ಸಿದ್ದಾಪುರ: ಉನ್ನತ ಶಿಕ್ಷಣ ಪಡೆದವರು ಒಳ್ಳೆಯ ಉದ್ಯೋಗಗಳನ್ನರಸಿ ಹೋಗುತ್ತಿರುವುದರಿಂದ ಇಂದಿನ ಯುವ ಸಮೂಹ ಕೃಷಿಯಿಂದ ವಿಮುಖಗೊಳ್ಳುತ್ತಿದೆ. ಆದರೆ ಉದ್ಯೋಗದಲ್ಲಿದ್ದರೂ ಕೃಷಿಯನ್ನು ಬಿಡದೇ ಮಾದರಿಯಾಗಿದ್ದಾರೆ ತಾಲ್ಲೂಕಿನ ಕಾಶೀಗದ್ದೆಯ ನಿವಾಸಿ ಪ್ರಶಾಂತ ಹೆಗಡೆ.
ಸೊರಬದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಷಯದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಕೃಷಿ ಮತ್ತು ಹೈನುಗಾರಿಕೆಯಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.
‘ಚಿಕ್ಕಂದಿನಿಂದ ಕೃಷಿ ಕಾರ್ಯಗಳನ್ನು ಮಾಡುತ್ತಾ ಬೆಳೆದಿದ್ದರಿಂದ ಕೃಷಿಯನ್ನು ಮುಂದುವರೆಸುವ ಆಸಕ್ತಿ ಬೆಳೆಯಿತು. ಸ್ನಾತಕೋತ್ತರ ಪದವಿ ಪಡೆದ ನಂತರ ಹಲವಾರು ಅವಕಾಶಗಳು ಇದ್ದರೂ ಕೃಷಿ ಕಾರ್ಯ ಮುಂದುವರೆಸುವ ಇಚ್ಛೆಯಿಂದ ಊರಿಗೆ ಮರಳಿದೆ. ಈಗ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಾ ಕೃಷಿಯನ್ನೂ ಮುಂದುವರೆಸುತ್ತಿದ್ದೇನೆ. ಬೆಳಿಗ್ಗೆ ಕಾಲೇಜಿಗೆ ತೆರಳುವ ಮುನ್ನ, ಮತ್ತು ಸಂಜೆ ಕಾಲೇಜು ಅವಧಿಯ ನಂತರ ಕೃಷಿ ಕೆಲಸದಲ್ಲಿ ಪಾಲ್ಗೊಳ್ಳುತ್ತೇನೆ’ ಎನ್ನುತ್ತಾರೆ ಪ್ರಶಾಂತ ಹೆಗಡೆ.
‘ಪಿತ್ರಾರ್ಜಿತವಾಗಿ ಬಂದ ಒಂದು ಎಕರೆಯಷ್ಟು ಅಡಿಕೆ ತೋಟದ ಜೊತೆಗೆ ಎರಡು ಎಕರೆಯಷ್ಟು ಹೊಸ ಅಡಿಕೆ ತೋಟವನ್ನು ನಿರ್ಮಿಸಿದ್ದೇನೆ. ಅಡಿಕೆಯ ಜೊತೆಗೆ ಬಾಳೆ, ಕಾಳುಮೆಣಸು, ಲವಂಗ, ಕಾಫಿ, ಜಾಯಿಕಾಯಿ, ಶುಂಠಿ ಉಪಬೆಳೆಗಳಾಗಿ ಆದಾಯ ನೀಡುತ್ತಿವೆ’ ಎಂದರು.
‘3 ಎಮ್ಮೆ ಮತ್ತು 2 ಹಸುಗಳನ್ನು ಸಾಕುತ್ತಿದ್ದು, ದಿನಕ್ಕೆ ಸುಮಾರು 8-10 ಲೀ. ನಷ್ಟು ಹಾಲನ್ನು ಡೇರಿಗೆ ನೀಡುತ್ತೇವೆ. ಒಂದು ಎಕರೆಯಷ್ಟು ಪ್ರದೇಶದ ಗದ್ದೆಯಲ್ಲಿ ಮಳೆಗಾಲದಲ್ಲಿ ಭತ್ತವನ್ನು ಬೆಳೆದರೆ, ಬೇಸಿಗೆಯಲ್ಲಿ ಮಂಗಳೂರು ಸವತೆ ಬೆಳೆದು ಅದರಿಂದಲೂ ಸ್ವಲ್ಪ ಆದಾಯ ಪಡೆಯುತ್ತಿದ್ದೇನೆ. ಜಾನುವಾರುಗಳ ಮೇವಿಗಾಗಿ ಬೇಸಿಗೆಯಲ್ಲಿ ಬವಡೆ, ಜೋಳ, ಸೊಣಬು ಬೆಳೆದು ಮೇವಿನ ಕೊರತೆ ನೀಗಿಸುವ ಪ್ರಯತ್ನ ಮಾಡಿದ್ದೇನೆ’ ಎಂದು ತಿಳಿಸಿದರು.
‘ತಂದೆ ಲಕ್ಷ್ಮೀನಾರಾಯಣ ಹೆಗಡೆ ಮತ್ತು ಪತ್ನಿ ಲಲಿತಾ ಹೆಗಡೆಯವರ ಸಹಕಾರದಿಂದ ವೃತ್ತಿ ಮತ್ತು ಆಸಕ್ತಿ ಎರಡನ್ನೂ ಸಮನಾಗಿ ನಿಭಾಯಿಸುತ್ತಿದ್ದೇನೆ’ ಎನ್ನುತ್ತಾರೆ ಅವರು.
----
ಹಣ್ಣಿನ ಗಿಡ ಬೆಳೆಸಲು ಆದ್ಯತೆ1
‘ಕೇವಲ ಆದಾಯ ತರುವ ಬೆಳೆಗಳು ಮಾತ್ರವಲ್ಲದೇ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಬೆಳೆದಿದ್ದೇನೆ. 3 ಬಗೆಯ ಮಾವು ಹಲಸು ಪೇರಲೆ ಚಿಕ್ಕು ರಾಜನೆಲ್ಲಿ ಮುಂತಾದ ಹಣ್ಣಿನ ಗಿಡಗಳಿವೆ. ಮನೆಯ ಸುತ್ತ ದಾಸವಾಳ ಗುಲಾಬಿ ಮಲ್ಲಿಗೆ ವಿವಿಧ ಬಗೆಯ ಸೇವಂತಿಗೆ ಡೇರೆ ಗಿಡಗಳನ್ನೂ ಬೆಳೆಸಿದ್ದೇವೆ’ ಎಂದು ಪ್ರಶಾಂತ ಹೆಗಡೆ ವಿವರಿಸುತ್ತಾರೆ. ‘ಕಾರ್ಮಿಕರ ಸಮಸ್ಯೆ ಮತ್ತು ಸಮಯದ ಅಭಾವ ಇದ್ದ ಕಾರಣಕ್ಕೆ ಕೃಷಿ ಕಾರ್ಯಗಳಿಗೆ ಯಂತ್ರೋಪಕರಣಗಳನ್ನು ಉಪಯೋಗುಸುತ್ತಿದ್ದೇನೆ. ಪೈಬರ್ ದೋಟಿ ಕಳೆ ಕತ್ತರಿಸುವ ಯಂತ್ರ ಮೋಟೋ ಕಾರ್ಟ್ ಪವರ್ ಸ್ಪ್ರೇಯರ್ ಮುಂತಾದ ಯಂತ್ರೋಪಕರಣಗಳ ಸಹಾಯದಿಂದ ಹೆಚ್ಚಿನ ಕೃಷಿ ಕೆಲಸಗಳನ್ನು ಸ್ವತಃ ನಿರ್ವಹಿಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.