
ಶಿರಸಿ: 'ಸರ್ಕಾರಿ ಕೆಲಸ ಎಂದರೆ ಕೇವಲ ಕಚೇರಿಯ ಕಡತಗಳ ವಿಲೇವಾರಿಯಲ್ಲ, ಅದು ಸಾರ್ವಜನಿಕರ ಸೇವೆಯ ಹೊಣೆಗಾರಿಕೆ. ಈ ಹಾದಿಯಲ್ಲಿ ಒತ್ತಡ ಸಹಜ, ಆದರೆ ಅದನ್ನು ನಿಭಾಯಿಸಲು ನೌಕರರ ಮಾನಸಿಕ ಮತ್ತು ದೈಹಿಕ ಆರೋಗ್ಯ ಮುಖ್ಯ' ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ತಿಳಿಸಿದರು.
ನಗರದಲ್ಲಿ ಶನಿವಾರ ರಾಜ್ಯ ಸರ್ಕಾರಿ ನೌಕರರ ಉತ್ತರ ಕನ್ನಡ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 'ಕಚೇರಿಯ ಕಡತಗಳ ನಡುವೆ ಕಳೆದುಹೋಗುವ ನೌಕರರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸುವುದು ಇಂದಿನ ಅಗತ್ಯವಾಗಿದೆ. ಸತತವಾಗಿ ಕೆಲಸದಲ್ಲಿ ತೊಡಗುವುದರಿಂದ ಉಂಟಾಗುವ ಆಯಾಸ ದೂರಮಾಡಲು ಕ್ರೀಡಾ ಚಟುವಟಿಕೆಗಳು ಅತ್ಯಂತ ಸಹಕಾರಿ. ಕ್ರೀಡೆಯು ಕೇವಲ ದೇಹವನ್ನು ದೃಢವಾಗಿರಿಸುವುದು ಮಾತ್ರವಲ್ಲದೆ, ಮನಸ್ಸಿಗೆ ನವಚೈತನ್ಯ ನೀಡುತ್ತದೆ ಮತ್ತು ಸಹೋದ್ಯೋಗಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸುತ್ತದೆ' ಎಂದರು.
'ಅನೇಕ ಬಾರಿ ಕೆಲಸದ ಒತ್ತಡದಲ್ಲಿ ನಾವು ನಮ್ಮ ಕುಟುಂಬ ಮತ್ತು ವೈಯಕ್ತಿಕ ಆರೋಗ್ಯವನ್ನು ಕಡೆಗಣಿಸುತ್ತೇವೆ. ಆದರೆ ಸದೃಢ ಸಮಾಜ ನಿರ್ಮಾಣಕ್ಕೆ ಕೆಲಸ ಎಷ್ಟು ಮುಖ್ಯವೋ, ಕುಟುಂಬಕ್ಕೆ ನಾವು ನೀಡುವ ಸಮಯವೂ ಅಷ್ಟೇ ಮುಖ್ಯ. ಕುಟುಂಬದೊಂದಿಗೆ ಕಳೆಯುವ ಗುಣಮಟ್ಟದ ಸಮಯವು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಇದು ಅಂತಿಮವಾಗಿ ಕಚೇರಿಯ ಕೆಲಸದಲ್ಲಿ ದಕ್ಷತೆಯನ್ನು ಹೆಚ್ಚಿಸುತ್ತದೆ' ಎಂದ ಅವರು,' ಪ್ರಸ್ತುತ ಹಲವು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯ ಸವಾಲು ಇರುವುದು ನಿಜ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ಧೃತಿಗೆಡದೆ, ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ' ಎಂದರು.
ಶಾಸಕ ಭೀಮಣ್ಣ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 'ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಅತ್ಯಂತ ದೊಡ್ಡದು. ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ನೌಕರರು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸುವುದು ಅವಶ್ಯಕ. ಕ್ರೀಡಾಕೂಟದಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಕ್ರೀಡಾ ಮನೋಭಾವದಿಂದ ಭಾಗವಹಿಸುವುದು ಮುಖ್ಯ' ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸತೀಶ ನಾಯ್ಕ, ಸಂಘದ ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕದ ಅಧ್ಯಕ್ಷ ಕಿರಣಕುಮಾರ ನಾಯ್ಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ನಾಯಕ, ಸಂಘದ ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷ, ಪದಾಧಿಕಾರಿಗಳು ಹಾಗೂ 500ಕ್ಕೂ ಹೆಚ್ಚು ಸರ್ಕಾರಿ ನೌಕರರು ಉಪಸ್ಥಿತರಿದ್ದರು.
ಕಚೇರಿ ಕೆಲಸದ ಒತ್ತಡದಲ್ಲಿರುವ ಸರ್ಕಾರಿ ನೌಕರರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮನೋಲ್ಲಾಸ ನೀಡುತ್ತವೆ.ಭೀಮಣ್ಣ ನಾಯ್ಕ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.