ಶಿರಸಿ: ‘ಬಿಜೆಪಿಗೆ 40 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿ ವಿಧಾನಸಭೆ ಚುನಾವಣೆ ಗೆದ್ದ ಕಾಂಗ್ರೆಸ್ ಈಗ 70 ಪರ್ಸೆಂಟ್ ಸರ್ಕಾರವಾಗಿ ಬೆಳೆದಿದೆ‘ ಎಂದು ಬಿಜೆಪಿ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ್ ಟೀಕಿಸಿದರು.
ನಗರದ ಗಾಣಿಗರ ಕಲ್ಯಾಣಮಂಟಪದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಬಿಜೆಪಿ ವಿಶೇಷ ಕಾರ್ಯಕಾರಣಿ ಹಾಗೂ ಸದಸ್ಯತಾ ಅಭಿಯಾನ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಧಿಕಾರಕ್ಕೆ ಬಂದ ಐದಾರು ತಿಂಗಳಿನಲ್ಲಿಯೇ ಭ್ರಷ್ಟಾಚಾರ ಆರಂಭಿಸಿ, ಈಗ ಶೇ 70ರಷ್ಟು ಭ್ರಷ್ಟಾಚಾರದ ಸರ್ಕಾರವಾಗಿ ಪರಿಣಮಿಸಿದೆ. ಈಗಾಗಲೇ ಒಬ್ಬ ಸಚಿವರ ತಲೆದಂಡ ಸಹ ಆಗಿದೆ. ಕಾಂಗ್ರೆಸ್ ಸರ್ಕಾರ ಬಹಳ ದಿನ ನಡೆಯುವಂತೆ ಕಾಣುತ್ತಿಲ್ಲ. ಬಿಜೆಪಿ ಬೇರು ಮಟ್ಟದಲ್ಲಿ ಇನ್ನಷ್ಟು ಗಟ್ಟಿಗೊಳ್ಳುವ ಅಗತ್ಯತೆ ಇದೆ‘ ಎಂದರು.
‘ಸಿದ್ಧರಾಮಯ್ಯ ಅವರ ಮುಖ್ಯಮಂತ್ರಿ ಖುರ್ಚಿಯನ್ನು ಯಾರೂ ಅಲುಗಾಡಿಸುತ್ತಿಲ್ಲ. ಡಿ.ಕೆ.ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರೇ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಯತ್ನಿಸುತ್ತಿದ್ದಾರೆ‘ ಎಂದರು.
‘ಸೆ.2ರಿಂದ ಆರಂಭವಾಗುವ ಸದಸ್ಯತ್ವ ಅಭಿಯಾನಕ್ಕೆ ಈಗಿನಿಂದಲೇ ಕಾರ್ಯಕರ್ತರು ಅಣಿಗೊಳ್ಳಬೇಕಿದ್ದು, ಪ್ರತಿ ಬೂತ್‍ನಲ್ಲಿ 15 ದಿನಗಳ ಅವಧಿಯಲ್ಲಿ ಕನಿಷ್ಠ 300 ಸದಸ್ಯರನ್ನು ಮಾಡಬೇಕು. ಜಿಲ್ಲೆಯಲ್ಲಿ ಕನಿಷ್ಠ 3 ಲಕ್ಷ ಸದಸ್ಯರ ನೊಂದಣಿ ಆಗಬೇಕು‘ ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ‘ಕಳೆದ ವರ್ಷದ ಸದಸ್ಯತಾ ಅಭಿಯಾನದಲ್ಲಿ ಜಿಲ್ಲೆಯಲ್ಲಿ 1.25 ಲಕ್ಷ ಜನ ಸದಸ್ಯರಾಗಿ ನೋಂದಣಿಗೊಂಡಿದ್ದರು. ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ 5ರಿಂದ ಇಂದು ಎರಡಕ್ಕಿಳಿದಿದೆ. ಹೀಗಾಗಿ, ಕಾರ್ಯಕರ್ತರ ಶ್ರಮದ ಅಗತ್ಯತೆ ಜಾಸ್ತಿ ಇದೆ. ಮನೆ ಮನೆಗೆ ಭೇಟಿ ನೀಡಿ ಸದಸ್ಯತ್ವ ಅಭಿಯಾನ ನಡೆಸಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಶಾಸಕರಾದ ದಿನಕರ ಶೆಟ್ಟಿ, ಶಾಂತಾರಾಮ ಸಿದ್ದಿ, ಮಾಜಿ ಶಾಸಕರಾದ ಸುನೀಲ ನಾಯ್ಕ, ವಿವೇಕಾನಂದ ವೈದ್ಯ, ಪ್ರಮುಖರಾದ ವೆಂಕಟೇಶ ನಾಯ್ಕ, ಕೆ.ಜಿ.ನಾಯ್ಕ, ಎಂ.ಜಿ.ನಾಯ್ಕ, ಸಂತೋಷ ತಳವಾರ, ಈಶ್ವರ ನಾಯ್ಕ, ವಿನೋದ ನಾಯ್ಕ, ರಾಘವೇಂದ್ರ ಭಟ್ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.