ADVERTISEMENT

ಶಿರಸಿ | ರಮಣೀಯ ತಾಣ: ಮೂಲಸೌಕರ್ಯದ ನಿರೀಕ್ಷೆಯಲ್ಲಿ ‘ಶಿವಗಂಗಾ’

ಮೈಮರೆತರೆ ಅಪಾಯ ಸೃಷ್ಟಿಸುವ ಜಲಪಾತ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 21:30 IST
Last Updated 16 ಡಿಸೆಂಬರ್ 2022, 21:30 IST
ಶಿರಸಿ ತಾಲ್ಲೂಕಿನ ಜಡ್ಡಿಗದ್ದೆ ಸಮೀಪ ಇರುವ ಶಿವಗಂಗಾ ಜಲಪಾತ. (ಸಂಗ್ರಹ ಚಿತ್ರ)
ಶಿರಸಿ ತಾಲ್ಲೂಕಿನ ಜಡ್ಡಿಗದ್ದೆ ಸಮೀಪ ಇರುವ ಶಿವಗಂಗಾ ಜಲಪಾತ. (ಸಂಗ್ರಹ ಚಿತ್ರ)   

ಶಿರಸಿ: ತಾಲ್ಲೂಕು ಕೇಂದ್ರದಿಂದ ಸುಮಾರು 40 ಕಿ.ಮೀ. ದೂರದಲ್ಲಿ ಕೊಡ್ನಗದ್ದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಶಿವಗಂಗಾ ಜಲಪಾತ ಪ್ರವಾಸಿಗರ ಪಾಲಿಗೆ ರಮಣೀಯ ತಾಣ. ಆದರೆ ಅಷ್ಟೇ ಅಪಾಯಕಾರಿಯೂ ಹೌದು.

ಹಸಿರಿನಿಂದ ಕಂಗೊಳಿಸುವ ಬೆಟ್ಟದಿಂದ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತ ದೂರದಿಂದಲೇ ವೀಕ್ಷಿಸಬೇಕು. ಹತ್ತಿರ ತೆರಳಿ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಈಚೆಗೆ ಜಲಪಾತದ ಸಮೀಪ ಫಲಕ ಅಳವಡಿಸಿದ್ದು ಬಿಟ್ಟರೆ ಸುರಕ್ಷತೆಗೆ ಕ್ರಮವಾಗಿಲ್ಲ.

ಜಲಪಾತ ವೀಕ್ಷಣೆಗೆ ನಿರ್ಮಿಸಿದ ವೀಕ್ಷಣಾ ಗೋಪುರದ ಚಾವಣಿ ಮುರಿದು ಬೀಳುವ ಸ್ಥಿತಿಯಲ್ಲಿದೆ. ವಾಹನ ನಿಲುಗಡೆ ಮಾಡುವ ಜಾಗದಲ್ಲೂ ವ್ಯವಸ್ಥಿತವಾದ ಜಾಗ ನಿರ್ಮಿಸಿಲ್ಲ. ಮುಖ್ಯ ರಸ್ತೆಯಿಂದ ಜಲಪಾತದತ್ತ ತೆರಳುವ ಮಾರ್ಗವೂ ದುರ್ಗಮವಾಗಿದೆ. ಹೀಗೆ ಹಲವು ಸೌಕರ್ಯದ ಕೊರತೆ ಕಾಡುತ್ತಿದೆ.

ADVERTISEMENT

ಪಟ್ಟಣದ ಹೊಳೆ ಗುಡ್ಡದಿಂದ ಸುಮಾರು 74 ಮೀ. ಎತ್ತರದಿಂದ ಧುಮ್ಮಿಕ್ಕುತ್ತದೆ. ಇದು ಸೃಷ್ಟಿಸುವ ಸೊಬಗನ್ನು ಶಿವಗಂಗಾ ಜಲಪಾತ ಎನ್ನಲಾಗುತ್ತದೆ. ಇದನ್ನು ನೋಡಲು ವರ್ಷಕ್ಕೆ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಜಲಪಾತ ಹತ್ತಿರದಿಂದ ಕಣ್ತುಂಬಿಕೊಳ್ಳಲು ಸಮೀಪ ತೆರಳಿ ಜೀವ ಕಳೆದುಕೊಂಡವರ ಸಂಖ್ಯೆ ಸಾಕಷ್ಟಿದೆ.

‘ಶಿವಗಂಗಾ ಜಲಪಾತ ಜಿಲ್ಲೆಯ ಉತ್ತಮ ಜಲಪಾತಗಳಲ್ಲಿ ಒಂದಾದರೂ ಹೆಚ್ಚು ಪ್ರಚಾರ ಸಿಕ್ಕಿಲ್ಲ. ನಗರದಿಂದ ದೂರ ಇರುವದು ಒಂದು ಕಾರಣವಾದರೆ, ಈ ತಾಣದ ಬಗ್ಗೆ ಜನರಿಗೆ ತಿಳಿಸಲು ಪ್ರವಾಸೋದ್ಯಮ ಇಲಾಖೆ ಮುತುವರ್ಜಿ ವಹಿಸಿಲ್ಲ. ಅಲ್ಲದೆ ಇಲ್ಲಿ ಸೌಕರ್ಯಗಳನ್ನೂ ಒದಗಿಸಲಾಗುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಹರೀಶ ಹೆಗಡೆ.

‘ಶಿವಗಂಗಾ ಜಲಪಾತದ ವೀಕ್ಷಣಾ ಗೋಪುರ ದುರಸ್ಥಿ ಸೇರಿದಂತೆ ಇಲ್ಲಿ ಅಗತ್ಯ ಸೌಕರ್ಯ ಒದಗಿಸಲಾಗುವುದು. ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಮೂಲಕ ತಾಣವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಸೂಚಿಸಲಾಗಿದೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.