ಶಿರಸಿ ಬನವಾಸಿ ಮುಖ್ಯ ರಸ್ತೆಯಲ್ಲಿ ಹರಿಯುತ್ತಿರುವ ಚರಂಡಿ ನೀರು
ಶಿರಸಿ: ಮಳೆಗಾಲಪೂರ್ವ ಹಾಗೂ ನಂತರದಲ್ಲಿ ನಗರಸಭೆ ವತಿಯಿಂದ ಚರಂಡಿಗಳ ಸ್ವಚ್ಛತೆ ಕೈಗೊಳ್ಳದ ಕಾರಣಕ್ಕೆ ಕೊಳಚೆ ನೀರು ರಸ್ತೆ ಬದಿಯಲ್ಲಿ ಕೆರೆಯಂತೆ ನಿಂತಿದೆ. ಕೆಲವೆಡೆ ರಸ್ತೆಯಲ್ಲಿ ಕೊಳಚೆ ಹರಿಯುತ್ತಿದ್ದು, ಇದು ದುರ್ನಾತ ಬೀರುತ್ತಿದೆ. ಇದರಿಂದ ಜನರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ.
ಶಿರಸಿ– ಬನವಾಸಿ ರಸ್ತೆಯಲ್ಲಿ ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ರಸ್ತೆಯುದ್ದಕ್ಕೂ ರಾಮನಬೈಲ್ ಕ್ರಾಸ್‍ನಿಂದ ಅರಣ್ಯ ಮಹಾವಿದ್ಯಾಲಯದವರೆಗೆ ಇರುವ ಚರಂಡಿಯಲ್ಲಿನ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಮಳೆಗಾಲದಲ್ಲಂತೂ ಮಳೆಯ ನೀರಿನ ಜತೆಗೆ ಚರಂಡಿ ನೀರು ರಸ್ತೆಯಲ್ಲಿ ಹರಿಯುವ ಕಾರಣಕ್ಕೆ ವಾಹನಗಳ ಓಡಾಟಕ್ಕೂ ತೀವ್ರ ತೊಂದರೆ ಉಂಟಾಗುತ್ತಿತ್ತು. ಪ್ರಸ್ತುತ ಮಳೆ ಕಡಿಮೆಯಾಗಿದ್ದು, ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಈ ರಸ್ತೆಯಲ್ಲಿ ಓಡಾಡುವ ಪಾದಚಾರಿಗಳಿಗೆ, ದ್ವಿಚಕ್ರ ವಾಹನ ಸವಾರರಿಗೆ ಕೊಳಚೆ ನೀರು ಸಿಡಿಯುತ್ತಿದೆ. ಇದರಿಂದ ಸಾರ್ವಜನಿಕರ ಜತೆ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.
‘ಅನೇಕ ತಿಂಗಳಿನಿಂದಲೂ ಈ ಸಮಸ್ಯೆ ಇದ್ದು, ನಗರಸಭೆ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನೋಡಿದರೂ ನೋಡದಂತೆ ಹೋಗುತ್ತಿದ್ದಾರೆ. ಯಾವುದೇ ಕ್ರಮ ಕೈಗೊಳ್ಳದಿರುವುದು ದುರಂತ’ ಎಂದು ಜನರು ಕಿಡಿಕಾರಿದ್ದಾರೆ.
‘ನೀರು ದೀರ್ಘಕಾಲದಿಂದ ನಿಂತಿರುವುದರಿಂದ ಆ ಪ್ರದೇಶ ಸೊಳ್ಳೆಗಳ ಉತ್ಪತ್ತಿ ತಾಣವಾಗಿ, ಅಲ್ಲಲ್ಲಿ ಲಾರ್ವ ತಿಳಿ ನೀರಿನಲ್ಲಿ ತೇಲಾಡುತ್ತಿವೆ. ಸೊಳ್ಳೆಗಳ ಕಾಟ ತಡೆಯಲಾಗುತ್ತಿಲ್ಲ. ಸೊಳ್ಳೆ ಪರದೆ ಇಲ್ಲದೆ ಮಲಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ’ ಎಂದು ಚರಂಡಿ ಪಕ್ಕದ ನಿವಾಸಿ ವಾಸುದೇವ ಹೆಗಡೆ ದೂರಿದ್ದಾರೆ.
‘ಈ ರಸ್ತೆ ಬಳಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ತೋಟಗಾರಿಕೆ ಹಾಗೂ ಅರಣ್ಯ ಕಾಲೇಜ್ ವಿದ್ಯಾರ್ಥಿಗಳು ನಿತ್ಯ ಸಂಚರಿಸುತ್ತಾರೆ. ಕೆಲವೊಮ್ಮೆ ನೀರು ಸಿಡಿದು ವಾಪಸ್ ಮನೆಗೆ ತೆರಳುವ ಸ್ಥಿತಿ ಇದೆ. ನೇರವಾಗಿ ತೆರೆದ ಚರಂಡಿಗೆ ಬಿಡುವ ಶೌಚಾಲಯ, ಸ್ನಾನ ಗೃಹಗಳ ನೀರು ತಿಂಗಳಿಂದ ಅಲ್ಲೇ ಇದ್ದು, ಸಾಂಕ್ರಾಮಿಕ ರೋಗ ಹರಡುವ ಕೇಂದ್ರಗಳಾಗಿವೆ’ ಎಂಬುದು ಈ ರಸ್ತೆಯಲ್ಲಿ ಸಂಚರಿಸುವವರ ಆರೋಪವಾಗಿದೆ.
ಅವ್ಯವಸ್ಥೆ ಸರಿಪಡಿಸಲು ಒತ್ತಾಯ
ಮುಖ್ಯ ರಸ್ತೆ ಚರಂಡಿಗಳಲ್ಲಿ ಸಾಕಷ್ಟು ಹೂಳು ತುಂಬಿದ್ದು ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅದನ್ನು ಸರಿಪಡಿಸದೇ ವಿಫಲವಾಗಿರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಚರಂಡಿಯ ನೀರು ಸಮರ್ಪಕವಾಗಿ ಹರಿದು ಹೋಗಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಸಮಸ್ಯೆ ಕುರಿತು ನಗರಸಭೆಗೆ ಸಾಕಷ್ಟು ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಪ್ರತಿಭಟನೆಗೆ ಇಳಿಯುವುದೊಂದೇ ಬಾಕಿ ಉಳಿದಿದೆ- ವರದಾ ನಾಯ್ಕ, ಬನವಾಸಿ ರಸ್ತೆ ನಿವಾಸಿ
ಸಮಸ್ಯೆ ನಮ್ಮ ಗಮನಕ್ಕೆ ಬಂದಿದ್ದು ಶೀಘ್ರವೇ ಚರಂಡಿ ಹೂಳೆತ್ತಿ ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಡಲಾಗುವುದು- ಶರ್ಮಿಳಾ ಮಾದನಗೇರಿ, ನಗರಸಭೆ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.