ADVERTISEMENT

ಹೊಂಡಮಯ ನಿಲ್ದಾಣದಲ್ಲಿ ಪ್ರಯಾಣಿಕರ ಗೋಳು

ರಾಜೇಂದ್ರ ಹೆಗಡೆ
Published 2 ಆಗಸ್ಟ್ 2024, 6:26 IST
Last Updated 2 ಆಗಸ್ಟ್ 2024, 6:26 IST
ಶಿರಸಿಯ ಹೊಸ ಬಸ್ ನಿಲ್ದಾಣ ಆವರಣದಲ್ಲಿ ನಿರ್ಮಾಣವಾಗಿರುವ ಬೃಹತ್ ಹೊಂಡಗಳು 
ಶಿರಸಿಯ ಹೊಸ ಬಸ್ ನಿಲ್ದಾಣ ಆವರಣದಲ್ಲಿ ನಿರ್ಮಾಣವಾಗಿರುವ ಬೃಹತ್ ಹೊಂಡಗಳು    

ಶಿರಸಿ: ನಿರ್ವಹಣೆ ಕೊರತೆಯಿಂದ ಆವರಣ ತುಂಬ ಬಿದ್ದಿರುವ ಗುಂಡಿಗಳು, ವಾಹನ ಸಂಚರಿಸಿದರೆ ಎದೆಯೆತ್ತರಕ್ಕೆ ಚಿಮ್ಮುವ ರಾಡಿ, ಓಡಾಡಿದರೆ ಕೆಸರು ಹಾರಿ ಅಂದಗೆಡುವ ಬಟ್ಟೆ... ಹೀಗೆ ಹಲವು ಸಮಸ್ಯೆಗಳಿರುವ ನಗರದ ಬಸ್ ನಿಲ್ದಾಣಗಳ ಅವಸ್ಥೆ ಬಗ್ಗೆ ಪ್ರಯಾಣಿಕರನ್ನು ಕೇಳಿದರೆ ಬೆಚ್ಚಿ ಬೀಳುತ್ತಿದ್ದಾರೆ!

ಪೂರ್ಣಗೊಳ್ಳದ ಇಲ್ಲಿನ ಹಳೆ ಬಸ್ ನಿಲ್ದಾಣದ ಹೊಸ ಕಟ್ಟಡ ಕಾಮಗಾರಿಯಿಂದ ರಸ್ತೆಯೇ ಬಸ್ ನಿಲ್ದಾಣವಾಗಿ ಮಾರ್ಪಟ್ಟಿರುವುದು ಒಂದೆಡೆಯಾದರೆ, ನಿರ್ವಹಣೆ ಕೊರತೆಯಿಂದ ಹೊಂಡಗುಂಡಿಗಳಿಂದ ಕೂಡಿ ಪ್ರಯಾಣಿಕರಿಗೆ ನಿತ್ಯವೂ ಕಿರಿಕಿರಿಗೆ ಕಾರಣವಾಗುತ್ತಿರುವ ಹೊಸ ಬಸ್ ನಿಲ್ದಾಣ ಇನ್ನೊಂದೆಡೆ. ಇವೆರಡೂ ಬಸ್ ನಿಲ್ದಾಣಗಳು ಸದ್ಯ ಪ್ರಯಾಣಿಕರ ಪಾಲಿಗೆ ಸಮಸ್ಯೆಯ ಕೂಪಗಳಾಗಿ ಮಾರ್ಪಟ್ಟಿವೆ. 

ಹಳೆ ಬಸ್ ನಿಲ್ದಾಣ ಕಟ್ಟಡ ತೆರವುಗೊಂಡು ವರ್ಷಗಳು ಕಳೆದರೂ ಹೊಸ ಕಟ್ಟಡ ನಿರ್ಮಾಣ ಪೂರ್ಣಗೊಂಡಿಲ್ಲ. ಹೀಗಾಗಿ ಹೊರಗಡೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಆದರೆ ಯಾವುದೇ ನಿರ್ವಹಣೆಯಿಲ್ಲದ ಕಾರಣ ಇಡೀ ಆವರಣ ಓಡಾಡಲು ಆಗದಂತಾಗಿದೆ.

ADVERTISEMENT

ನಗರದ ಹೊರವಲಯದಲ್ಲಿ ಎರಡು ದಶಕಗಳ ಹಿಂದೆ ನಿರ್ಮಾಣವಾದ ಹೊಸ ಬಸ್ ನಿಲ್ದಾಣ ಸದ್ಯ ನಿರ್ವಹಣೆ ಕೊರತೆಯಿಂದ ಸೊರಗಿದೆ. ಆವರಣದಲ್ಲಿ ಬಿದ್ದ ಹೊಂಡಗಳಿಂದ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ. ವಾಹನಗಳು, ಬಸ್ ಬರುವ ವೇಳೆ ಸಮೀಪವಿದ್ದರೆ ರಾಡಿ ನೀರು ಸಿಡಿದು ಹಲವರು ಸಮಸ್ಯೆ ಅನುಭವಿಸಿದ್ದಾರೆ. ಇದರ ಜತೆ ಆವರಣ ಸಂಪೂರ್ಣ ಜಲ್ಲಿಕಲ್ಲಿನಿಂದ ತುಂಬಿದ್ದು, ಪ್ರಯಾಣಿಕರನ್ನು ಬಸ್ ನಿಲ್ದಾಣದ ಒಳಗೆ ಬಿಡಲು ಬರುವ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದ ಘಟನೆಗಳು ನಡೆಯುತ್ತಿವೆ.

ಈಗಲೂ ಹೊಸ ಬಸ್ ನಿಲ್ದಾಣ ಪೂರ್ಣ ಪ್ರಮಾಣದಲ್ಲಿ ನಿರ್ವಹಿಸಲು ಸಾರಿಗೆ ಸಂಸ್ಥೆ ಇಚ್ಛಾಶಕ್ತಿ ತೋರುತ್ತಿಲ್ಲ ಎಂಬ ದೂರು ಸಾರ್ವಜನಿಕರದ್ದಾಗಿದೆ.

ಹಳೆ ಬಸ್ ನಿಲ್ದಾಣ ಕಟ್ಟಡ ಪೂರ್ಣವಾಗುವವರೆಗೂ ಹೊಸ ಬಸ್ ನಿಲ್ದಾಣವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಸಂಸ್ಥೆ ಮುಂದಾಗುತ್ತಿಲ್ಲ. ಪರಿಣಾಮ ನಿಲ್ದಾಣದ ಚಾವಣಿ ಅಲ್ಲಲ್ಲಿ ಮುರಿದಿದ್ದು, ಮಳೆ ನೀರು ಸೋರಿಕೆಯಾಗುತ್ತಿದೆ. ಇದರಿಂದ ಕಾಂಕ್ರೀಟ್ ಕಂಬಗಳಿಗೆ ಹಾನಿಯುಂಟಾಗುತ್ತಿದೆ. ದೊಡ್ಡ ಮಳೆ ಬಂದರೆ ನಿಲ್ದಾಣದೊಳಗಡೆ ಛತ್ರಿ ಹಿಡಿದು ನಿಲ್ಲುವ ಸ್ಥಿತಿಯಿದೆ.

ಇಲ್ಲಿನ ಹೋಟೆಲ್‌ನ ಕೊಳಚೆ ನೀರನ್ನು ಬಸ್ ನಿಲ್ದಾಣದ ಆವರಣದಲ್ಲಿಯೇ ಬಿಡಲಾಗುತ್ತಿದೆ. ಇದರಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡು ನಿಲ್ಲುವ ಪರಿಸ್ಥಿತಿ ಇದೆ. ನಿಲ್ದಾಣದ ಆಗಮದ ದ್ವಾರದಲ್ಲಿ ದೊಡ್ಡ ಹೊಂಡ ಉಂಟಾಗಿದೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳ ಗಮನಕ್ಕಿದ್ದರೂ ಮೌನವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘ಹಾಲಿ ನಗರದಿಂದ ಹೊಸ ಜಿಲ್ಲೆಗಳಿಗೆ, ಸ್ಥಳೀಯ ಮಾರ್ಗಗಳಿಗೆ ತೆರಳುವ ಬಸ್‌ಗಳು ಹಳೆ ಬಸ್ ನಿಲ್ದಾಣದಿಂದ ಈ ನಿಲ್ದಾಣಕ್ಕೆ ಬಂದು ಹೊರಡುತ್ತವೆ. ನಿತ್ಯ ನೂರಾರು ಬಸ್‌ಗಳು ಓಡಾಟ ನಡೆಸುವ ನಿಲ್ದಾಣದ ಆವರಣದಲ್ಲಿ ದೊಡ್ಡಗಾತ್ರದ ಹೊಂಡಗಳು ಬಿದ್ದಿದ್ದು, ಹಲವು ಬಾರಿ ಪ್ರಯಾಣಿಕರನ್ನು ಒದ್ದೆ ಮಾಡಿವೆ’ ಎನ್ನುತ್ತಾರೆ ಸ್ಥಳೀಯರಾದ ನಾಗೇಶ ನಾಯ್ಕ.

‘ಕಚ್ಚಾ ರಸ್ತೆಗಿಂತಲೂ ಇವೆರಡೂ ನಿಲ್ದಾಣಗಳ ಆವರಣವೇ ಕಳಪೆಯಾಗಿದೆ. ವರ್ಷದಿಂದ ಬಿದ್ದಿರುವ ಹೊಂಡಗಳನ್ನು ಮುಚ್ಚುವ ಕೆಲಸ ನಡೆಸದೆ ನಿರ್ಲಕ್ಷ ತೋರಲಾಗಿದೆ’ ಎಂದು ಆರೋಪಿಸಿದರು.

ಹೊಸ ಬಸ್ ನಿಲ್ದಾಣದ ನಿರ್ವಹಣೆ ಕಾರ್ಯ ಚುರುಕುಗೊಳಿಸಲಾಗುವುದು. ಹೊಂಡಗಳನ್ನು ಮುಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು.
– ಸರ್ವೇಶ್ ಆ‌ರ್., ಕೆಎಸ್ಆರ್‌ಟಿಸಿ ಶಿರಸಿ ಘಟಕದ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.