ADVERTISEMENT

ಶಿರಸಿ: ಕೃಷಿ ಉತ್ಪನ್ನ ಶೈತ್ಯಾಗಾರ ಕಾಮಗಾರಿ ಸ್ಥಗಿತ

ಬೆಳೆಗಾರರ ತಲೆಬಿಸಿಗೆ ಕಾರಣವಾದ ಶೈತ್ಯಾಗಾರ

ರಾಜೇಂದ್ರ ಹೆಗಡೆ
Published 12 ಜೂನ್ 2025, 4:31 IST
Last Updated 12 ಜೂನ್ 2025, 4:31 IST
ಶಿರಸಿ ತಾಲ್ಲೂಕಿನ ಅಂಡಗಿಯಲ್ಲಿ ನಿರ್ಮಾಣ ಹಂತದಲ್ಲಿರುವ ಶೈತ್ಯಾಗಾರ ಕಟ್ಟಡ
ಶಿರಸಿ ತಾಲ್ಲೂಕಿನ ಅಂಡಗಿಯಲ್ಲಿ ನಿರ್ಮಾಣ ಹಂತದಲ್ಲಿರುವ ಶೈತ್ಯಾಗಾರ ಕಟ್ಟಡ   

ಶಿರಸಿ: ಕೃಷಿ ಉತ್ಪನ್ನಗಳ ಸುರಕ್ಷಿತ ದಾಸ್ತಾನು ಮಾಡುವ ಉದ್ದೇಶದಿಂದ ಉತ್ತರ ಕನ್ನಡಕ್ಕೆ ಮೊದಲ ಬಾರಿಗೆ ಮಂಜೂರಾಗಿರುವ ಕೃಷಿ ಉತ್ಪನ್ನ ಶೈತ್ಯಾಗಾರ (ಕೋಲ್ಡ್ ಸ್ಟೋರೇಜ್) ಕಾಮಗಾರಿ ಅನುದಾನ ಕೊರತೆಯಿಂದ ಸ್ಥಗಿತವಾಗಿದೆ. ಇದರಿಂದಾಗಿ ಉತ್ಪನ್ನ ರಕ್ಷಣೆಯ ಕನಸು ಕಂಡಿದ್ದ ಸ್ಥಳೀಯ ರೈತರು ಸಂಕಷ್ಟಕ್ಕೆ ಸಿಗುವಂತಾಗಿದೆ.

ತಾಲ್ಲೂಕಿನ ಬನವಾಸಿ ಭಾಗದಲ್ಲಿ ಅನಾನಸ್, ಶುಂಠಿ ಸೇರಿದಂತೆ ಹಣ್ಣು ಕೃಷಿ ಪ್ರಮಾಣ ಹೆಚ್ಚಿದೆ. ಅತಿವೃಷ್ಟಿ, ಅನಾವೃಷ್ಟಿ, ಹವಾಮಾನ ವೈಪರಿತ್ಯ, ದರ ಕುಸಿತದಂಥ ಸಂದರ್ಭದಲ್ಲಿ ಫಸಲು ಹಾಳಾಗದಂತೆ ದಾಸ್ತಾನಿಟ್ಟುಕೊಳ್ಳಲು ಶೈತ್ಯಾಗಾರ ಸ್ಥಾಪಿಸುವಂತೆ ಹಲವು ವರ್ಷಗಳಿಂದ ರೈತರ ಬೇಡಿಕೆ ಇತ್ತು. ಐದು ವರ್ಷಗಳ ಹಿಂದೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಿವರಾಮ ಹೆಬ್ಬಾರ ಒತ್ತಾಯದ ಮೇರೆಗೆ ಆಗಿನ ಕೃಷಿ ಸಚಿವ ಬಿ.ಸಿ. ಪಾಟೀಲ ಶಿರಸಿಗೆ ಬಂದ ವೇಳೆ ಶೈತ್ಯಾಗಾರ ಸ್ಥಾಪಿಸುವ ಭರವಸೆ ನೀಡಿದ್ದರು.

ಎರಡು ವರ್ಷಗಳ ನಿರಂತರ ಹುಡುಕಾಟದ ಬಳಿಕ 2022ರಲ್ಲಿ ಅಂಡಗಿ ಗ್ರಾಮದ ಸರ್ವೆ ನಂಬರ್ 169ರಲ್ಲಿ ಭೂಮಿ ಗುರುತಿಸಿ, ಶೈತ್ಯಾಗಾರ ಸ್ಥಾಪನೆಗೆ ₹9.5 ಕೋಟಿ ಬಿಡುಗಡೆ ಮಾಡಿ, 2023ರಲ್ಲಿ ಕಾಮಗಾರಿಗೆ ಸ್ವತಃ ಬಿ.ಸಿ. ಪಾಟೀಲ ಚಾಲನೆ ನೀಡಿದ್ದರು.

ADVERTISEMENT


ಕರ್ನಾಟಕ ಗೃಹ ಮಂಡಳಿ ಅನುಷ್ಠಾನ ಜವಾಬ್ದಾರಿ ಹೊತ್ತಿದ್ದು, ತಮಿಳುನಾಡು ಮೂಲದ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಕಾಮಗಾರಿ 2024ರಲ್ಲಿಯೇ ಪೂರ್ಣಗೊಂಡು ರೈತರ ಬಳಕೆಗೆ ಸಿಗಬೇಕಿತ್ತಾದರೂ ಈವರೆಗೆ ಕಟ್ಟಡ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಅದೂ ಅಲ್ಲದೇ ಪ್ರಸ್ತುತ ಅನುದಾನ ಕೊರತೆಯಿಂದ ಕಾಮಗಾರಿ ಸ್ಥಗಿತ ಆಗಿದೆ.  

'ಬರಗಾಲ, ಅತಿವೃಷ್ಟಿಯಂಥ ಸಂಕಷ್ಟದ ಸಂದರ್ಭದಲ್ಲಿ ತೋಟಗಾರಿಕಾ ಬೆಳೆಗಳಾದ ಅನಾನಸ್, ಶುಂಠಿ, ಬಾಳೆ ಮುಂತಾದವುಗಳನ್ನು ದಾಸ್ತಾನಿಡಲು, ಕೃಷಿ ಉತ್ಪನ್ನಗಳನ್ನು ಕೆಡದಂತೆ ಇಟ್ಟುಕೊಳ್ಳುವುದು ಶೈತ್ಯಾಗಾರದ ಉದ್ದೇಶವಾಗಿತ್ತು. ಆದರೆ ಈಗ ಅನುದಾನ ಇಲ್ಲ ಎಂದು ಕಟ್ಟಡವನ್ನು ಅರೆಬರೆಯಾಗಿ ಕಟ್ಟಿ ಬಿಡಲಾಗಿದೆ. ಹೀಗಾಗಿ ಇದರ ಪ್ರಯೋಜನ ಸದ್ಯ ಸಿಗುವಂತೆ ಕಾಣುತ್ತಿಲ್ಲ. ಹಲವು ರೈತರು ಹೊರ ಜಿಲ್ಲೆಗಳ ಶೈತ್ಯಾಗಾರವನ್ನೇ ಅವಲಂಬಿಸುವ ಅನಿವಾರ್ಯತೆ ಮುಂದುವರೆದಿರುವುದು ಶೋಚನೀಯ' ಎನ್ನುತ್ತಾರೆ ಕೃಷಿಕ ಸೋಮನಗೌಡ.

'ಈ ಹಿಂದೆ ಬಿಡುಗಡೆಯಾದ ಅನುದಾನ ಕಟ್ಟಡ ನಿರ್ಮಾಣಕ್ಕೆ ಬಳಸಲಾಗಿದೆ. ಶೈತ್ಯಾಗಾರ ಒಳಭಾಗ ನಿರ್ಮಿಸಲು ಹೆಚ್ಚಿನ ಖರ್ಚಾಗುತ್ತದೆ. ಅದಕ್ಕೆ ಕಟ್ಟಡಕ್ಕೆ ಬಿಡುಗಡೆಯಾದ ಅನುದಾನ ಬಳಸಲಾಗದು. ಪ್ರತ್ಯೇಕ ₹25 ಲಕ್ಷಕ್ಕೂ ಹೆಚ್ಚು ಅನುದಾನ ಬೇಕಿದೆ. ಈ ಕುರಿತು ಪ್ರಸ್ತಾವ ಸಲ್ಲಿಸಿದ್ದು, ಬಿಡುಗಡೆ ಆಗಬೇಕಿದೆ. ಅದರ ನಂತರವಷ್ಟೇ ಕಾಮಗಾರಿ ನಡೆಸಲು ಸಾಧ್ಯ' ಎಂಬುದು ಗುತ್ತಿಗೆ ಕಂಪನಿಯವರ ಮಾತಾಗಿದೆ.

ಕಾಮಗಾರಿ ಆರಂಭವಾಗಿ 3 ವರ್ಷ  ₹9.50 ಕೋಟಿ ವೆಚ್ಚದ ಯೋಜನೆ  ಹೆಚ್ಚುವರಿ ₹25 ಲಕ್ಷಕ್ಕೆ ಪ್ರಸ್ತಾವ 
ಬೆಳೆ ದಾಸ್ತಾನಿಗೆ ಶೈತ್ಯಾಗಾರ ಹುಡುಕಿಕೊಂಡು ಬ್ಯಾಡಗಿ ರಾಣೆಬೆನ್ನೂರು ಭಾಗಕ್ಕೆ ಬನವಾಸಿ ಭಾಗದ ರೈತರು ಹೋಗುತ್ತಿದ್ದಾರೆ. ಪ್ರಸ್ತುತ ಅಂಡಗಿಯಲ್ಲಿನ ಶೈತ್ಯಾಗಾರ ಕಾಮಗಾರಿ ನೋಡಿದರೆ ಶೇ.60ರಷ್ಟು ಮಾತ್ರ ಮುಗಿದಂತಿದೆ. ತಕ್ಷಣ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಮುಂದಾಗಬೇಕು.
ಸುದರ್ಶನ ನಾಯ್ಕ ಅಂಡಗಿ ಗ್ರಾಮ ಪಂಚಾಯಿತಿ ಸದಸ್ಯ
ಶೈತ್ಯಾಗಾರದ ಮೇಲ್ಛಾವಣಿ ಮುಗಿದಿದೆ. ಒಳಭಾಗದ ತಂಪು ಪ್ರದೇಶ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಕೇಳಲಾಗಿದೆ.
ಮಧುಕರ ನಾಯ್ಕ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಹಲವು ಉಪಯೋಗ: 

ಶೈತ್ಯಾಗಾರ ಕೇವಲ ಪದಾರ್ಥಗಳನ್ನಿಟ್ಟು ಬೆಲೆ ಹೆಚ್ಚಾದಾಗ ಮಾರಾಟ ಮಾಡುವುದಕ್ಕಷ್ಟೇ ಅಲ್ಲ. ಕೊಯ್ಲೋತ್ತರ ನಷ್ಟದ ಪ್ರಮಾಣ ತಗ್ಗಿಸುವುದಕ್ಕೂ ಸಹಾಯವಾಗುತ್ತದೆ. ಧಾನ್ಯಗಳನ್ನು ದೂಳು ಕೀಟಗಳು ಇಲಿ ಹೆಗ್ಗಣಗಳ ಹಾವಳಿಯಿಂದ ರಕ್ಷಿಸಿ ಅವುಗಳ ಗುಣಮಟ್ಟವನ್ನೂ ಕಾಪಾಡಿಕೊಳ್ಳಲು ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಲು ಸಹಾಯವಾಗುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.