ಸಿದ್ದಾಪುರ: ವಾಣಿಜ್ಯ ಬೆಳೆಯಲ್ಲಾದ ನಷ್ಟವನ್ನು ಉಪಬೆಳೆಗಳಿಂದ ಸರಿದೂಗಿಸಲು ಹೆಣಗುತ್ತಿರುವ ರೈತರಿಗೆ, ತೆಂಗಿನ ಮರಕ್ಕೂ ವ್ಯಾಪಕವಾಗಿ ಹರಡುತ್ತಿರುವ ಸುಳಿಕೊಳೆ ರೋಗ ನಿದ್ದೆಗೆಡಿಸಿದೆ.
ತಾಲ್ಲೂಕಿನಲ್ಲಿ ಸುಮಾರು 283.05 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಹಲವು ರೈತರು ತೆಂಗಿನ ಕಾಯಿ ಮಾರಾಟದಿಂದ ಲಾಭ ಗಳಿಸುತ್ತಿದ್ದರೆ, ಕೆಲವರು ಶುದ್ಧ ತೆಂಗಿನ ಎಣ್ಣೆ ತಯಾರಿಸಿ ಉತ್ತಮ ಮಾರುಕಟ್ಟೆ ಕಂಡುಕೊಂಡಿದ್ದಾರೆ. ಆದರೆ, ಕೊಳೆರೋಗ ಕೇವಲ ಬೆಳೆಯನ್ನಷ್ಟೆ ಅಲ್ಲದೇ ಉತ್ತಮ ಇಳುವರಿ ನೀಡುತ್ತಿರುವ ಮರವನ್ನೇ ಬಲಿ ಪಡೆಯುತ್ತಿದೆ.
‘ನಮಗಿರುವ ಸ್ವಲ್ಪ ಜಮೀನಲ್ಲಿಯೇ ವ್ಯವಸಾಯ ಮಾಡಿ ಜೀವನ ಮಾಡುತ್ತಿದ್ದೇವೆ. ಸುಮಾರು ಅರ್ಧ ಎಕರೆಯಷ್ಟು ಅಡಿಕೆ ತೋಟವಿದೆ. ಮನೆಯ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ 8 ತೆಂಗಿನ ಮರಗಳಿತ್ತು. ಮರಗಳ ಪೋಷಣೆಯನ್ನು ಚೆನ್ನಾಗಿ ನಿರ್ವಹಿಸಿದ್ದರಿಂದ ಉತ್ತಮ ಇಳುವರಿ ಸಿಗುತ್ತಿತ್ತು. ಮನೆ ಬಳಕೆಯ ಹೊರತಾಗಿಯೂ ತೆಂಗಿನ ಕಾಯಿಗಳನ್ನು ಮಾರಿ ವಾರ್ಷಿಕ ಸುಮಾರು 10-15 ಸಾವಿರದ ವರೆಗೂ ಆದಾಯ ಪಡೆಯುತ್ತಿದ್ದೆ. ಕೊಳೆರೋಗದಿಂದ ಕಳೆದ ಎರಡು ವರ್ಷಗಳಲ್ಲಿ 6 ತೆಂಗಿನ ಮರಗಳು ಸತ್ತಿವೆ. ಉಳಿದ ಎರಡು ಮರಗಳಲ್ಲಿ ಬೆಳೆ ಇದ್ದರೂ ಮಂಗಗಳ ಹಾವಳಿಯಿಂದ ಫಸಲು ಕೈಗೆಟಕುತ್ತಿಲ್ಲ. ಈ ಬಾರಿ ದೀಪಾವಳಿಗೆ ತೆಂಗಿನಕಾಯಿಯನ್ನು ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಕಬ್ಬಗಾರಿನ ಕೃಷಿಕ ಗುರುಮೂರ್ತಿ.
‘ರೋಗಗಳು ಮತ್ತು ಕಾಡುಪ್ರಾಣಿಗಳ ಹಾವಳಿಯಿಂದ ತೆಂಗಿನ ಫಸಲು ಕುಂಠಿತಗೊಂಡಿದೆ. ಪರಿಣಾಮ ತೆಂಗಿನ ಕಾಯಿಯ ಬೆಲೆ ಪ್ರತಿ ಕೆಜಿಗೆ ನೂರರ ಗಡಿ ದಾಟಿದೆ. ಹಬ್ಬಗಳಲ್ಲಿ ಜನಸಾಮಾನ್ಯರು ತೆಂಗಿನಕಾಯಿಯನ್ನು ಕೊಳ್ಳುವುದು ಅಸಾಧ್ಯ ಎಂಬ ಸ್ಥಿತಿ ಉಂಟಾಗಿದೆ. ಪರಿಸ್ಥಿತಿ ಹೀಗೆಯೆ ಮುಂದುವರೆದರೆ ತೆಂಗಿನ ಕಾಯಿಯ ಬೆಲೆ ಮತ್ತಷ್ಟು ಹೆಚ್ಚಾಗಬಹುದು’ ಎನ್ನುತಾರೆ ಬಾಲಚಂದ್ರ ನಾಯ್ಕ.
ಈ ಬಾರಿ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಿರುವುದರಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ ಅಡಿಕೆಯಲ್ಲಿ ಕಾಣಿಸಿಕೊಳ್ಳುವ ಕೊಳೆರೋಗ ತೆಂಗಿನ ಮರಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆಅರುಣ್ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.