, ‘ಸಾರಿಗೆ ನಿಯಮಗಳ ಪಾಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅಪ್ರಾಪ್ತರಿಗೆ ಲೋಕಜ್ಞಾನದ ಅರಿವಿರುವುದಿಲ್ಲ ಎಂಬ ಕಾರಣಕ್ಕಾಗಿಯೇ ಈಗ ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ರಸ್ತೆ ನಿಯಮಗಳನ್ನು ಗೌರವಿಸುವುದರಿಂದ ಸಮಾಜವು ಸುಸ್ಥಿತಿಯಲ್ಲಿರಲು ಸಾಧ್ಯ’ ಎಂದರು.

ಡಿವೈಎಸ್ಪಿ ಗೀತಾ ಪಾಟೀಲ, ನಿವೃತ್ತ ಆರ್.ಟಿ.ಒ ಸಿ.ಡಿ. ನಾಯ್ಕ, ಜಿ.ಎಸ್.ಹೆಗಡೆ, ಆರ್.ಟಿ.ಒ ಮಲ್ಲಿಕಾರ್ಜುನ, ಇನ್ನರ್ ವೀಲ್ ಅಧ್ಯಕ್ಷೆ ಗೀತಾ ನಾಯ್ಕ, ಗುರುರಾಜ ಹೊನ್ನಾವರ, ಅನಿಲ ಕರಿ ಹಾಗೂ ಪಿಎಸ್‍ಐ ದೇವೇಂದ್ರ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.