ಶಿರಸಿ: ಬನವಾಸಿಯ ಶಿಲಾಮಯ ದೇವಾಲಯದಲ್ಲಿರುವ ಮಧುಕೇಶ್ವರನ ದರ್ಶನ ಪಡೆಯಲು ಬರುವ ಭಕ್ತರು ಛತ್ರಿ ತಲೆಯ ಮೇಲೆ ಹಿಡಿದೇ ಬರಬೇಕು. ಇಲ್ಲವಾದರೆ ದೇವಾಲಯದಿಂದ ಹೊರಹೋಗುವುದರೊಳಗೆ ಒದ್ದೆಯಾಗುವುದು ಖಚಿತ! ಇದಕ್ಕೆ ನೇರ ಕಾರಣ ದೇವಾಲಯ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪುರಾತತ್ವ ಇಲಾಖೆಯಾಗಿದೆ.
ಕದಂಬ ವಂಶಜರ ನೆಲವಾದ ಬನವಾಸಿಯಲ್ಲಿ ಶಿಲೆಗಳಿಂದಲೇ ನಿರ್ಮಿತ ಮಧುಕೇಶ್ವರ ದೇವಾಲಯ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಸೋರುತ್ತಿದೆ. ಗರ್ಭಗುಡಿ, ನಂದಿ ಮಂಟಪ, ಸಂಕಲ್ಪ ಮಂಟಪ, ಘಂಟೆ ಮಂಟಪ ಇತರೆಡೆಗಳಲ್ಲಿ ದೇವಾಲಯದ ಚಾವಣಿಯ ಗಾರೆ ಕಳಚಿ ನೀರು ಒಳ ಬರುತ್ತಿದೆ.
ದಶಕಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ದುರಸ್ತಿ ಕಾರ್ಯವಾಗಿದ್ದರೂ ಅದೀಗ ಪ್ರಯೋಜನಕ್ಕೆ ಬರುತ್ತಿಲ್ಲ. ಈಚಿನ ವರ್ಷಗಳಲ್ಲಿ ಸೋರಿಕೆ ಪ್ರಮಾಣ ಜೋರಾಗಿದ್ದು, ದೇವಾಲಯ ಸರಿಪಡಿಸುವಂತೆ ಪುರಾತತ್ವ ಇಲಾಖೆಗೆ ಆಡಳಿತ ಮಂಡಳಿಯವರು ಹಲವು ಬಾರಿ ಪತ್ರ ಬರೆದಿದ್ದರು. ದೇವಾಲಯದಲ್ಲಿ ಸೋರಿಕೆ ಹೆಚ್ಚಿದ್ದಕ್ಕೆ ಸ್ಥಳೀಯರು ಧ್ವನಿಯೆತ್ತಿದ ಪರಿಣಾಮ 2023ರಲ್ಲಿ ಇಲಾಖೆಯ ಹಾವೇರಿ ವಿಭಾಗದ ಸಿಬ್ಬಂದಿ ಅಂದಾಜು ₹10 ಸಾವಿರ ಮೊತ್ತದ ತಾಡಪತ್ರಿ ಹೊದಿಸಿ ಸೋರುವಿಕೆ ತಡೆಯಲು ತಾತ್ಕಾಲಿಕ ಕಾರ್ಯ ಮಾಡಿದ್ದರು.
‘ಆದರೆ ಈ ಬಾರಿ ಕೇವಲ ₹2 ಸಾವಿರ ವೆಚ್ಚಮಾಡಿ ಗರ್ಭಗುಡಿಯ ಮೇಲಷ್ಟೇ ತಾಡಪತ್ರಿ ಹೊದಿಸಲಾಗಿದೆ. ಉಳಿದಂತೆ ದುರಸ್ತಿ ಕಾರ್ಯ ಕೂಡ ನಡೆಸಿಲ್ಲ. ಹೀಗಾಗಿ ಇಡೀ ದೇವಾಲಯ ಒಳಗಿನಿಂದ ಸೋರುತ್ತಿದ್ದು, ಜೋರು ಮಳೆಯಲ್ಲಿ ಛತ್ರಿ ಹಿಡಿದು ಹೋಗುವಂತಾಗಿದೆ. ಪ್ರವೇಶದ್ವಾರದ ಬಳಿಯ ಮಂಟಪವಂತೂ ಶಿಥಿಲಗೊಂಡು ಈಗಲೋ ಆಗಲೋ ಬೀಳುವಂತಿದೆ. ಮಳೆಯ ನೀರು ಹರಿದು ಇಡೀ ಮಂಟಪ ಪಾಚಿಗಟ್ಟಿದೆ. ಎಲ್ಲೆಂದರಲ್ಲಿ ನೀರು ಒಸರುತ್ತಿದ್ದು, ಇದೇ ರೀತಿ ಮುಂದುವರಿದರೆ ಇಡೀ ಸಮುಚ್ಛಯ ಹಾಳು ಕೊಂಪೆಯಂತಾಗುತ್ತದೆ' ಎಂಬುದು ಸ್ಥಳೀಯರ ದೂರಾಗಿದೆ.
ಮಳೆಯ ವೇಳೆ ದೇವಾಲಯದ ಒಳಗೆ ಕುಳಿತುಕೊಳ್ಳಲು ಕಷ್ಟ. ಶಿಲಾಮಯ ಹಾಗೂ ಇತಿಹಾಸ ಪ್ರಸಿದ್ಧ ದೇವಾಲಯದ ಕಟ್ಟಡ ನಿರ್ವಹಿಸುವ ಪದ್ಧತಿ ಇದಲ್ಲ ಎನ್ನುತ್ತಾರೆ ಪ್ರವಾಸಿ ಮಧುಸೂದನ ಯರಗಟ್ಟಿ.
ಮಳೆಗಾಲದಲ್ಲಿ ಸೋರುವಿಕೆ ತಡೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಆದರೆ ದೇವಾಲಯ ನಿರ್ವಹಣೆಗೆ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಈ ಹಿಂದಿನ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದಂತೆ ಸರ್ಕಾರದಿಂದ ₹50 ಲಕ್ಷ ಅನುದಾನ ಬಂದಿಲ್ಲ ಎಂದು ಪುರಾತತ್ವ ಇಲಾಖೆಯ ಸ್ಥಳೀಯ ಅಧಿಕಾರಿ ಕಿರಣ ಭಟ್ ಹೇಳಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.