
ಸಿದ್ದಾಪುರ: ಅಕ್ಷರದಾಸೋಹದ ಸಹಾಯಕ ನಿರ್ದೇಶಕರು ಪ್ರತಿ ಶಾಲೆಗಳಿಗೆ ಭೇಟಿ ನೀಡಿ ಬಿಸಿ ಊಟದ ಸಾಮಗ್ರಿ, ಅಡುಗೆ ಪಾತ್ರೆ ಹಾಗೂ ಕುಡಿಯುವ ನೀರಿನ ಕುರಿತು ಪರಿಶೀಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಅವರು ಮಾತನಾಡಿದರು.
ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒಗಳು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಶಾಲೆಗಳಿಗೆ, ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ವ್ಯವಸ್ಥೆ ಸರಿ ಇಲ್ಲದಿದ್ದಲ್ಲಿ ಸರಿಪಡಿಸಬೇಕು ಎಂದು ಸೂಚಿಸಿದರು.
ತೋಟಗಾರಿಕೆ, ಅರಣ್ಯ ಹಾಗೂ ಇತರ ಇಲಾಖೆಗಳ ನರೇಗಾ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿ ಯೋಜನೆಯ ಪ್ರಗತಿ ಆಗದಿರುವ ಕುರಿತು ಬೇಸರ ವ್ಯಕ್ತಪಡಿಸಿದರು.
‘ಕೂಲಿಕಾರರ ಹಾಗೂ ರೈತರ ಬೇಡಿಕೆ ಇದ್ದರೂ ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ. ಅನುದಾನ ವಾಪಸ್ ಹೋದರೆ ಅಭಿವೃದ್ಧಿ ಹೇಗೆ ಸಾಧ್ಯ. ನಿಧಿಯ ಬಳಕೆ ಸಮರ್ಪಕವಾಗಿ ಆಗಬೇಕು. ಸಭೆಗಳಿಗೆ ಬಂದರೆ ಸಾಲದು. ಕಾಮಗಾರಿಗಳನ್ನು ಸರಿಯಾದ ಸಮಯಕ್ಕೆ ಅನುಷ್ಠಾನಗೊಳಿಸಿ ಮುಕ್ತಾಯ ಮಾಡಬೇಕು. ಸಂಬಂಧ ಪಟ್ಟ ಇಲಾಖೆಯವರೊಂದಿಗೆ ಚರ್ಚೆ ನಡೆಸಿ ಕೂಡಲೇ ಕಾಮಗಾರಿ ನಡೆಸುವುದಕ್ಕೆ ಮುಂದಾಗಬೇಕು’ ಎಂದರು.
ಪಂಚಾಯತ ರಾಜ್ ಇಲಾಖೆಯಿಂದ ನಡೆಯುತ್ತಿರುವ ಅಂಗನವಾಡಿ, ಶಾಲೆ, ಪಶುಸಂಗೋಪನೆಯ ಕಟ್ಟಡಗಳನ್ನು ಬೇಗ ಪೂರ್ಣಗೊಳಿಸಬೇಕು ಎಂದು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ನೂರಕ್ಕೆ ನೂರು ಆಗುವುದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಚ್ಚು ಪ್ರಯತ್ನಮಾಡಬೇಕು. ಶಿಕ್ಷಣದಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿ ನಡೆಸಿ ಅವರು ಸಹ ಹೆಚ್ಚು ಅಂಕಪಡೆಯುವುದಕ್ಕೆ ಮುಂದಾಗಬೇಕು.
ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಗ್ರಾಮ ಪಂಚಾಯಿತಿಗೆ ಅನುದಾನ ಕಡಿಮೆ ಇದ್ದು, ಜನರಿಂದ ತೆರಿಗೆಯನ್ನು ವಸೂಲಿ ಮಾಡಿ ನಿರ್ವಹಣೆ ಮಾಡಬೇಕು. ಜಲಜೀವನ ಅತ್ಯಂತ ಪ್ರಮುಖ ಯೋಜನೆಯಾಗಿದ್ದು, ಇದರ ಕುರಿತು ಹೆಚ್ಚು ಪ್ರಾಮುಖ್ಯತೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಆಡಳಿತ ವಿಭಾಗದ ಉಪಕಾರ್ಯದರ್ಶಿ ಎಂ.ಎಸ್. ಅಲ್ಲಾಭಕ್ಷ, ಯೋಜನಾ ನಿರ್ದೇಶಕ ಕರೀಂ ಅಸಾದಿ, ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತ, ಮುಖ್ಯ ಲೆಕ್ಕಾಧಿಕಾರಿ ಆನಂದ್ ಹಬೀಬ್, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ದಯಾನಂದ ನಾಯ್ಕ, ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ, ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.