ADVERTISEMENT

ಶಿರಸಿ | ಸಹಸ್ರಲಿಂಗ ತಾಣದಲ್ಲಿ ಸೌಕರ್ಯ ಮರೀಚಿಕೆ!

ರಾಜೇಂದ್ರ ಹೆಗಡೆ
Published 5 ಫೆಬ್ರುವರಿ 2026, 6:25 IST
Last Updated 5 ಫೆಬ್ರುವರಿ 2026, 6:25 IST
ಶಿರಸಿಯ ಸಹಸ್ರಲಿಂಗದ ಶಾಲ್ಮಲಾ  ನದಿ ತಟದಲ್ಲಿ ನಿರ್ಮಿಸಿರುವ ತಡೆಗೋಡೆ ಶಿಥಿಲಗೊಂಡು ಅಪಾಯಕರ ಸ್ಥಿತಿಗೆ ತಲುಪಿದೆ
ಶಿರಸಿಯ ಸಹಸ್ರಲಿಂಗದ ಶಾಲ್ಮಲಾ  ನದಿ ತಟದಲ್ಲಿ ನಿರ್ಮಿಸಿರುವ ತಡೆಗೋಡೆ ಶಿಥಿಲಗೊಂಡು ಅಪಾಯಕರ ಸ್ಥಿತಿಗೆ ತಲುಪಿದೆ   

ಶಿರಸಿ: ಪ್ರಕೃತಿ ಮತ್ತು ಭಕ್ತಿಯ ಅಪರೂಪದ ಸಂಗಮವಾಗಿರುವ ಇತಿಹಾಸ ಪ್ರಸಿದ್ಧ ಇಲ್ಲಿನ ಸಹಸ್ರಲಿಂಗಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಹರಿವು ಹೆಚ್ಚುತ್ತಿದ್ದರೂ, ಮೂಲಸೌಕರ್ಯಗಳು ಮಾತ್ರ ಮರೀಚಿಕೆಯಾಗಿಯೇ ಉಳಿದಿವೆ. ಶಾಲ್ಮಲಾ ನದಿಯ ಉದರದಲ್ಲಿ ಕೆತ್ತಲಾದ ಸಾವಿರಾರು ಶಿವಲಿಂಗಗಳು ಹಾಗೂ ನಂದಿ ವಿಗ್ರಹಗಳಿರುವ ಈ ಪ್ರವಾಸಿ ತಾಣವು ಇಂದು ಸೂಕ್ತ ನಿರ್ವಹಣೆ ಮತ್ತು ರಕ್ಷಣೆಯಿಲ್ಲದೆ ಸೊರಗುತ್ತಿದೆ.

ನಗರದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರಕ್ಕೆ ಜನವರಿ, ಫೆಬ್ರುವರಿ ತಿಂಗಳಿನಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕಾಗಿ ಆಗಮಿಸುತ್ತಾರೆ. ಉಳಿದ ದಿನಗಳಲ್ಲೂ ಪ್ರವಾಸಿಗರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ, ಇಲ್ಲಿಗೆ ಬರುವ ಪ್ರವಾಸಿಗರಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಲ್ಲಿ ಸಂಬಂಧಪಟ್ಟ ಇಲಾಖೆಗಳು ವಿಫಲವಾಗಿವೆ ಎಂಬ ಆರೋಪ ಕೇಳಿಬಂದಿದೆ.

‘ನದಿ ದಂಡೆಯಲ್ಲಿ ಶಿವಲಿಂಗಗಳನ್ನು ವೀಕ್ಷಿಸಲು ನಿರ್ಮಿಸಲಾಗಿದ್ದ ಸಿಮೆಂಟ್ ಮೆಟ್ಟಿಲುಗಳು ಮತ್ತು ಪಥವು ಮಳೆಗಾಲದ ಅಬ್ಬರಕ್ಕೆ ಕೊಚ್ಚಿ ಹೋಗಿದ್ದು, ಪ್ರವಾಸಿಗರ ಸುರಕ್ಷತೆಗೆ ಅಳವಡಿಸಲಾಗಿದ್ದ ಕಬ್ಬಿಣದ ರೇಲಿಂಗ್‌ಗಳು ತುಕ್ಕು ಹಿಡಿದು ಶಿಥಿಲಗೊಂಡಿವೆ. ಸುರಕ್ಷತೆಯ ದೃಷ್ಟಿಯಿಂದ ಅಳವಡಿಸಲಾಗಿದ್ದ ಎಂಟು ಸಿಸಿ ಟಿವಿ ಕ್ಯಾಮರಾಗಳು ಕೂಡ ಕೋತಿಗಳ ಕಾಟದಿಂದಾಗಿ ಹಾಳಾಗಿದ್ದು, ಪ್ರಸ್ತುತ ಯಾವುದೇ ನಿಗಾ ವ್ಯವಸ್ಥೆ ಇಲ್ಲ. ಶಿರಸಿ-ಯಲ್ಲಾಪುರ ಮುಖ್ಯರಸ್ತೆಯಿಂದ ಸುಮಾರು 1 ಕಿ.ಮೀ ಡಾಂಬರ್ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಜಲ್ಲಿಕಲ್ಲು ಕಿತ್ತೆದ್ದು, ಕ್ರಷರ್‌ ಪೌಡರ್‌ ಧೂಳಿನಿಂದ ದ್ವಿಚಕ್ರ ವಾಹನ ಸವಾರರ ಈ ರಸ್ತೆಯಲ್ಲಿ ಸಂಚಾರ ಮಾಡಲು ಹೈರಾಣಾಗಿದ್ದಾರೆ’ ಎನ್ನುತ್ತಾರೆ ಸ್ಥಳೀಯರಾದ ವಿನಾಯಕ ಭಟ್. 

ADVERTISEMENT

‘ಸಹಸ್ರಲಿಂಗದ ಪಾವಿತ್ರ್ಯತೆಯೂ ಇಂದು ಪ್ರಶ್ನಾರ್ಹವಾಗಿದೆ. ಪ್ರವಾಸಿಗರು ಪಾವಿತ್ರ್ಯತೆಯನ್ನು ಮರೆತು ನದಿಗಿಳಿದು ಶಿವಲಿಂಗಗಳ ಮೇಲೆ ಓಡಾಡುವುದು ಮತ್ತು ಅಸಭ್ಯವಾಗಿ ವರ್ತಿಸುವುದು ಸಾಮಾನ್ಯವಾಗಿದೆ. ಸಹಸ್ರಲಿಂಗದಲ್ಲಿ ಶಾಲ್ಮಲಾ ನದಿಗೆ ಅಡ್ಡಲಾಗಿ ನಿರ್ಮಿಸಿದ ತೂಗು ಸೇತುವೆ ನಿರ್ವಹಣೆಯಿಲ್ಲದೇ ಶಿಥಿಲಾವಸ್ಥೆಯಲ್ಲಿದೆ. ಇಡೀ ಪ್ರದೇಶದ ಮೇಲೆ ನಿಗಾ ಇಡಲು ಪ್ರವಾಸೋದ್ಯಮ ಇಲಾಖೆಯಿಂದ ಕೇವಲ ಒಬ್ಬರೇ ಕಾವಲುಗಾರರನ್ನು ನೇಮಿಸಲಾಗಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ದಿನಗಳಲ್ಲಿ ಕನಿಷ್ಠ ಐದಾರು ಸಿಬ್ಬಂದಿಯನ್ನು ನೇಮಿಸಬೇಕು’ ಎನ್ನುತ್ತಾರೆ ಅವರು.

‘ಭೈರುಂಬೆ ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರು, ಪಾರ್ಕಿಂಗ್ ಮತ್ತು ಉಪಹಾರ ಗೃಹದ ವ್ಯವಸ್ಥೆ ಮಾಡಲಾಗಿದ್ದರೂ, ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನದ ಅವಶ್ಯಕತೆ ಇದೆ. ಅರಣ್ಯ ಇಲಾಖೆಯ ಅನುಮತಿ ದೊರೆಯದ ಕಾರಣ ಇಲ್ಲಿ ಉದ್ಯಾನವನ ನಿರ್ಮಿಸುವ ಯೋಜನೆಯೂ ನನೆಗುದಿಗೆ ಬಿದ್ದಿದೆ’ ಎಂಬುದು ಪಂಚಾಯಿತಿ ಜನಪ್ರತಿನಿಧಿಗಳ ಮಾತು. 

ಶಾಲ್ಮಲಾ ತಟದ ತಡೆಗೋಡೆ ಶಿಥಿಲ ಸಿಸಿ ಕ್ಯಾಮರಾಗಳ ಕಾರ್ಯ ಸ್ಥಗಿತ ಬೇಕಿದೆ ಸೌಲಭ್ಯಗಳ ಸ್ಪರ್ಷ

ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ಅನುದಾನದಲ್ಲಿ ಸಹಸ್ರಲಿಂಗ ಅಭಿವೃದ್ಧಿ ಮಾಡಲಾಗುತ್ತಿದೆ. ಇನ್ನೂ ಹೆಚ್ಚಿನ ಅನುದಾನ ದೊರೆತಲ್ಲಿ ಮಾದರಿ ಪುಣ್ಯ ಕ್ಷೇತ್ರ ಮಾಡಲು ಸಾಧ್ಯವಿದೆ
ರಾಘವೇಂದ್ರ ನಾಯ್ಕ ಭೈರುಂಬೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ

‘ಶಿವಲಿಂಗಗಳ ರಕ್ಷಣೆಯಾಗಲಿ’‘ಸಾವಿರಾರು ಶಿವನ ಲಿಂಗಗಳನ್ನು ಹೊಂದಿರುವ ಶಾಲ್ಮಲಾ ನದಿಯ ಸ್ಥಳಕ್ಕೆ ಸಹಸ್ರಲಿಂಗ ಎಂಬ ಹೆಸರು ಬಂದಿದೆ. ಆದರೆ ಶಿವಲಿಂಗಗಳ ರಕ್ಷಣೆಗೆ ಮಾತ್ರ ಈವರೆಗೆ ಯಾವುದೇ ಕ್ರಮವಾಗಿಲ್ಲ. ಈ ಕಾರಣದಿಂದ ಈ ಕ್ಷೇತ್ರದ ಪ್ರಸಿದ್ಧಿಗೆ ಕಾರಣವಾಗಿದ್ದ ಶಿವಲಿಂಗಗಳು ಕಣ್ಮರೆಯಾಗುತ್ತಿವೆ. ಸ್ಥಳೀಯರು ಶಿವಲಿಂಗಗಳನ್ನು ರಕ್ಷಣೆ ಮಾಡುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಹಸ್ರಲಿಂಗಗಳ ರಕ್ಷಣೆಯಾಗಬೇಕು. ಮುರ್ಡೇಶ್ವರದಲ್ಲಿರುವಂತೆ ಸಹಸ್ರಲಿಂಗದಲ್ಲಿಯೂ ಶಿವನ ಮೂರ್ತಿ ಸ್ಥಾಪಿಸಿದರೆ ಇನ್ನಷ್ಟು ಆಕರ್ಷಣೀಯ ಸ್ಥಳವಾಗುತ್ತಿತ್ತು. ಈ ಬಗ್ಗೆ ಸಂಬಂಧಿಸಿದವರು ಗಮನವಹಿಸಬೇಕು’ ಎಂಬುದು ಸ್ಥಳೀಯರ ಆಗ್ರಹವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.